ಮಂಗಳೂರಿನಲ್ಲಿ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಸ್ಥಾಪನೆಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮನವಿ

Update: 2024-09-19 13:37 GMT

ಮಂಗಳೂರು, ಸೆ.19: ಪಾಸ್‌ಪೋರ್ಟ್‌ಗಳನ್ನು ತ್ವರಿತವಾಗಿ ನೀಡಲು ಅನುಕೂಲವಾಗುವಂತೆ ಪ್ರಾದೇಶಿಕ ಪಾಸ್‌ ಪೋರ್ಟ್ ಕಚೇರಿಯನ್ನು ಮಂಗಳೂರಿನಲ್ಲಿ ಸ್ಥಾಪಿಸಬೇಕೆಂದು ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಅವರು ರಿಜಿನಲ್ ಪಾಸ್‌ಪೋರ್ಟ್ ಕಚೇರಿಯ ಅಧಿಕಾರಿ ಕೃಷ್ಣ.ಕೆ ಅವರನ್ನು ಗುರುವಾರ ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.

ಮಂಗಳೂರು ಪಾಸ್‌ಪೋರ್ಟ್ ಕಚೇರಿಯನ್ನು ಮೇಲ್ಚರ್ಜೆಗೆ ಏರಿಸಬೇಕು ಮತ್ತು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಕಚೇರಿಯನ್ನು ಬೇರೆ ಕಡೆಗೆ ವರ್ಗಾಯಿಸಬೇಕು ಎಂದು ಐವನ್ ಡಿ ಸೋಜ ಆಗ್ರಹಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಕೇವಲ ಒಂದೇ ರಿಜಿನಲ್ ಪಾಸ್‌ಪೋರ್ಟ್ ಕಚೇರಿ ಇದ್ದು, ರಾಜ್ಯದ ಒಟ್ಟು ಜನಸಂಖ್ಯೆಗೆ ಕನಿಷ್ಠ 5 ರಿಜಿನಲ್ ಪಾಸ್‌ಪೋರ್ಟ್ ಕಚೇರಿ ಸ್ಥಾಪಿಸುವಷ್ಟು ಬೇಡಿಕೆ ಇದ್ದರೂ, ಅದನ್ನು ಕಡೆಗಣಿಸಲಾಗಿದೆ. ಮಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಚೇರಿಗೆ ದಿನವೊಂದಕ್ಕೆ ಕನಿಷ್ಠ 500ಕ್ಕೂ ಅಧಿಕ ಮಂದಿ ಪಾಸ್‌ಪೋರ್ಟ್‌ಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇಲ್ಲಿ ರಿಜಿನಲ್ ಪಾಸ್‌ಪೋರ್ಟ್ ಕಚೇರಿಯನ್ನು ಸ್ಥಾಪಿಸಬೇಕಾಗಿದೆ.

ಕೇರಳ ರಾಜ್ಯದಲ್ಲಿ 3 ರಿಜಿನಲ್ ಪಾಸ್‌ಪೋರ್ಟ್ ಕಚೇರಿಗಳಿದ್ದು, ಮಹಾರಾಷ್ಟ್ರ, ತಮಿಳುನಾಡು ಮತ್ತು ಆಂಧ್ರ ರಾಜ್ಯ ಗಳಲ್ಲಿಯೂ 2ಕ್ಕಿಂತಲೂ ಹೆಚ್ಚು ರಿಜಿನಲ್ ಪಾಸ್‌ಪೋರ್ಟ್ ಕಚೇರಿಗಳಿವೆ. ಆದರೆ ನಮ್ಮ ಕರಾವಳಿ ಭಾಗದ ಜನರಿಗೆ ತ್ವರಿತವಾಗಿ ಪಾಸ್‌ಪೋರ್ಟ್ ಪಡೆಯಲು ಮತ್ತು ಪಾಸ್‌ಪೋರ್ಟಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಪರಿಹಾರ ಹುಡುಕಲು, ಬೆಂಗಳೂರಿಗೆ ತೆರಳಬೇಕಾಗಿರುವುದು ಅನಿವಾರ್ಯವಾಗಿದೆ. ಮಂಗಳೂರಿನಲ್ಲಿ ಈಗ ಕಾರ್ಯ ನಿರ್ವಹಿಸುತ್ತಿರುವ ಕಚೇರಿಯು ಗೂಡಂಗಡಿ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ರಸ್ತೆಯ ಬದಿಯಲ್ಲಿ ಯಾವುದೇ ಭದ್ರತೆಯಿಲ್ಲದೆ, ಜನರಿಗೆ ಬಿಸಿಲಿಗೆ, ಮಳೆಗೆ ರಕ್ಷಣೆಯಿಲ್ಲದೆ, ಕುಳಿತುಕೊಳ್ಳಲು ಆಸನವೂ ಇಲ್ಲದೆ, ಶೌಚಾಲಯದ ವ್ಯವಸ್ಥೆಯೂ ಇಲ್ಲದೇ, ಮೂಲ ಭೂತ ಸೌಕರ್ಯಗಳಿಂದ ವಂಚಿತರಾಗುವ ಈ ಕಚೇರಿಯನ್ನು ಕೂಡಲೇ ಇಲ್ಲಿಂದ ತೆರವುಗೊಳಿಸಬೇಕು. ಮುಂದಿನ ದಿಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಸಂಘಟಿತ ಹೋರಾಟವನ್ನು ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ.

ಮನವಿ ಸ್ವೀಕರಿಸಿದ ಅಧಿಕಾರಿ ಕೃಷ್ಣ ಈ ಬೇಡಿಕೆಗಳು ನೈಜವಾಗಿದ್ದು, ಈ ಬಗ್ಗೆ ಮೇಲಾಧಿಕಾರಿಯ ಗಮನಕ್ಕೆ ತಂದು ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ನಿಯೋಗದಲ್ಲಿ ವಿಕಾಸ್ ಶೆಟ್ಟಿ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ, ಕಾರ್ಯದರ್ಶಿ ಶ್ರೀಧರ್.ಎಚ್ ಹಾಗೂ ಬ್ರಿಜೇಶ್ ಶೆಟ್ಟಿ ಮುಂತಾದವರುಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News