ಅನಂತ ಕುಮಾರ ಹೆಗಡೆಯ ಸಂವಿಧಾನ ಬದಲಾವಣೆ ಹೇಳಿಕೆ ಆರೆಸ್ಸೆಸ್ ನಿರ್ದೇಶನದಂತೆ ಬಿಜೆಪಿಯ ಆಂತರಿಕ ನಿರ್ಧಾರ: ಐವನ್ ಆರೋಪ

Update: 2024-03-12 08:47 GMT

ಮಂಗಳೂರು, ಮಾ.12: ಸವಿಧಾನ ಬದಲಾವಣೆ ಕುರಿತಂತೆ ಬಿಜೆಪಿಯ ಸಂಸದ ಅನಂದ ಕುಮಾರ್ ಹೆಗಡೆಯವರ ಹೇಳಿಕೆ ಅವರ ವೈಯಕ್ತಿಕ ಹೇಳಿಕೆ ಅಲ್ಲ. ಬದಲಾಗಿ ಆರೆಸ್ಸೆಸ್ ನಿರ್ದೇಶನದ ಮೇರೆಗೆ ಬಿಜೆಪಿಯ ಆಂತರಿಕ ನಿರ್ಧಾರ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಆರೋಪಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅನಂತ ಕುಮಾರ ಹೆಗಡೆಯವರದ್ದು ಅವರ ವೈಯಕ್ತಿಕ ಹೇಳಿಕೆ ಎಂದು ಹೇಳುತ್ತಾ ಕಾರ್ಯಕರ್ತರದಲ್ಲಿ ಸಂವಿಧಾನ ತಿದ್ದುಪಡಿ ಮಾಡುವ ಬಗ್ಗೆ ಮಾತನಾಡುತ್ತಾರೆ. ಈ ರೀತಿಯಾಗಿ ಬಿಜೆಪಿ ನಾಯಕರು ದ್ವಂದ್ವ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದರು.

ದೇಶದ ಜನ ಸಂವಿಧಾನ ಒಪ್ಪಿ ಮತ ಹಾಕಿ ಅವರನ್ನು ಆಯ್ಕೆ ಮಾಡಿದ್ದಾರೆ. ಆದರೆ ಅವರು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೆಗಡೆಯವರು ಒತ್ತಡದಲ್ಲಿದ್ದು, ಅವರಿಗೆ ಚಿಕಿತ್ಸೆಯ ಅಗತ್ಯವಿದೆ. ಬಿಜೆಪಿಯ ಇತರ ನಾಯಕರು ಹೇಳುವಂತೆ ಅದು ಸಂಸದ ಹೆಗಡೆ ಅವರ ವೈಯಕ್ತಿಕ ಹೇಳಿಕೆಯಾದರೆ ಅವರನ್ನು ತಕ್ಷಣದಿಂದ ಪಕ್ಷದಿಂದ ವಜಾ ಮಾಡಲಿ ಎಂದು ಐವನ್ಡಿಸೋಜ ಆಗ್ರಹಿಸಿದರು.

ಬಿಜೆಪಿಯವರ ಸಂವಿಧಾನ ತಿದ್ದುಪಡಿ ಅಜೆಂಡಾ ಇದು ಹೊಸತೇನಲ್ಲ. ಸ್ವಾತಂತ್ರ್ಯದ 75ನೇ ವರ್ಷಾಚರಣೆ ವೇಳೆ ಪಾರ್ಲಿಮೆಂಟ್ ನಲ್ಲಿ ನೀಡಿದ ಕೈಪಿಡಿಯಲ್ಲಿ ಜಾತ್ಯತೀತ ಪದ ಕೈಬಿಡಲಾಗಿತ್ತು. ಆದರೆ ಒತ್ತಡದ ಬಳಿಕ ಮತ್ತೆ ಸೇರಿಸಲಾಯಿತು. ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವವೇ ಇಲ್ಲ. ಅವರದೇ ಸಂವಿಧಾನ ದೇಶದಲ್ಲಿ ತರುವ ಅಜೆಂಡಾ ಹೊಂದಿದ್ದಾರೆ ಎಂದರು.

ದೇಶದಲ್ಲಿ ಬಿಜೆಪಿ ಸರಕಾರ 2019ರಲ್ಲಿ ಸಿಎಎ ಅನುಷ್ಠಾನಗೊಳಿಸಿತ್ತು. ಆರು ತಿಂಗಳೊಳಗೆ ಅದಕ್ಕೆ ನಿಯಮಗಳನ್ನು ರೂಪಿಸಬೇಕಾಗಿತ್ತು. ಆದರೆ ಅದನ್ನು ಮಾಡದೆ ಇದೀಗ ಚುನಾವಣೆಯ ಹೊಸ್ತಿಲಲ್ಲಿ ಆ ಕಾರ್ಯ ಮಾಡಲಾಗುತ್ತಿದೆ. ಮುಂಬರುವ ಚುನಾವಣೆಯಲ್ಲಿ ಅಭಿವೃದ್ಧಿ ಬಗ್ಗೆ ಹೇಳಿಕೊಳ್ಳಲು ಏನೂ ಇಲ್ಲದೆ ಇಂತಹ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

15 ಲಕ್ಷ ಕೋಟಿ ರೂ. ಉದ್ಯಮಿಗಳ ಸಾಲ ಮನ್ನಾ ಮಾಡುವಾಗ ಮೌನವಾಗಿರುವ ಬಿಜೆಪಿಯವರು ಬಡವರಿಗೆ ಕೊಟ್ಟರೆ ಮಾತ್ರ ಬಿಟ್ಟಿ ಭಾಗ್ಯ ಅನ್ನುತ್ತಾರೆ. ರಾಜ್ಯದ 25 ಎಂಪಿಗಳು ಯಾವುದೇ ವಿಚಾರದಲ್ಲಿ ಪಾರ್ಲಿಮೆಂಟ್ ನಲ್ಲಿ ರಾಜ್ಯದ ಬಗ್ಗೆ ಮಾತನಾಡಿಲ್ಲ ಅಂತ ನಾವು ಯಾವಾಗಲೂ ಹೇಳುತ್ತಾ ಬಂದಿದ್ದೇವೆ. ಇದೀಗ ಅವರದ್ದೇ ಪಕ್ಷದವರು ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಗೋಬ್ಯಾಕ್ ಅನ್ನುತ್ತಿದ್ದಾರೆ. ಒಳ್ಳೆಯ ಕೆಲಸ ಮಾಡಿದ್ದರೆ ಗೋ ಬ್ಯಾಕ್ ಅನ್ನುತ್ತಿದ್ದರೇ? ಈಗಲಾದರೂ ಅವರು ಏನೂ ಮಾಡಿಲ್ಲ ಎಂಬುದು ಅವರದ್ದೇ ಪಕ್ಷದವರಿಗೆ ಅರಿವಾಗಿದ್ದು ನೋಡಿ ಸಮಾಧಾನವಾಗುತ್ತಿದೆ ಎಂದು ಐವನ್ ಡಿಸೋಜ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ನಾಯಕರಾದ ಪಿ.ವಿ.ಮೋಹನ್, ಪ್ರಕಾಶ್ ಸಾಲ್ಯಾನ್, ಮನುರಾಜ್, ಭರತ್ ಮುಂಡೋಡಿ, ಮೀನಾ ಟೆಲ್ಲಿಸ್, ಇಮ್ರಾನ್, ಜೇಮ್ಸ್, ಸಬಿತಾ ಮಿಸ್ಕಿತ್, ಭಾಸ್ಕರ್ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News