ಹೆಸರಿಗಷ್ಟೇ ಅಲ್ಪಸಂಖ್ಯಾತರ ಶಾಲೆ, ಪ್ರವೇಶದಲ್ಲಿ ಇತರರೇ ಮೇಲುಗೈ

Update: 2024-01-08 06:29 GMT

ಮಂಗಳೂರು: ನಗರ ಹೊರವಲಯದ ಕೊಣಾಜೆ ಸಮೀಪದ ಅಸೈಗೋಳಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ನಡೆಸಲ್ಪಡುವ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿನಿಯರಿಗಿಂತ ಇತರ ಸಮುದಾಯಗಳ ವಿದ್ಯಾರ್ಥಿನಿಯರು ಅಧಿಕ ಸಂಖ್ಯೆಯಲ್ಲಿ ಸೇರ್ಪಡೆಗೊಂಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಈ ಶಾಲೆಗೆ 250 ಮಂದಿಗೆ ಸೇರ್ಪಡೆಗೆ ಅವಕಾಶ ಇದೆ. 2023-24ನೇ ಸಾಲಿನಲ್ಲಿ 202 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದಾರೆ. ಈ ಪೈಕಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿನಿಯರ ಸಂಖ್ಯೆ ಕೇವಲ 71 ಇದ್ದರೆ, ಇತರೆ ಸಮುದಾಯದ 131 ವಿದ್ಯಾರ್ಥಿನಿಯರು ಇರುವುದಾಗಿ ಇಲಾಖೆಯ ದಾಖಲೆಗಳು ಸ್ಪಷ್ಟಪಡಿಸಿವೆ.

ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿರುವ ಈ ಶಾಲೆಯ ಖರ್ಚು ವೆಚ್ಚ ಸಹಿತ ಸಂಪೂರ್ಣ ನಿರ್ವಹಣೆ ಅಲ್ಪಸಂಖ್ಯಾತರ ಇಲಾಖೆಯದ್ದಾಗಿದೆ. ಆದರೆ ಶಾಲೆಯಲ್ಲಿ ಶೇ.64.85 ಮಂದಿ ಇತರ ಸಮುದಾಯದವರು ಮತ್ತು ಶೇ.35.14 ಅಲ್ಪಸಂಖ್ಯಾತರಿದ್ದಾರೆ. ಸರಕಾರದ ನಿಯಮದ ಪ್ರಕಾರ ಈ ರೀತಿ ಸೇರ್ಪಡೆಗೆ ಅವಕಾಶ ಇಲ್ಲ. ಆದರೆ ಇಲ್ಲಿನ ಅಧಿಕಾರಿಗಳು ಸರಕಾರದ ನಿಯಮವನ್ನು ಗಾಳಿಗೆ ತೂರಿರುವ ಆರೋಪ ಕೇಳಿ ಬಂದಿದೆ.

ಸರಕಾರದ ನಿಯಮ ಪ್ರಕಾರ ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲಿ ಶೇ.75 ಮಂದಿ ಅಲ್ಪಸಂಖ್ಯಾತರಿಗೆ ಮತ್ತು ಉಳಿದ ಶೇ.25 ಸೀಟ್‌ಗಳಿಗೆ ಇತರೆ ಸಮುದಾಯದವರಿಗೆ ನೀಡಲು ಅವಕಾಶ ಇದೆ. ಆದರೆ ಇಲ್ಲಿ ಇತರ ಸಮುದಾಯದ ವಿದ್ಯಾರ್ಥಿನಿಯರ ಸೇರ್ಪಡೆಗೆ ಹೆಚ್ಚು ಅವಕಾಶ ನೀಡಿರುವುದು ಸಂದೇಹಗಳಿಗೆಕಾರಣವಾಗಿದೆ.

ಇಂತಹ ಶಾಲೆಗಳಿಗೆ ಪ್ರವೇಶಾತಿಯ ಬಗ್ಗೆ ಸರಿಯಾದ ಮಾಹಿತಿ ಮತ್ತು ಪ್ರಚಾರವನ್ನು ನೀಡದ ಹಿನ್ನೆಲೆಯಲ್ಲಿ ಹಾಗೂ ಪೋಷಕರಿಗೆ ಮಾಹಿ ತಿಯ ಕೊರತೆಯಿಂದಾಗಿ ಇಂತಹ ಶಾಲೆಗಳಲ್ಲಿ ಅವಕಾಶ ವಂಚಿತರಾಗುತ್ತಾರೆ ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಅತ್ಯಧಿಕ ಅಲ್ಪಸಂಖ್ಯಾತರ ಜನಸಂಖ್ಯೆ ಇರುವ ಜಿಲ್ಲೆಗಳಲ್ಲಿ ಒಂದಾಗಿರುವ ದ.ಕ.ಜಿಲ್ಲೆಯು ಸುಶಿಕ್ಷಿತರ ಜಿಲ್ಲೆಯಲ್ಲಿ ಒಂದಾಗಿವೆ. ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಡಾ.ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಅಲ್ಪಸಂಖ್ಯಾತರ ಕಡಿಮೆ ಪ್ರವೇಶಾತಿಗೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ.

