ಮುಲ್ಕಿ: ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪ; ಇಬ್ಬರ ಬಂಧನ
Update: 2024-10-05 16:01 GMT
ಮುಲ್ಕಿ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಎಲ್ ಎಸ್ ಡಿ ಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕೇರಳ ಮೂಲದ ವಿದ್ಯಾರ್ಥಿಗಳಾದ ಆದಿಲ್ ಮತ್ತು ನಿಹಾಲ್ ಎಂದು ತಿಳಿದು ಬಂದಿದೆ.
ಬಂಧಿತರಿಂದ ಸುಮಾರು 78 ಸಾವಿರ ರೂ. ಮೌಲ್ಯದ ಮಾದಕ ವಸ್ತು ಎಲ್ ಎಸ್ ಡಿಯ 26 ಸ್ಟ್ರಿಪ್ ಗಳು, 2 ಐಫೋನ್ ಗಳು, ಕೇರಳ ನೋಂದಣಿಯ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳು ಹಳೆಯಂಗಡಿ ಗ್ರಾಮದ ಕೊಪ್ಪಳ ರೈಲ್ವೇ ಮೇಲ್ಸೇತುವೆ ಬಳಿ ತಮ್ಮ ಕಾರಿನಲ್ಲಿ ಬಂದು ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಠಾಣೆಯ ಪಿಎಸ್ ಐ ಅನಿತಾ ಎಚ್. ಬಿ. ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಮುಲ್ಕಿ ಪೊಲೀಸರು ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ತಿಳಿದು ಬಂದಿದೆ.