ಪಣಂಬೂರು , ತಣ್ಣೀರುಭಾವಿ ಬೀಚ್‌ನಲ್ಲಿ ಕೋಸ್ಟ್ ಗಾರ್ಡ್ ನೇತೃತ್ವದಲ್ಲಿ ಮೆಗಾ ಸ್ವಚ್ಛತಾ ಅಭಿಯಾನ

Update: 2023-10-01 10:41 GMT

ಮಂಗಳೂರು , ಅ.1: ಪರಿಸರ ಸಂರಕ್ಷಣೆಯ ಉದ್ದೇಶದೊಂದಿಗೆ ಕೋಸ್ಟ್ ಗಾರ್ಡ್ ಜಿಲ್ಲಾ ಕೇಂದ್ರ (ಕರ್ನಾಟಕ) ನೇತೃತ್ವದಲ್ಲಿ ಪಣಂಬೂರು ಮತ್ತು ತಣ್ಣೀರುಭಾವಿ ಬೀಚ್‌ನಲ್ಲಿ ಮೆಗಾ ಸ್ವಚ್ಛತಾ ಅಭಿಯಾನ ‘ಸ್ವಚ್ಛ ಪಕ್ವಾಡ ’ಸ್ವಚ್ಛತಾ ಹಿ ಸೇವಾ’ ನಡೆಯಿತು.

ಐಟಿಬಿಪಿ,ಸಿಐಎಸ್‌ಎಫ್, ಸರಕಾರಿ ಶಾಲಾ-ಕಾಲೇಜುಗಳು, ಸರ್ಫ್ ಕ್ಲಬ್, ಮತ್ತು ಲಯನ್ಸ್ ಕ್ಲಬ್, ಮಂಗಳೂರು ಸೇರಿದಂತೆ ವಿವಿಧ ಸಂಸ್ಥೆಗಳ 700 ಮಂದಿ ಭಾಗವಹಿಸಿದ್ದರು.

ನಮ್ಮ ಕರಾವಳಿ ಪ್ರದೇಶಗಳ ನೈಸರ್ಗಿಕ ಸೌಂದರ್ಯವನ್ನು ಸಂರಕ್ಷಿಸುವ ,ಕಡಲತೀರಗಳಲ್ಲಿ ಸ್ವಚ್ಛತೆ ಮತ್ತು ಮರ ನೆಡುವ ಮೂಲಕ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೈಗೊಳ್ಳಲಾದ ಅಭಿಯಾನಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್ ಆಯುಕ್ತ ಅಗರವಾಲ್ ಅವರು ಕೋಸ್ಟ್ ಗಾರ್ಡ್ ಅಭಿಯಾನದ ನೇತೃತ್ವ ವಹಿಸಿಕೊಂಡಿರುವುದು ಶ್ಲಾಘಿನೀಯ . ಸ್ವಚ್ಛತೆ ಮತ್ತು ಸೌಂದರ್ಯವನ್ನು ಕಾಪಾಡುವಲ್ಲಿ ಸಮುದಾಯ-ಚಾಲಿತ ಪ್ರಯತ್ನಗಳ ಮಹತ್ವವನ್ನು ವಿವರಿಸಿದರು.

ಕರ್ನಾಟಕದ ಕೋಸ್ಟ್ ಗಾರ್ಡ್ ಜಿಲ್ಲಾ ಪ್ರಧಾನ ಕಚೇರಿಯ ಡಿಐಜಿ ಪಿಕೆ ಮಿಶ್ರಾ ಅವರು ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಉದ್ದೇಶಕ್ಕಾಗಿ ಅವರ ಅಚಲ ಬದ್ಧತೆಗಾಗಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಈ ಬೃಹತ್ ಸ್ವಚ್ಛತಾ ಅಭಿಯಾನವು ಕೇವಲ ಒಂದು ಬಾರಿಯ ಪ್ರಯತ್ನವಾಗಿರದೆ ಕರಾವಳಿ ಪರಿಸರವನ್ನು ಕಾಪಾಡಲು ಕರಾವಳಿ ರಕ್ಷಣಾ ಪಡೆ ಜಿಲ್ಲಾ ಕೇಂದ್ರ (ಕರ್ನಾಟಕ) ತೋರಿದ ಬದ್ಧತೆಯ ಮುಂದುವರಿಕೆಯಾಗಿದೆ. ನಮ್ಮ ನೈಸರ್ಗಿಕ ಪರಿಸರದ ಸ್ವಚ್ಛತೆ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳುವ ನಾಗರಿಕರಿಗೆ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಮಿಶ್ರಾ ಹೇಳಿದರು.

ಪಣಂಬೂರು ಮತ್ತು ತಣ್ಣೀರುಭಾವಿ ಬೀಚ್‌ನಲ್ಲಿ ನಡೆದ ಸ್ವಚ್ಛತಾ ಅಭಿಯಾದಲ್ಲಿ ಸಮುದ್ರದ ದಡದಲ್ಲಿರುವ ಕಸ, ಪ್ಲಾಸ್ಟಿಕ್, ತ್ಯಾಜ್ಯಗಳನ್ನು ನಿರ್ಮೂಲನೆಗೊಳಿಸಲಾಯಿತು.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News