ಮುಲ್ಕಿ ರಿಕ್ಷಾ ಚಾಲಕ ಶರೀಫ್ ಹತ್ಯೆ ಪ್ರಕರಣ: ವಿಶೇಷ ತನಿಖಾ ತಂಡ ರಚನೆಗೆ ಕೇರಳ ಸಿಎಂಗೆ ಮನವಿ

Update: 2025-04-13 20:33 IST
ಮುಲ್ಕಿ ರಿಕ್ಷಾ ಚಾಲಕ ಶರೀಫ್ ಹತ್ಯೆ ಪ್ರಕರಣ: ವಿಶೇಷ ತನಿಖಾ ತಂಡ ರಚನೆಗೆ ಕೇರಳ ಸಿಎಂಗೆ ಮನವಿ
  • whatsapp icon

ಮಂಗಳೂರು: ಮುಲ್ಕಿ ಕೊಳ್ನಾಡು ನಿವಾಸಿ ರಿಕ್ಷಾ ಚಾಲಕ ಮುಹಮ್ಮದ್ ಶರೀಫ್‌ರನ್ನು ದುಷ್ಕರ್ಮಿ ಗಳು ಹತ್ಯೆಗೈದು ಕೇರಳ-ಕರ್ನಾಟಕ ಗಡಿಭಾಗದ ಕುಂಜತ್ತೂರು ಪದವು ಎಂಬಲ್ಲಿನ ಬಾವಿಗೆ ಎಸೆದಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ವಿಶೇಷ ತನಿಖಾ ತಂಡವನ್ನು ರಚಿಸಲು ಕೇರಳದ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗುವುದು ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ತಿಳಿಸಿದ್ದಾರೆ.

ಶರೀಫ್ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಈ ಸಂಬಂಧ ಪೊಲೀಸ್ ಮಹಾ ನಿರ್ದೇಶಕರಲ್ಲಿ ಮಾತನಾಡಿದ್ದೇನೆ. ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯ್, ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಕಾರ್ಯದರ್ಶಿ ಅವರನ್ನು ಸೋಮವಾರ ಭೇಟಿಯಾಗಿ ಮನವಿ ಸಲ್ಲಿಸಲಾಗು ವುದು ಎಂದು ಅವರು ಭರವಸೆ ನೀಡಿದ್ದಾರೆ.


ಕರ್ನಾಟಕದ ಆಟೋ ರಿಕ್ಷಾ ಚಾಲಕ ಶರೀಫ್ ಅವರನ್ನು ಮಂಜೇಶ್ವರದ ಕುಂಜತ್ತೂರು ಎಂಬಲ್ಲಿ ಹತ್ಯೆ ಗೈದು ಬಾವಿಗೆ ಎಸೆದಿರುವುದು ಗಂಭೀರ ಪ್ರಕರಣವಾಗಿದೆ. ಶರೀಫ್ ಅವರಿಗೆ ಶತ್ರುಗಳಿಲ್ಲ. ಅವರು ಹಲವು ವರ್ಷಗಳಿಂದ ಆಟೋ ಚಾಲಕರಾಗಿ ದುಡಿಯುತ್ತಿದ್ದಾರೆ. ಅವರನ್ನು ಹತ್ಯೆಗೈದವರು ಯಾರು ? ಯಾಕೆ ಕೊಲೆ ಮಾಡಲಾಯಿತು ? ಅದರ ಹಿಂದೆ ಯಾರ ಕೈವಾಡ ಇದೆ ಎಂಬ ಪ್ರಶ್ನೆಗಳು ನಮ್ಮನ್ನು ಕಾಡುತ್ತಿದೆ. ಹೀಗಾಗಿ ಕೇರಳ ಸರಕಾರ ಶರೀಫ್ ಹತ್ಯೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಿ ಹತ್ಯೆಗೈದಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದ್ದಾರೆ.

