ಮಂಗಳೂರು: ರೌಡಿ ಶೀಟರ್ ಕಡಪ್ಪರ ಸಮೀರ್ ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪೊಲೀಸ್ ತಂಡ ರಚನೆ

Update: 2024-08-12 17:12 GMT

ಉಳ್ಳಾಲ, ಆ.12: ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಬಳಿ ರೌಡಿ ಶೀಟರ್ ಮುಕ್ಕಚ್ಚೇರಿಯ ಸಮೀರ್ ಯಾನೆ ಕಡಪ್ಪರ ಸಮೀರ್ (33) ಎಂಬಾತನನ್ನು ದುಷ್ಕರ್ಮಿಗಳ ತಂಡವೊಂದು ಮಾರಕಾಯುಧಗಳಿಂದ ಕೊಚ್ಚಿ ಕೊಲೆಗೈದ ಘಟನೆ ರವಿವಾರ ನಡೆದಿರುವುದು ವರದಿಯಾಗಿದೆ.

ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಯಾಗಿದ್ದ ಸಮೀರ್ ಮುಕ್ಕಚ್ಚೇರಿಯಿಂದ ಗೋರಿಗುಡ್ಡೆಯಲ್ಲಿರುವ ತನ್ನ ಸಹೋದರನ ಮನೆಗೆ ತಾಯಿ ಮತ್ತು ಪತ್ನಿ ಸಹಿತ ಇತರ ಇಬ್ಬರು ಮಕ್ಕಳೊಂದಿಗೆ ತೆರಳುತ್ತಿದ್ದಾಗ ದಾರಿಮಧ್ಯೆ ಊಟಕ್ಕೆ ಕಲ್ಲಾಪಿನ ರೆಸ್ಟೊರೆಂಟ್ ಬಳಿ ಬರುವಂತೆ ಯಾರೋ ಆತನಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ.

ಅದರಂತೆ ರೆಸ್ಟೊರೆಂಟ್ ಬಳಿ ಕಾರ್‌ನಿಂದ ಇಳಿಯುತ್ತಿದ್ದಂತೆಯೇ ಅಲ್ಲಿ ಮೊದಲೇ ಸಿದ್ಧರಾಗಿ ನಿಂತಿದ್ದ ತಂಡವು ಸಮೀರ್‌ನ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಅಪಾಯದ ಮುನ್ಸೂಚನೆ ಅರಿತ ಸಮೀರ್ ತಪ್ಪಿಸಿಕೊಳ್ಳಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಬೆನ್ನಟ್ಟಿಕೊಂಡು ಹೋದ ತಂಡವು ಸಮೀರ್‌ನನ್ನು ತಲವಾರಿನಿಂದ ಕೊಂದು ಪರಾರಿಯಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಪೊಲೀಸರು ತಿಳಿಸಿದ್ದಾರೆ.

ಸಮೀರ್‌ನ ತಾಯಿ ಮತ್ತು ಪತ್ನಿಯ ಕಣ್ಮುಂದೆಯೇ ಈ ಘಟನೆ ನಡೆದಿದೆ. 

