ಮಂಗಳೂರು ಬಾರ್ ಅಸೋಸಿಯೇಶನ್‌ನಿಂದ ಹೊಸ ಆ್ಯಪ್ ಅನಾವರಣ

ಮಂಗಳೂರು, ಎ.4: ರಾಜ್ಯದ ಇತಿಹಾಸದಲ್ಲೇ ಪ್ರಥಮವಾಗಿ ಮಂಗಳೂರು ವಕೀಲರ ಸಂಘದ ವತಿಯಿಂದ ಬಾರ್ ಅಸೋಸಿಯೇಶನ್‌ನ ಚಟುವಟಿಕೆಗೆ ರೂಪಿಸಲಾದ ಹೊಸ ಅ್ಯಪನ್ನು ಶುಕ್ರವಾರ ಶಾಸಕ ವೇದವ್ಯಾಸ ಕಾಮತ್ ಹಳೆ ಕೋರ್ಟ್‌ನ ಆವರಣದಲ್ಲಿ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಅವರು ಮಂಗಳೂರಿಗೆ ಹೈಕೋರ್ಟ್ ಪೀಠ ರಚನೆ ಬಗ್ಗೆ ಪೂರಕ ಸಿದ್ಧತೆಗಳು ನಡೆಯುತ್ತಿದೆ. ಅದಕ್ಕೂ ಮೊದಲು ಸಾಕಷ್ಟು ಪ್ರಕ್ರಿಯೆಗಳು ನಡೆಯಬೇಕಾಗಿದೆ. ಅಂದರೆ ಮಂಗಳೂರು, ಉಡುಪಿ, ಶಿವಮೊಗ್ಗಗಳಲ್ಲಿ ಎಷ್ಟು ಪ್ರಕರಣಗಳಿವೆ. ಈ ಪೈಕಿ ಎಷ್ಟು ಪ್ರಕರಣಗಳು ಹೈಕೋರ್ಟ್‌ಗೆ ಹೋಗ ಬೇಕಾಗುತ್ತದೆ ಇತ್ಯಾದಿ ಬಗ್ಗೆ ದಾಖಲೆ ಸಂಗ್ರಹ ಕಾರ್ಯ ನಡೆಯುತ್ತಿದೆ. ಆ ಬಳಿಕವೇ ಹೈಕೋರ್ಟ್ ಪೀಠ ಮಂಗಳೂರಲ್ಲಿ ಸ್ಥಾಪನೆ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದರು.
ಮಂಗಳೂರು ಉಪ ವಿಭಾಗ ಕೇಂದ್ರವಾದ ಪುತ್ತೂರಿನಲ್ಲಿ ವಕೀಲರ ಭವನ ಇದೆ. ಆದರೆ ಮಂಗಳೂರಲ್ಲಿ ಇಲ್ಲ. ಈ ಕೊರತೆ ನಿವಾರಿಸಲು ಪ್ರಯತ್ನಿಸಲಾಗುವುದು. ಅಲ್ಲದೆ ಇಲ್ಲಿನ ಕೋರ್ಟ್ ಕಟ್ಟಡ ಹಾಗೂ ವಕೀಲರ ಸಂಘದ ಕಟ್ಟಡದ ನಡುವೆ ರ್ಯಾಂಪ್ ನಿರ್ಮಿಸಲು ಹೈಕೋರ್ಟ್ ಅನುಮತಿಗೆ ಕಾಯಲಾಗು ತ್ತಿದೆ. ಇದಕ್ಕೆ ಸುಮಾರು 20-25 ಲಕ್ಷ ರೂ. ಬೇಕಾಗುತ್ತದೆ ಎಂದು ವೇದವ್ಯಾಸ ಕಾಮತ್ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದ ದ.ಕ.ಜಿಲ್ಲಾ ಹಿರಿಯ ಹೆಚ್ಚುವರಿ ಮತ್ತು ಸೆಶನ್ಸ್ ನ್ಯಾಯಾಧೀಶ ಎಚ್.ಎಸ್. ಮಲ್ಲಿಕಾರ್ಜುನ ಸ್ವಾಮಿ, ಕರಾವಳಿ ಮೊದಲಿನಿಂದಲೂ ಸೃಜನಶೀಲತೆಗೆ ಹೆಸರಾಗಿದೆ. ಸಂವಿಧಾನ ರಚನಾ ಸಮಿತಿ ಸದಸ್ಯರಲ್ಲಿ ಬಿ.ಎಂ.ನರಸಿಂಹ ರಾವ್ ಮಂಗಳೂರಿನವರು ಎನ್ನುವುದು ಹೆಮ್ಮೆಯ ಸಂಗತಿ. ದೇಶ ಕಟ್ಟುವ ಕಾಯಕದಲ್ಲಿ ಕರಾವಳಿಗಳ ಸೇವೆ ಅನನ್ಯವಾಗಿದೆ ಎಂದು ಹೇಳಿದರು.
ದೇಶದಲ್ಲಿ ತಿದ್ದುಪಡಿಯಾದ ಹಲವು ಕಾನೂನುಗಳು, ಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳ ಸೂಚನೆ ಗಳು, ಕೆಲವೊಮ್ಮೆ ನ್ಯಾಯಾಧೀಶರಿಗೆ ತಲುಪುತ್ತಿಲ್ಲ. ಹೀಗಾಗಿ ಈ ಆ್ಯಪ್‌ನಲ್ಲಿ ಅಂತಹ ವಿಚಾರಗಳನ್ನೂ ಅಳವಡಿಸಬೇಕು. ಆ್ಯಪ್ ಮೂಲಕ ಕಾನೂನು ತಿಳಿಸುವ ಕೆಲಸ ಆಗಬೇಕು. ಇದರಿಂದ ತ್ವರಿತ ನ್ಯಾಯದಾನ ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ಬಾರ್ ಅಸೋಸಿಯೇಶನ್ ಅಧ್ಯಕ್ಷ ಎಚ್.ವಿ.ರಾಘವೇಂದ್ರ 2019ರಲ್ಲಿ ವೆಬ್‌ಸೈಟ್ ಅನಾವರಣಗೊಂಡಿದ್ದು, ಈಗ ಆ್ಯಪ್ ರಚನೆಯಾಗುತ್ತಿದೆ. ಇದು ಅತ್ಯಾಧುನಿಕ ಆ್ಯಪ್ ಆಗಿದೆ. ಸದಸ್ಯತನ ನೋಂದಣಿ, ಪರಿಶೀಲನೆ, ಖರ್ಚು ವೆಚ್ಚ, ನೇರ ಶುಲ್ಕ ಪಾವತಿ ಸಹಿತ ಅನೇಕ ವ್ಯವಸ್ಥೆಗಳು ಇದರಲ್ಲಿ ಅಡಕವಾಗಿವೆ. ವಕೀಲರು ಇದರ ಪ್ರಯೋಜನ ಪಡೆಯಬೇಕು ಎಂದರು.
ನ್ಯಾಯವಾದಿಗಳಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಎ.ಸಿ.ವಿನಯರಾಜ್, ಅಂದ್ರಾದೆ ಡೆರಿ ಮತ್ತಿತರರು ಉಪಸ್ಥಿತರಿದ್ದರು.