2022-23ನೇ ಸಾಲಿನ ಎಸೆಸೆಲ್ಸಿ ಫಲಿತಾಂಶದಲ್ಲಿ ಈ ಶಾಲೆ ಶೇ.95.83 ಸಾಧನೆ ಮಾಡಿತ್ತು. 24 ಮಂದಿ ಪರೀಕ್ಷೆ ಬರೆದಿದ್ದು, ಆ ಪೈಕಿ 23 ಮಂದಿ ಉತ್ತೀರ್ಣರಾಗಿದ್ದರು. ಅದರಲ್ಲಿ 2 ವಿಶಿಷ್ಟ ಶ್ರೇಣಿ, 15 ಪ್ರಥಮ, 5 ದ್ವಿತೀಯ, 1 ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.

ಪಿಯುಸಿ ಕಾಲೇಜಿನ ಸ್ಥಿತಿ ಭಿನ್ನವಾಗಿಲ್ಲ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲೇ ಅಸೈಗೋಳಿಯಲ್ಲಿ ಇರುವ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಪದವಿ ಪೂರ್ವ ವಸತಿ ಕಾಲೇಜಿನ ಸ್ಥಿತಿ ಕೂಡಾ ಭಿನ್ನವಾಗಿಲ್ಲ. ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿಗೆ ತಲಾ 80ರಂತೆ 160 ವಿದ್ಯಾರ್ಥಿನಿಯರಿಗೆ ಪ್ರವೇಶಾತಿಗೆ ಅವಕಾಶವಿದ್ದರೂ ಪ್ರವೇಶ ಪಡೆದವರ ಸಂಖ್ಯೆ 93. ಈ ಪೈಕಿ ಅಲ್ಪಸಂಖ್ಯಾತರು 52 ಮತ್ತು ಇತರ ಸಮುದಾಯದವರು 41 ಮಂದಿ ಸೇರ್ಪಡೆಯಾಗಿದ್ದಾರೆ.

ಕಳೆದ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಕಾಲೇಜು ಶೇ.100 ಸಾಧನೆ ಮಾಡಿತ್ತು. ಪರೀಕ್ಷೆ ಬರೆದ 29 ಮಂದಿಯ ಪೈಕಿ 11 ಮಂದಿ ಡಿಸ್ಟಿಂಕ್ಷನ್, 18 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.

ಜಿಲ್ಲೆಯಲ್ಲಿ 8 ಮೌಲಾನಾ ಆಝಾದ್ ಶಾಲೆಗಳಿವೆ. ಅವುಗಳಲ್ಲಿ 2,400 ಮಂದಿಗೆ ಸೇರ್ಪಡೆಗೆ ಅವಕಾಶ ಇದೆ. ಆದರೆ ದಾಖಲಾದವರು 930 ಮಂದಿ. ಅದರಲ್ಲಿ 481 ಬಾಲಕರು ಮತ್ತು 435 ಬಾಲಕಿಯರ ಸಹಿತ 916 ವಿದ್ಯಾರ್ಥಿನಿಯರಿದ್ದಾರೆ. ಈ ಶಾಲೆಗಳಲ್ಲಿ ಕಳೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ 263 ಮಂದಿ ಹಾಜರಾಗಿದ್ದರು. ಈ ಪೈಕಿ 192 ಮಂದಿ ಉತ್ತೀರ್ಣರಾಗಿ ಶೇ.73 ಫಲಿತಾಂಶ ಪಡೆದಿತ್ತು. ಪುತ್ತೂರಿನ ಮೌಲಾನ ಆಝಾದ್ ಮಾದರಿ ಶಾಲೆ ಶೇ.93.88 ಫಲಿತಾಂಶ ದಾಖಲಿಸಿತ್ತು.

