ಉಳ್ಳಾಲ ದರ್ಗಾ ಉರೂಸ್ ಹಿನ್ನೆಲೆ| ವಿವಿಧ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸ್ಪೀಕರ್ ಯುಟಿ ಖಾದರ್ ಸೂಚನೆ
ಉಳ್ಳಾಲ : ಎಪ್ರಿಲ್ 24 ರಿಂದ ಉಳ್ಳಾಲ ಉರೂಸ್ ಆರಂಭ ಆಗುವುದರಿಂದ ನಗರ ಸಭೆ ವ್ಯಾಪ್ತಿಯಲ್ಲಿ ಆಗಬೇಕಾದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸ್ಪೀಕರ್ ಯುಟಿ ಖಾದರ್ ಸೂಚನೆ ನೀಡಿದರು
ಅವರು ಉಳ್ಳಾಲ ಜುಮಾ ಮಸೀದಿ (402) ಹಾಗೂ ಸಯ್ಯಿದ್ ಮದನಿ ದರ್ಗಾ ಸಮಿತಿ ಇದರ ಆಶ್ರಯದಲ್ಲಿ ನಡೆಯುವ 22 ನೇ ಪಂಚ ವಾರ್ಷಿಕ ಮತ್ತು 432 ನೇ ವಾರ್ಷಿಕ ಉಳ್ಳಾಲ ಉರೂಸ್ ಪ್ರಯುಕ್ತ ನಡೆದ ವಿವಿಧ ಅಧಿಕಾರಿಗಳು ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು.
ರಸ್ತೆ ಯಲ್ಲಿ ತುಂಬಿರುವ ಹೊಂಡಗಳನ್ನು ಮೊದಲು ತುಂಬಿಸಬೇಕು.ರಸ್ತೆಯ ಎರಡು ಕಡೆ ಇರುವ ಜಾಗದಲ್ಲಿ ತಾತ್ಕಾಲಿಕ ಕಾಮಗಾರಿ ಮಾಡಿ ಅಗಲೀಕರಣ ಮಾಡ ಬೇಕು.ಬಾಕಿ ಇರುವ ರಸ್ತೆ ಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಪಿಡಬ್ಲ್ಯುಡಿ ಡಿ ಇಂಜಿನಿಯರ್ ದಾಸ್ ಗೆ ಸೂಚನೆ ನೀಡಿದರು.
ಉಳ್ಳಾಲ ಉರೂಸ್ ಗೆ ರಾಜ್ಯದ ವಿವಿಧ ಗ್ರಾಮಗಳಿಂದ, ಕೇರಳದಿಂದ ಜನರು ಆಗಮಿಸುತ್ತಾರೆ, ಸಚಿವರು, ಮುಖ್ಯ ಮಂತ್ರಿ ಗಳ ಸಹಿತ ಹಲವು ಗಣ್ಯರು ಭಾಗವಹಿಸುತ್ತಾರೆ.ಈ ಹಿನ್ನೆಲೆಯಲ್ಲಿ ಪಿಡಬ್ಲ್ಯುಡಿ ರಸ್ತೆ ಚೆನ್ನಾಗಿದ್ದು, ಸ್ವಚ್ಛವಾಗಿರಬೇಕು. ರಸ್ತೆ ಸಂಚಾರಕ್ಕೆ ಯೋಗ್ಯ ಆಗಿರಬೇಕು. ಎಲ್ಲೆಲ್ಲಿ ಕಾಮಗಾರಿ ಬಾಕಿಯಿದೆ ಎಂಬುದನ್ನು ಶೀಘ್ರ ಪೂರ್ಣಗೊಳಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ರಸ್ತೆ , ಕುಡಿಯುವ ನೀರು ಸಹಿತ ಇತರ ಪ್ರಮುಖ ಸಮಸ್ಯೆಗಳ ಪರಿಹಾರ ಕಾಣಬೇಕು. ಈ ಹಿನ್ನೆಲೆ ಯಲ್ಲಿ ಉಳ್ಳಾಲ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳ ಅಧ್ಯಕ್ಷ,ಪಿಡಿಒ ಅವರನ್ನು ಕರೆಸಿ ಸಭೆ ನಡೆಸಿ ಈ ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂದು ತಾ.ಪಂ.ಇ.ಒ.ಗುರುದತ್ ಅವರಿಗೆ ಸೂಚನೆ ನೀಡಿದರು.