ರೌಡಿ ಶೀಟರ್ ಆಗಿರುವ ಸಮೀರ್ ವಿರುದ್ಧ ಉಳ್ಳಾಲ ಸಹಿತ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿವೆ. ದರೋಡೆ ಪ್ರಕರಣವೊಂದರಲ್ಲಿ ಸಮೀರ್ ಇತ್ತೀಚೆಗೆ ಜೈಲು ಪಾಲಾಗಿದ್ದ. ಜು.1ರಂದು ಮಂಗಳೂರಿನ ಜೈಲಿನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಸಮೀರ್ ವಿರುದ್ಧ ಕೇಸು ದಾಖಲಾಗಿತ್ತು. ಕೆಲವು ದಿನಗಳ ಹಿಂದೆ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆ ಹೊಂದಿದ್ದ. 2018ರಲ್ಲಿ ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಈತನನ್ನು 2023ರಲ್ಲಿ ನ್ಯಾಯಾಲಯ ಖುಲಾಸೆಗೊಳಿಸಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರವಿವಾರ ರಾತ್ರಿ ಸುಮಾರು 9:30ಕ್ಕೆ ತಾನು ತನ್ನ ಗಂಡ ಸಮೀರ್, ಅತ್ತೆ ಜಮೀಲಾ ಮತ್ತು ಇತರ ಇಬ್ಬರು ಮಕ್ಕಳ ಜೊತೆ ಕಾರಿನಲ್ಲಿ ಮುಕ್ಕಚೇರಿಯ ಮನೆಯಿಂದ ಗೋರಿಗುಡ್ಡದಲ್ಲಿರುವ ಸಮೀರ್‌ನ ಸಹೋದರನ ಮನೆಗೆ ತೆರಳುತ್ತಿದ್ದಾಗ ತೊಕ್ಕೊಟ್ಟು ಜಂಕ್ಷನ್ ಬಳಿ ತಲುಪಿದೆವು. ಅಷ್ಟರಲ್ಲಿ ಸಮೀರ್‌ಗೆ ಯಾರೋ ಒಬ್ಬರು ಫೋನ್ ಮಾಡಿ ಕಲ್ಲಾಪುವಿನ ರೆಸ್ಟೋರೆಂಟ್ ಬಳಿ ಬರುವಂತೆ ತಿಳಿಸಿದ. ಅದರಂತೆ ರಾತ್ರಿ 10ಕ್ಕೆ ರೆಸ್ಟೋರೆಂಟ್ ಬಳಿ ಕಾರನ್ನು ನಿಲ್ಲಿಸಿದ ಸಮೀರ್ ನಡೆದುಕೊಂಡು ಕಾರಿನ ಹಿಂದಕ್ಕೆ ಹೋಗುತ್ತಿದ್ದಾಗ ಇನ್ನೊಂದು ಕಾರಿನಲ್ಲಿದ್ದ 5 ಮಂದಿ ಇಳಿದು ಸಮೀರ್‌ಗೆ ಅವಾಚ್ಯ ಶಬ್ದದಿಂದ ಬೈದಿದ್ದಾರೆ. ಈ ಪೈಕಿ ನೌಶಾದ್ ಮತ್ತಿತರ ನಾಲ್ಕು ಮಂದಿ ತಲವಾರುಗಳನ್ನು ಹಿಡಿದುಕೊಂಡು ಕಡಿಯಲು ಬಂದಾಗ ಸಮೀರ್ ತಪ್ಪಿಸಿದ್ದಾರೆ. ಆವಾಗ ಇನ್ನೊಬ್ಬ ಆರೋಪಿ ಅಡ್ಡಬಂದು ತಡೆದಿದ್ದು, ಅವನಿಂದಲೂ ತಪ್ಪಿಸಿಕೊಂಡು ಸಮೀರ್ ಓಡಿ ಪರಾರಿಯಾಗುವಾಗ ಆರೋಪಿಗಳು ಬೆನ್ನಟ್ಟಿಕೊಂಡು ತಲವಾರುಗಳಿಂದ ಕಡಿದು ಗಂಭೀರ ಗಾಯಗೊಳಿಸಿ ಕೊಲೆ ಮಾಡಿರುತ್ತಾರೆ ಎಂದು ಕೊಲೆಯಾದ ಸಮೀರ್‌ ಪತ್ನಿ ಸುಮಯ್ಯ ನೀಡಿರುವ ದೂರಿನಂತೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಗಳ ಬಂಧನಕ್ಕೆ ಪೊಲೀಸ್ ತಂಡ ರಚಿಸಲಾಗಿದೆ. ವಿಚಾರಣೆಗಾಗಿ ಹಲವರನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ಈವರೆಗೆ ಯಾರನ್ನು ಬಂಧಿಸಲಾಗಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News