►ನಗರದ ಕುದ್ರೋಳಿಯ ಮೌಲಾನ ಆಝಾದ್ ಮಾದರಿ ಶಾಲೆ ಕನಿಷ್ಠ ಶೇ.37.50 ಫಲಿತಾಂಶ ಗಳಿಸಿತ್ತು. ನಗರದ ಹೃದಯ ಭಾಗದಲ್ಲೇ ಇರುವ ಹಾಗೂ ಅಲ್ಪಸಂಖ್ಯಾತರು ಹೆಚ್ಚಿನ ಪ್ರಮಾಣದಲ್ಲಿ ನೆಲೆಸಿರುವ ಕುದ್ರೋಳಿಯಲ್ಲಿರುವ ಈ ಶಾಲೆಯಲ್ಲಿ ಇಷ್ಟೊಂದು ಕಳಪೆ ಫಲಿತಾಂಶ ಬಂದಿರುವುದು ಸ್ಥಳೀಯರಲ್ಲಿ ಆಶ್ಚರ್ಯ ಹುಟ್ಟಿಸಿದೆ. ಮೌಲಾನಾ ಆಝಾದ್ ಶಾಲೆಗಳಲ್ಲಿ ಖಾಯಂ ಶಿಕ್ಷಕರ ಕೊರತೆ ಒಂದೆಡೆಯಾದರೆ, ಅತಿಥಿ ಶಿಕ್ಷಕರಿಗೆ ಕಡಿಮೆ ಸಂಬಳ ಇರುವುದರಿಂದ ಪಾಠ ಮಾಡಲು ಯಾರೂ ಮುಂದೆ ಬಾರದಿರುವುದು ಇನ್ನೊಂದು ಸಮಸ್ಯೆಯಾ ಗಿದೆ. ಇದನ್ನು ಪರಿಹರಿಸಲು ಇಲಾಖೆಯ ಇಚ್ಛಾಶಕ್ತಿ ಕೊರತೆಯೂ ಎದ್ದು ಕಾಣುತ್ತದೆ ಎಂದು ನಿವೃತ್ತ ಶಿಕ್ಷಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಸೌಲಭ್ಯ ಪಡೆಯುವವರಿಲ್ಲ....

ಇನ್ನೊಂದೆಡೆ ಕೊಣಾಜೆ ಸಮೀಪದ ಅಸೈ ಮದಕದಲ್ಲಿ ಬಾಲಕರ ಸರಕಾರಿ ಮುಸ್ಲಿಮ್ ವಸತಿ ಶಾಲೆ ಇದೆ. ಇಲ್ಲಿ 250 ಮಂದಿಗೆ ಸೇರ್ಪಡೆಯಾಗಲು ಅವಕಾಶ ಇದ್ದರೂ ಸೇರ್ಪಡೆಗೊಂಡಿರುವ ವಿದ್ಯಾರ್ಥಿಗಳ ಸಂಖ್ಯೆ 67. ಇಲ್ಲಿ ಎಲ್ಲ ವ್ಯವಸ್ಥೆ ಇದ್ದರೂ ಕೂಡ ಸರಕಾರದ ವ್ಯವಸ್ಥೆಯೆಂಬ ತಾತ್ಸಾರ ಅಥವಾ ಪ್ರಚಾರದ ಕೊರತೆಯಿಂದಾಗಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಶಾಲೆಯಲ್ಲಿ 2022-23ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ.

ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಹಾಸ್ಟೆಲ್ ಹೊಂದಿರುವ ಈ ಶಾಲೆಗೆ ಸರಕಾರವು ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದರೂ ಶಾಲೆಯ ಪ್ರಯೋಜನ ಪಡೆಯಲು ಹೆಚ್ಚಿ ನವರು ಆಸಕ್ತಿ ವಹಿಸದಿರುವುದು ವಿಪರ್ಯಾಸ.

