ಎಂಆರ್‌ಪಿಎಲ್ ಹಸಿರು ವಲಯ ಭೂಸ್ವಾಧೀನ ಪ್ರಕ್ರಿಯೆ: ಪ್ಯಾಕೇಜ್ ಘೋಷಿಸಲು ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ

Update: 2024-08-30 15:35 GMT

ಮಂಗಳೂರು: ಎಂಆರ್‌ಪಿಎಲ್ ೩ನೇ ಹಂತದಲ್ಲಿ ಹಸಿರು ವಲಯ ನಿರ್ಮಾಣಕ್ಕೆ ಜೋಕಟ್ಟೆ ಗ್ರಾಮದ 27 ಎಕರೆ ಭೂ ಸ್ವಾಧೀನಗೊಳ್ಳುವ ನಿರ್ವಸಿತರಿಗೆ ಪರಿಹಾರ ಪ್ಯಾಕೇಜನ್ನು ಶೀಘ್ರ ಪ್ರಕಟಿಸುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.

ಎಂಆರ್‌ಪಿಎಲ್ ಹಸಿರು ವಲಯ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಸ್ಥಳೀಯರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಶುಕ್ರವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

೩ನೇ ಹಂತದಲ್ಲಿ ಹಸಿರು ವಲಯ ನಿರ್ಮಾಣ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಲು ಈಗಾಗಲೇ ಕೆಪಿಟಿ ಪಾಲಿಟೆಕ್ನಿಕ್ ಸಂಸ್ಥೆಗೆ ವಹಿಸಲಾಗಿದೆ. ಸಮೀಕ್ಷೆಯ ವರದಿ ಬರಲು 3 ತಿಂಗಳು ಬೇಕಾಗಲಿದೆ. ಅದಕ್ಕಿಂತಲೂ ಮುಂಚೆಯೇ ನಿರ್ವಸಿತರಿಗೆ ಪರಿಹಾರ ಪ್ಯಾಕೇಜ್ ಘೋಷಿಸುವಂತೆ ಸಚಿವರು ಸೂಚಿಸಿದರು.

ಹಸಿರು ವಲಯ ಸಮೀಕ್ಷೆಯನ್ನು ವೈಜ್ಞಾನಿಕ ಮತ್ತು ಪ್ರಾಯೋಗಿಕವಾಗಿ ನಡೆಸಬೇಕು. ಅಲ್ಲಿರುವ ಮನೆ, ಜಮೀನುಗಳ ಬಗ್ಗೆ ನಿಖರವಾಗಿ ವರದಿ ತಯಾರಿಸಬೇಕು ಎಂದ ಸಚಿವರು ಭೂಸ್ವಾಧೀನಗೊಳ್ಳುವ ಸ್ಥಳಕ್ಕೆ ತಾನು ಶೀಘ್ರದಲ್ಲೇ ಭೇಟಿ ನೀಡುವುದಾಗಿ ತಿಳಿಸಿದರು.

ಎಂಆರ್‌ಪಿಎಲ್ ಅಧಿಕಾರಿಗಳು ಮಾತನಾಡಿ ಹಸಿರು ವಲಯ ಭೂಸ್ವಾಧೀನಕ್ಕೆ ಸಮೀಕ್ಷಾ ವರದಿ ಹಾಗೂ ಗ್ರಾಮಸ್ಥರ ಒಪ್ಪಿಗೆ ಅಗತ್ಯವಿದೆ. ಪರಿಹಾರ ಪ್ಯಾಕೇಜನ್ನು ಬೋರ್ಡ್ ಸಭೆಯಲ್ಲಿಟ್ಟು ಶೀಘ್ರವಾಗಿ ನಿರ್ಧರಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ, ಕೈಗಾರಿಕಾ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್, ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ರಾಜು ಉಪಸ್ಥಿತರಿದ್ದರು. ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ, ತಾಪಂ ಮಾಜಿ ಸದಸ್ಯ ಬಶೀರ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News