ಸಕಾಲ ಮಾಸಿಕ ಶ್ರೇಯಾಂಕದಲ್ಲಿ ದ.ಕ. ಜಿಲ್ಲೆ ಪ್ರಥಮ

Update: 2024-10-01 12:48 GMT

ಮಂಗಳೂರು: ಸಾರ್ವಜನಿಕರಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಸೇವೆಗಳನ್ನು ಗೊತ್ತುಪಡಿಸಿದ ಕಾಲಮಿತಿಯಲ್ಲಿ ನೀಡುವ ಉದ್ದೇಶದಿಂದ ಜಾರಿಗೆ ಬಂದಿರುವ ಸಕಾಲ ಯೋಜನೆ ಸತತವಾಗಿ ಎರಡನೇ ಬಾರಿ ಮಾಸಿಕ ಶ್ರೇಯಾಂಕದಲ್ಲಿ ದಕಿ಼ಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನವನ್ನು ಗಳಿಸಿದೆ.

ದಕಿ಼ಣ ಕನ್ನಡ ಜಿಲ್ಲೆಯು ಸೆಪ್ಟೆಂಬರ್ 2024 ಮಾಹೆಯಲ್ಲಿ ಒಟ್ಟು 85,568 ಅರ್ಜಿಗಳನ್ನು ಸ್ವೀಕರಿಸಿದ್ದು ,82,058 ಅರ್ಜಿ ಗಳನ್ನು ನಿಗದಿಪಡಿಸಿದ ಕಾಲಮಿತಿಯೊಳಗೆ ವಿಲೇವಾರಿ ಮಾಡಲಾಗಿದೆ. ಜಿಲ್ಲೆಯು ಶೇ. 98.45 ವಿಲೇವಾರಿದರ ದೊಂದಿಗೆ ಕಾಲಮಿತಿಗಿಂತ ಮುಂಚಿತವಾಗಿ ಅರ್ಜಿಗಳನ್ನು ಶೀಘ್ರವಾಗಿ ಸಾರ್ವಜನಿಕರಿಗೆ ದೊರಕಿಸುವಲ್ಲಿ ಯಶಸ್ವಿಯಾಗಿದೆ. ಹಾಗೂ ದ.ಕ. ಜಿಲ್ಲೆಯು ಶೇ. 9.63 ತಿರಸ್ಕೃತ ದರ ದೊಂದಿಗೆ ರಾಜ್ಯದಲ್ಲೇ ಅತೀ ಕಡಿಮೆ ಸಕಾಲ ಅರ್ಜಿಗಳನ್ನು ತಿರಸ್ಕೃತಗೊಳಿಸಿರುತ್ತದೆ.

ಸಾರ್ವಜನಿಕರು ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ತಮಗೆ ಅಗತ್ಯವಿರುವ ಸೇವೆಗಳನ್ನು ಪಡೆಯಲು ಸಲ್ಲಿಸುವ ಎಲ್ಲಾ ಅರ್ಜಿಗಳನ್ನು ಸಕಾಲ ಯೋಜನೆಯ ವ್ಯಾಪ್ತಿಯೊಳಗೆ ತೆಗೆದುಕೊಳ್ಳುತ್ತಿದ್ದು, ಸಾರ್ವಜನಿಕರು ನೇರವಾಗಿ ಸಲ್ಲಿಸುವ ಅರ್ಜಿಗಳನ್ನೂ ಸಹ ಸಕಾಲ ವ್ಯಾಪ್ತಿಗೆ ಸೇರ್ಪಡೆಗೊಳಿಸಿ ಇತ್ಯರ್ಥಪಡಿಸಲಾಗುತ್ತಿದೆ. ಯಾವುದೇ ಅರ್ಜಿಗಳು ಸಕಾಲದಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ಅವರು ಕೋರಿರುವ ಸೇವೆಗಳು ನಿರ್ದಿಷ್ಟ ಅವಧಿಗಿಂತ ಮುಂಚಿತವಾಗಿಯೇ ಅವರಿಗೆ ಲಭ್ಯವಾಗುತ್ತಿವೆ.

ರಾಜ್ಯದಲ್ಲಿ ಸಕಾಲ ಯೋಜನೆಯಲ್ಲಿ ಸರ್ಕಾರದ 100 ವಿವಿಧ ಇಲಾಖೆ ಮತ್ತು ಸಂಸ್ಥೆಗಳ ವ್ಯಾಪ್ತಿಯಲ್ಲಿರುವ 1181 ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಲಾಗುತ್ತಿದೆ.

ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಹಾಗೂ ವಿಳಂಬ ವಿಲೇವಾರಿಯಾಗಿರುವ ಅರ್ಜಿಗಳ ಕುರಿತಂತೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳು ಪರಿಶೀಲನೆಯನ್ನು ಮಾಡಿ ಪ್ರತೀ ವಾರ ಸಭೆಗಳನ್ನು ನಡೆಸುವ ಮೂಲಕ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡುತ್ತಿದ್ದು, ಕಾಲಮಿತಿಯೊಳಗೆ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಗೊಳಿಸಲು ಹಾಗೂ ಸಾರ್ವಜನಿಕರಿಗೆ ಸರ್ಕಾರದ ಸೇವೆಗಳು ಶೀಘ್ರದಲ್ಲಿ ದೊರೆಯುವಂತೆ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ ಸಾರ್ವಜನಿಕರಿಗೆ ತ್ವರಿತವಾಗಿ ತಮ್ಮ ಇಲಾಖೆಯ ಸೇವೆಗಳನ್ನು ಒದಗಿಸುತ್ತಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News