ಹಿಂದೆ ಈ ಶಾಲೆ ನಾಟೆಕಲ್ ಮುಖ್ಯರಸ್ತೆಯಲ್ಲಿ ಬಾಡಿಗೆ ಕಟ್ಟಡದಲ್ಲಿದ್ದಾಗ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಿಳವಿತ್ತು. ಅಸೈ ಮದಕದಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಗಿದ್ದರೂ ತೀರಾ ಒಳಪ್ರದೇಶವಾದ ಕಾರಣ ಪ್ರವೇಶಾತಿ ಪಡೆಯಲು ಬರುವಾಗಲೇ ವಿದ್ಯಾರ್ಥಿಗಳು ಮಾತ್ರವಲ್ಲ ಹೆತ್ತವರು/ಪೋಷಕರು ಕೂಡ ಆತಂಕಿತರಾಗುತ್ತಾರೆ ಎನ್ನಲಾಗುತ್ತಿದೆ. ಮನೆ ಬಾಗಿಲಿಗೆ ಖಾಸಗಿ ಶಾಲೆಗಳ ವಾಹನಗಳು ಬಂದು ಮಕ್ಕಳನ್ನು ಕರೆದುಕೊಂಡು ಹೋಗುವ ಇಂದಿನ ಕಾಲದಲ್ಲಿ ಸರಿಯಾದ ರಸ್ತೆ, ವಾಹನ ಸಂಚಾರವಿಲ್ಲದ ಪ್ರದೇಶದಲ್ಲಿ ಶಾಲಾ ಕಟ್ಟಡ ನಿರ್ಮಿಸಿದರೆ ಬರುವವರಾರು?.ಜನವಸತಿ ಇರುವ ಸೂಕ್ತ ಸ್ಥಳದಲ್ಲಿ ಮುಂದಾಲೋಚನೆಯಿಂದ ಕಟ್ಟಡ ನಿರ್ಮಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಈ ವಿಚಾರ ಈಗಷ್ಟೇ ನನ್ನ ಗಮನಕ್ಕೆ ಬಂತು. ಆದರೆ ಈವರೆಗೆ ಯಾವೊಬ್ಬ ವಿದ್ಯಾರ್ಥಿನಿಯರು ಅಥವಾ ಹೆತ್ತವರು ಸೀಟು ಸಿಕ್ಕಿಲ್ಲ ಎಂದು ನನಗೆ ದೂರು ಕೊಟ್ಟಿಲ್ಲ. ಆದರೂ ಕೂಡ ಈ ವಸತಿ ಶಾಲೆಗೆ ಎಷ್ಟು ಅರ್ಜಿಗಳು ಬಂದಿವೆ? ಎಷ್ಟು ತಿರಸ್ಕರಿಸಲಾಗಿದೆ ಎಂಬುದರ ಬಗ್ಗೆ ವಿವರವಾದ ವರದಿ ತರಿಸಿಕೊಂಡು ಮುಂದಿನ ಕ್ರಮ ಜರುಗಿಸಲಾಗುವುದು.

ಯು.ಟಿ.ಖಾದರ್

ಸ್ಪೀಕರ್, ರಾಜ್ಯ ವಿಧಾನಸಭೆ

ಅಸೈಗೋಳಿಯ ಡಾ.ಎಪಿಜೆ ಅಬ್ದುಲ್ ಕಲಾಂ ವಿದ್ಯಾರ್ಥಿನಿಯರ ವಸತಿ ಶಾಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿನಿಯರಿಗೆ ಯಾರಿಗೂ ಅವಕಾಶ ನಿರಾಕರಿಸಲಾಗಿಲ್ಲ. ಅರ್ಜಿ ಸಲ್ಲಿಸಿದವರಿಗೆಲ್ಲ ಪ್ರವೇಶ ನೀಡಲಾಗಿದೆ. ನಾನು ಅಧಿಕಾರ ವಹಿಸುವ ಹೊತ್ತಿಗೆ ಇಲ್ಲಿ ಸೇರ್ಪಡೆ ಪ್ರಕ್ರಿಯೆ ಮುಗಿದಿತ್ತು. ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾರ್ಥಿನಿಯರ ಸಂಖ್ಯೆ ಇಲ್ಲಿ ಕಡಿಮೆ ಇರುವುದು ನಿಜ. ಮುಂದೆ ಇದನ್ನು ಸರಿಪಡಿಸಲಾಗುವುದು. ಈ ವಸತಿ ಶಾಲೆಯನ್ನು ಹೊರತುಪಡಿಸಿದರೆ. ಜಿಲ್ಲೆಯ ಇತರ ವಸತಿ ಶಾಲೆಗಳಲ್ಲಿ ಶೇ.೮೦ರಷ್ಟು ದಾಖಲಾತಿ ಇದೆ.

ಜಿನೇಂದ್ರ ಕೋಟ್ಯಾನ್

ಜಿಲ್ಲಾ ಅಧಿಕಾರಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮಂಗಳೂರು

ನಿಯಮಾವಳಿಯಂತೆ ಈ ವಸತಿ ಶಾಲೆಯಲ್ಲಿ ಶೇ.೭೫ರಷ್ಟು ಅಲ್ಸಸಂಖ್ಯಾತ ಸಮುದಾಯದ ವಿದ್ಯಾರ್ಥಿನಿಯರ ಸೇರ್ಪಡೆ ಆಗಬೇಕಿತ್ತು. ಆದರೆ ಆಗದಿರುವುದು ವಿಷಾದನೀಯ. ಈ ಬಗ್ಗೆ ಸ್ಪೀಕರ್ ಯು.ಟಿ.ಖಾದರ್ ಅವರ ಗಮನಕ್ಕೆ ತರಲಾಗುವುದು. ಅವರು ಸೂಕ್ತ ಕ್ರಮ ಕೈಗೊಳ್ಳುವ ವಿಶ್ವಾಸವಿದೆ.

ಹಾಜಿ ಇಬ್ರಾಹೀಂ ಕೋಡಿಜಾಲ್

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಇಬ್ರಾಹೀಂ ಅಡ್ಕಸ್ಥಳ

contributor

Similar News