ಬಿಜೆಪಿಯಿಂದ ದ್ವೇಷ ರಾಜಕಾರಣ: ಐವನ್ ಡಿಸೋಜ
ಮಂಗಳೂರು: ಮುಖ್ಯಮಂತ್ರಿ ತಮ್ಮ ವಿರುದ್ಧ ನೀಡಲಾದ ದೂರಿನ ವಿಚಾರಣೆಯನ್ನು ಎದುರಿಸುವ ಮೂಲಕ ಕಾನೂನಿಗೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ತೋರಿದ್ದಾರೆ ಆದರೆ ರಾಜ್ಯದ ವಿಪಕ್ಷನಾಯಕರು ತಮ್ಮ ಹುದ್ದೆ, ಘನತೆಗೆ ಚ್ಯುತಿಯಾಗುವಂತೆ ಮತ್ತು ಈ ದೇಶದ ಕಾನೂನು ವ್ಯವಸ್ಥೆಯ ಬಗ್ಗೆ ನಂಬಿಕೆ ಕಳೆದುಕೊಂಡ ವರಂತೆ ದ್ವೇಷ ರಾಜಕಾರಣದ ಮಾತುಗಳನ್ನಾಡುತ್ತಿರುವುದು ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಿಚಾರಣೆಗೆ ಆಗ್ರಹಿಸಿರುವ ಬಿಜೆಪಿ ಮುಖಂಡರು ಈಗ ವಿಚಾರಣೆ ಹಾಜರಾದಾಗ ಟೀಕೆ ಮಾಡುತ್ತಿರುವುದು ಅವರಿಗೆ ಪ್ರಜಾ ಪ್ರಭುತ್ವದ ಬಗ್ಗೆ ನಂಬಿಕೆ ಇಲ್ಲದಿರುವುದನ್ನು ತೋರಿಸುತ್ತದೆ ಎಂದರು. ರಾಜ್ಯದಲ್ಲಿ ವಕ್ಫ್ ಆಸ್ತಿ ಸಂರಕ್ಷಣೆಗಾಗಿ ಸರಕಾರ ಒತ್ತುವರಿದಾರರಿಗೆ ನೀಡಿರುವ ನೋಟೀಸು ಹಿಂದಕ್ಕೆ ಪಡೆದುಕೊಳ್ಳಲು ತೀರ್ಮಾನಿಸಿದೆ ಮತ್ತು ವಕ್ಫ್ ಭೂಮಿಯ ಸಂರಕ್ಷಣೆಗೆ ಸಂಬಂಧಿಸಿದಂತೆ ಗೊಂದಲ ನಿವಾರಿಸಲು ಸರಕಾರ ಪ್ರಯತ್ನಿಸಲಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿವಾದವನ್ನು ತಾತ್ಕಾಲಿಕವಾಗಿ ಶಮನಗೊ ಳಿಸಲು ಪ್ರಯತ್ನಿಸಿದ್ದಾರೆ. ಆದರೆ ಇದನ್ನು ರಾಜಕೀಯ ಲಾಭಕ್ಕಾಗಿ ಬಿಜೆಪಿ ವಿವಾದವನ್ನು ಸೃಷ್ಟಿಸಿ ಕೆಣಕುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪದಾಧಿಕಾರಿಗಳಾದ ನಾಗೇಂದ್ರ, ಅಪ್ಪಿ, ಭಾಸ್ಕರ್ ರಾವ್, ಸಬೀತಾ ಮಿಸ್ಕತ್ ,ಶಾಹುಲ್ ಹಮೀದ್, ಮನೋರಾಜ್ , ಸತೀಶ್ ಪೆಂಗಲ್ ಸುಹಾನ್ ಆಳ್ವ, ಮನೀಶ್ ಬೋಳಾರ್ ಮೊದಲಾದವರು ಉಪಸ್ಥಿತರಿದ್ದರು.