ಮಂಜೇಶ್ವರ ಶಾಸಕನೆಂಬ ನೆಲೆಯಲ್ಲಿ ಶರೀಫ್ ಅವರ ಮಕ್ಕಳಾದ ಆಸಿಫ್, ಅಫ್ರಿದ್ ಮತ್ತು ನೌಶದ್ ಅವರು ಪೌರ ಪ್ರಮುಖರೊಂದಿಗೆ ರವಿವಾರ ತಮ್ಮ ಕಚೇರಿಗೆ ಆಗಮಿಸಿ ತಮ್ಮಲ್ಲಿ ಮನವಿ ಮಾಡಿದ್ದಾರೆ. ಖಂಡಿತವಾಗಿಯೂ ಶರೀಫ್ ಅವರ ಕುಟುಂಬಕ್ಕೆ ನ್ಯಾಯ ಒದಗಿಸಲು ಹೋರಾಟ ನಡೆಸುವುದಾಗಿ ಶಾಸಕ ಎಕೆಎಂ ಅಶ್ರಫ್ ಭರವಸೆ ನೀಡಿದ್ದಾರೆ.


‘‘ನನ್ನ ತಂದೆ ಶರೀಫ್ ಸೌಮ್ಯ ಸ್ವಭಾವದವರು. ಎಲ್ಲರಿಗೂ ಇಷ್ಟವಾದ ವ್ಯಕ್ತಿ. ರಿಕ್ಷಾದಲ್ಲಿ ದುಡಿದು ನನ್ನನ್ನು ಸಾಫ್ಟ್ ವೇರ್ ಇಂಜಿನಿಯರಿಂಗ್ ಮಾಡಿಸಿದ್ದಾರೆ. ಅವರ ಹತ್ಯೆ ಯಾಕೆ ಆಗಿದೆ ಗೊತ್ತಾಗಿಲ್ಲ. ನಮಗೆ ನ್ಯಾಯ ಬೇಕು. ಈ ಉದ್ದೇಶಕ್ಕಾಗಿ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ. ಮುಂದೆ ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಮತ್ತು ಸಿಎಂ ಅವರನ್ನು ಭೇಟಿಯಾಗುತ್ತೇವೆ".

- ನೌಶದ್, ಶರೀಫ್‌ರ ಪುತ್ರ-ಐಟಿ ಕಂಪೆನಿಯ ಉದ್ಯೋಗಿ

‘‘ಶರೀಫ್ ಸೌಮ್ಯ ಸ್ವಭಾವದ ವ್ಯಕ್ತಿ. ದ.ಕ. ಜಿಲ್ಲೆಯಲ್ಲಿ ಅಮಾಯಕರು ಯಾವ ರೀತಿ ಬಲಿಯಾಗುತ್ತಾರೆ ಎನ್ನುವುದಕ್ಕೆ ಶರೀಫ್‌ರ ಹತ್ಯೆ ಒಂದು ಉದಾರಣೆಯಾಗಿದೆ. ಶರೀಫ್ ಮುಗ್ಧ ವ್ಯಕ್ತಿ, ಎಲ್ಲರಲ್ಲೂ ಆತ್ಮೀಯತೆಯಿಂದ ಇದ್ದರು. ಅವರ ಹತ್ಯೆ ಪ್ರಕರಣದ ಬಗ್ಗೆ ಎಲ್ಲ ಆಯಾಮಗಳಿಂದ ಕೇರಳ ಪೊಲೀಸರು ತನಿಖೆ ನಡೆಸಬೇಕು. ಕರ್ನಾಟಕದ ಪೊಲೀಸರು ಸೂಕ್ತ ಸಹಕಾರ ನೀಡಬೇಕು"

-ಬಿ.ಎಂ.ಆಸಿಫ್, ಮಾಜಿ ಅಧ್ಯಕ್ಷರು ಮುಲ್ಕಿ ಪಟ್ಟಣ ಪಂಚಾಯತ್







Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News