ಮಂಗಳೂರು: ಬಿಸಿಸಿಐ ಸದಸ್ಯ ಉದ್ಯಮಿಗಳ ಸಮಾಲೋಚನಾ ಸಭೆ
ಮಂಗಳೂರು, ಮಾ.8: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ) ವತಿಯಿಂದ ಉದ್ಯಮಿಗಳ ಸಮಾಲೋಚನಾ ಸಭೆ 'ಬ್ರೇಕ್ ಫಾಸ್ಟ್ ಗೆಟ್ ಟುಗೆದರ್' ಗುರುವಾರ ನಗರದ ಹೋಟೆಲ್ ಸಭಾಂಗಣವೊಂದರಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಸಿಸಿಐ ಅಧ್ಯಕ್ಷ ಡಾ.ಎಸ್.ಎಂ.ರಶೀದ್ ಹಾಜಿ ಮಾತನಾಡಿ, ಸಮುದಾಯದ ಯುವಕರು ಉದ್ಯಮ ವಲಯದಲ್ಲೇ ಹೆಚ್ಚು ಆಸಕ್ತಿ ವಹಿಸಿ ಈ ರಂಗದಲ್ಲಿ ಸಮುದಾಯವು ಹೊಂದಿರುವ ಅಸ್ತಿತ್ವವನ್ನು ಉಳಿಸಿಕೊಳ್ಳುವುದಲ್ಲದೆ ಇನ್ನಷ್ಟೂ ಬೆಳೆಸಿಕೊಂಡು ಹೋಗಬೇಕು. ಇದಕ್ಕೆ ಪೂರಕವಾಗಿ ಬಿಸಿಸಿಐ ವರ್ಷಕ್ಕೆರಡು ಬಾರಿ ಉಚಿತವಾಗಿ ಉದ್ಯಮ ತರಬೇತಿ ಕಾರ್ಯಾಗಾರ ಆಯೋಜಿಸಿಕೊಂಡು ಬಂದಿದೆ. ಜೊತೆಗೆ ಉದ್ಯಮ ಕ್ಷೇತ್ರದಲ್ಲಿ ಆಸಕ್ತರಾಗಿದ್ದ ಸಮುದಾಯದ ಯುವಕರಿಗೆ, ಹೊಸ ಉದ್ಯಮಗಳ ಸ್ಥಾಪನೆಗೆ ಆರ್ಥಿಕ ನೆರವನ್ನು ನೀಡಿಯೂ ಪ್ರೋತ್ಸಾಹಿಸಿದೆ ಎಂದರು.
ಇನ್ನು ಮುಂದೆಯೂ ಏನಾದರೂ, ಹೊಸತೆನಿಸಿರುವ, ಕಾರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕೆಂಬ ಆಸಕ್ತಿ ನಮ್ಮದಾಗಿದ್ದು, ಉದ್ದಿಮೆಗೆ ಸಂಬಂಧಿಸಿದಂತೆ ಇರಬಹುದಾದ ಯಾವುದೇ ರೀತಿಯ ಹೊಸ ಚಿಂತನೆಗಳನ್ನು ಮತ್ತು ಅದರ ಯೋಜನೆಯ ಕಾರ್ಯರೂಪವನ್ನು ನಮ್ಮಲ್ಲಿ ಪರಿಚಯಿಸಲು ಅವಕಾಶ ನೀಡಲಾಗುವುದು. ಅದರ ಸಾಧಕ-ಬಾಧಕಗಳ ಅಧ್ಯಯನದಿಂದ ಅದು ಸಮರ್ಪಕವಾಗಿದೆ ಎಂದು ಕಂಡುಬಂದಲ್ಲಿ ಅದನ್ನು ನಮ್ಮೆಲ್ಲರ ಸಾಮೂಹಿಕ ಹೂಡಿಕೆ ಮತ್ತು ಪ್ರಯತ್ನದ ಮೂಲಕ ಯಶಸ್ವಿಗೊಳಿಸುವ ಬಗ್ಗೆಯೂ ಚಿಂತಿಸಬಹುದಾಗಿದೆ ಎಂದವರು ತಿಳಿಸಿದರು.
ಸಭೆಯಲ್ಲಿ ಬಿಸಿಸಿಐ ಸದಸ್ಯತ್ವ ಹೊಂದಿರುವ ಮತ್ತು ವಿಭಿನ್ನ ವಾಣಿಜ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ, ಪ್ರತಿಷ್ಠಿತ ಉದ್ಯಮಿಗಳು ಭಾಗವಹಿಸಿದ್ದು, ಅವರೆಲ್ಲರೂ, ತಮ್ಮ ತಮ್ಮ ಉದ್ಯಮಗಳ ಬಗೆಗಿನ ಮಾಹಿತಿ ಮತ್ತು ಅನುಭವಗಳನ್ನು ಹಂಚಿಕೊಂಡರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಮ್ತಿಯಾಝ್ ಆಧುನಿಕ ಉದ್ಯಮದಲ್ಲಿ ಫ್ರಾಂಚೈಸಿ ಉದ್ಯಮದ ಮಹತ್ವದ ಕುರಿತು ಮಾತನಾಡಿದರು.
ಬಿಸಿಸಿಐ ಪದಾಧಿಕಾರಿಗಳಾದ ಅಬ್ದುರ್ರಝಾಕ್ ಹಾಜಿ ಗೋಳ್ತಮಜಲು, ಆಸಿಫ್ ಸೂಫಿಖಾನ್ (ಹೋಂ ಪ್ಲಸ್) ನಾಸಿರ್ ಲಕ್ಕಿಸ್ಟಾರ್, ಎ.ಎಚ್.ಮಹಮೂದ್, ಪಿ.ಸಿ.ಹಾಶಿರ್ (ಪಿ.ಸಿ. ಗ್ರೂಪ್), ಎಂ.ಎಚ್.ಇಕ್ಬಾಲ್, ಎಸ್.ಎಂ.ಮುತ್ತಲಿಬ್ (ತಾಜ್ ಸೈಕಲ್), ರಿಯಾಝ್ ಅಹ್ಮದ್ (ಸಿಟಿ ಬಿಲ್ಡರ್ಸ್), ಇಬ್ರಾಹೀಂ ಬಂಡಾಡಿ, ಇಮ್ತಿಯಾಝ್ ಖತೀಬ್ (ಇಕ್ರಾ ಗ್ರೂಪ್), ಬದ್ರುದ್ದೀನ್ ಡೆಲ್ಟಾ, ಅಬ್ದುಲ್ ಹಮೀದ್ ಮೊದಲಾದವರು ಸ್ನೇಹಕೂಟದಲ್ಲಿ ಉಪಸ್ಥಿತರಿದ್ದು, ಉದ್ಯಮಿ ಅನುಭವಗಳನ್ನು ಹಂಚಿಕೊಂಡರು.
ಅಬ್ದುಲ್ ಖಾದರ್ ಕುಕ್ಕಾಜೆ ಕಿರಾಅತ್ ಪಠಿಸಿದರು. ಬಿಸಿಸಿಐ ಕೋಶಾಧಿಕಾರಿ ಮನ್ಸೂರ್ ಅಹ್ಮದ್ ಆಝಾದ್ ಸ್ವಾಗತಿಸಿದರು. ಕಾರ್ಯದರ್ಶಿ ನಿಸಾರ್ ಫಕೀರ್ ಮುಹಮ್ಮದ್ ವಂದಿಸಿದರು.