ಉಳ್ಳಾಲ ನಗರ ವ್ಯಾಪ್ತಿಯಲ್ಲಿ , ಸ್ವಚ್ಛತೆ, ಕುಡಿಯುವ ನೀರು, ಚರಂಡಿ ಇನ್ನಿತರ ಕಾಮಗಾರಿಗಳ ಬಗ್ಗೆ ವ್ಯವಸ್ಥೆ ಆಗಬೇಕು. ಈ ಬಗೆ ನಗರಸಭೆ ವಿಶೇಷ ಸಭೆ ನಡೆಸಿ ಕಾಮಗಾರಿ ಪರಿಶೀಲನೆ ನಡೆಸಿ ತುರ್ತು ಆಗಬೇಕಾದ ಕೆಲಸವನ್ನು ಶೀಘ್ರ ಮಾಡಬೇಕು. ಉಳ್ಳಾಲ ಓವರ್ ಬ್ರಿಡ್ಜ್, ಮಾಸ್ತಿ ಕಟ್ಟೆ ಬಳಿ ಸ್ವಾಗತ ಕಮಾನು ನಿರ್ಮಾಣ ಆಗಬೇಕು. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಶೌಚಾಲಯ,ಗಣ ತ್ಯಾಜ್ಯ ವಿಲೇವಾರಿ ಗೆ ಸೂಕ್ತ ವ್ಯವಸ್ಥೆ ಮಾಡಬೇಕು.ಉರೂಸಿನ ಪಾವಿತ್ರ್ಯತೆಗೆ ದಕ್ಕೆಯಾಗುವಂತಹ ಆಟಗಳಿಗೆ ಪರವಾನಿಗೆ ನೀಡದಿರುವುದು, ಹೈಮಾಸ್ಟ್ ದೀಪ ಅಳವಡಿಕೆ ಮಾಡುವ ಕೆಲಸ ಆಗಬೇಕು. ಇದಕ್ಕಾಗಿ ಸರ್ಕಾರದ ದುಡ್ಡಿಗೆ ಕಾಯುವುದು ಬೇಡ. ಕಳೆದ ಉರೂಸ್ ಸಂದರ್ಭದಲ್ಲಿ ಮಾಡಿದ ಕಾಮಗಾರಿಯ ದುಡ್ಡು ಮೂರು ವರ್ಷಗಳ ಬಳಿಕ ಮಂಜೂರು ಆಗಿದೆ. ಈ ಬಾರಿ ಕೊಟೇಶನ್ ತಯಾರಿಸಿ ಕಾಮಗಾರಿ ಮುಗಿಸುವಂತೆ ನಗರ ಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎಪ್ರಿಲ್, ಮೇ ತಿಂಗಳಲ್ಲಿ ವಿದ್ಯುತ್ ನಿರಂತರ ಒದಗಿಸಬೇಕು. ಯಾವುದೇ ಲೋಪದೋಷಗಳು ಬಾರದಂತೆ ಕಾಮಗಾರಿ ಮಾಡಬೇಕು. ಉರೂಸ್ ಸಂದರ್ಭದಲ್ಲಿ ಮಾಡುವ ವಿದ್ಯುತ್ ಅಲಂಕಾರಗಳಿಗೆ ಉಚಿತ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತ ದೆಯೇ ಎಂಬ ಬಗ್ಗೆ ಮೇಲಧಿಕಾರಿಗಳ ಜೊತೆ ಚರ್ಚಿಸಿ ವರದಿ ನೀಡುವಂತೆ ಮೆಸ್ಕಾಂ ಇಂಜಿನಿಯರ್ ದಯಾನಂದ ಅವರಿಗೆ ಸೂಚನೆ ನೀಡಿದರು.
ಆರೋಗ್ಯ ಕೇಂದ್ರದಲ್ಲಿ 50 ಹಾಸಿಗೆ ಮೀಸಲಿಡುವ ಜೊತೆಗೆ ಉರೂಸ್ ಸಂದರ್ಭದಲ್ಲಿ ಆಂಬುಲೆನ್ಸ್ ಸೇವೆ, ದರ್ಗಾ ವಠಾರದಲ್ಲಿ ಕೀಟನಾಶಕ ಸಿಂಪಡಿಸಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಳ್ಳಾಲ ದಿಂದ ಪ್ರಯಾಣಿಕರು ಇದ್ದರೆ, ಹೆಚ್ಚು ವರಿ ಬಸ್ ವ್ಯವಸ್ಥೆ ಮಾಡಲಾಗುವುದು.ಬೆಂಗಳೂರು, ಶಿವಮೊಗ್ಗ, ಮಂಗಳೂರು ಕಡೆಯಿಂದ ಉಳ್ಳಾಲ ಕ್ಕೆ ಸರ್ಕಾರಿ ಬಸ್ ಒದಗಿಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಸಭೆಗೆ ತಿಳಿಸಿದರು.
ಉರೂಸ್ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಪೂರ್ಣ ಬಂದೋಬಸ್ತ್ ಒದಗಿಸುವ ಜೊತೆಗೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಲ್ಲಿ ಸಂಚಾರಿ ಪೊಲೀಸ್ ವ್ಯವಸ್ಥೆ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.ಅಹಿತಕರ ಘಟನೆ ತಡೆಯಲು ಅಗತ್ಯ ಇರುವ ಸ್ಥಳದಲ್ಲಿ ಸಿ.ಸಿ ಕೆಮರ ಅಳವಡಿಕೆ ಮಾಡಬೇಕು, ಪರವಾನಿಗೆ ಇಲ್ಲದೆ ಯಾವುದೇ ಸಂತೆ ಇಡುವುದಕ್ಕೆ ಅವಕಾಶ ನೀಡದಂತೆ ಪೊಲೀಸ್ ಅಧಿಕಾರಿ ಗಳಿಗೆ ಸ್ಪೀಕರ್ ಯುಟಿ ಖಾದರ್ ಸೂಚನೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಅವರು ಈ ಬಾರಿ ನಡೆಯುವ ಉಳ್ಳಾಲ ಉರೂಸ್ ಗೆ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಅಗತ್ಯ ಸೇವೆಗಳನ್ನು ಒದಗಿಸುವ ಮೂಲಕ ಸಹಕಾರ ನೀಡಬೇಕು. ಉರೂಸ್ ಯಶಸ್ಸು ಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಕಾರ್ಯದರ್ಶಿ ಮುಸ್ತಫಾ ಮದನಿನಗರ, ಇಸ್ಹಾಕ್ ಮೇಲಂಗಡಿ ,ಮೆಸ್ಕಾಂ ಎಇ.ದಯಾನಂದ್, ನಗರಸಭೆ ಗ್ರಾಮಕರಣಿಕ ಸುರೇಶ್, ಪೌರಾಯುಕ್ತ ಮತಡಿ, ತಹಶೀಲ್ದಾರ್ ಪುಟ್ಟರಾಜು, ಎಸಿಪಿ ಧನ್ಯ, ಸಂಚಾರ ವಿಭಾಗದ ಎಸಿಪಿ ನಜ್ಮ ಫಾರೂಕಿ, ನಗರಸಭೆ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ಸಪ್ನಾ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.