ಸಮಸ್ಯೆ ಉಂಟಾದಾಗ ಮಾತುಕತೆಯ ಮೂಲಕ ಪರಿಹರಿಸಿ: ಪ್ರಸನ್ನ ಎಂ.ಎಸ್

ಪಡುಬಿದ್ರಿ: ಯಾವುದೇ ಸಮಸ್ಯೆಗಳು ಉಂಟಾದಾಗ ಸಂಘರ್ಷಗಳಿಗೆ ಅವಕಾಶ ನೀಡಿದೆ ಊರಿನ ಹಿರಿಯರು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು. ಈ ಮೂಲಕ ಬಲಿಷ್ಠ ಸಮಾಜ ನಿರ್ಮಾಣ ವಾದಲ್ಲಿ ಸೌಹಾರ್ದತೆಯ ಭಾರತವೂ ನಿರ್ಮಾಣವಾಗುತ್ತದೆ ಎಂದು ಪಡುಬಿದ್ರಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಪ್ರಸನ್ನ ಎಂ.ಎಸ್ ಕರೆ ನೀಡಿದರು.
ಅವರು ಹೆಜಮಾಡಿಯ ಕನ್ನಂಗಾರ್ ಜುಮ್ಮಾ ಮಸೀದಿಯ ಮುಂಭಾಗದಲ್ಲಿರುವ ಶೈಖುನಾ ಸಿರಾಜುದ್ದೀನ್ ವಲಿಯುಲ್ಲಾಹಿ ದರ್ಗಾ ಶರೀಫ್ ಕನ್ನಂಗಾರ್ ಉರೂಸ್ ಸಮಾರಂಭದ ಪ್ರಯುಕ್ತ ರವಿವಾರ ಆಯೋಜಿಸಿದ ಸೌಹಾರ್ದ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜುಮಾ ಮಸೀದಿ ಮುದರ್ರಿಸ್ ಅಶ್ರಫ್ ಸಖಾಫಿ ಕಿನ್ಯ ಮಾತನಾಡಿ, ಜಗತ್ತಿನ ಯಾವುದೇ ಧರ್ಮವೂ ಅಶಾಂತಿಯನ್ನು ಬಯಸದೆ ಪರಿಸ್ಪರ ಶಾಂತಿ, ಸೌಹಾರ್ದತೆಯ ಬದುಕು ನಡೆಸಲು ಬೋಧಿಸಿದೆ. ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳಿಂದಾಗಿ ಇಂದು ಮನುಷ್ಯರು ಪರಸ್ಪರ ಅಪನಂಬಿಕೆಯಿಂದ ಬದುಕುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಇದನ್ನು ದೂರ ಮಾಡುವ ಮೂಲಕ ಸೌಹಾರ್ದತೆಯ ನಾಡನ್ನು ಕಟ್ಟಬೇಕಾಗಿದೆ ಎಂದು ಕರೆ ನೀಡಿದರು.
ಇದೇ ಸಂದರ್ಭ ಮುಖ್ಯಮಂತ್ರಿ ಪದಕ ಸ್ವೀಕರಿಸಿದ ಪಡುಬಿದ್ರಿ ಠಾಣೆಯ ಉಪನಿರೀಕ್ಷಕ ಪ್ರಸನ್ನ ಎಂ.ಎಸ್. ಅವರನ್ನು ಸನ್ಮಾನಿಸಲಾಯಿತು.
ಉರೂಸ್ ಸಮಿತಿ ಅಧ್ಯಕ್ಷ ಹಾಜಿ ಗುಲಾಂ ಮುಹಮ್ಮದ್ ಹೆಜಮಾಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ದಲಿತ ಮುಖಂಡ ಶೇಖರ್ ಹೆಜಮಾಡಿ, ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ರೋಲ್ಫಿ ಡಿಕೋಸ್ತ, ಉಡುಪಿ ಜಿಲ್ಲಾ ಮೀನುಗಾರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿಶ್ವಾಸ್ ಅಮೀನ್, ಕನ್ನಂಗಾರ್ ಜುಮಾ ಮಸೀದಿ ಅಧ್ಯಕ್ಷ ಹಮೀದ್ ಹಾಜಿ, ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ದಯಾನಂದ, ಕಾಂಗ್ರೆಸ್ ಮುಖಂಡ ಅಬ್ದುಲ್ ಅಝೀಝ್ ಹೆಜಮಾಡಿ, ಹೆಜಮಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಪಾಂಡುರಂಗ ಕರ್ಕೇರ, ಶರಣ್ ಮಟ್ಟು, ಪಡುಬಿದ್ರಿ ಗ್ರಾಮ ಪಂಚಾಯಿತಿ ಸದಸ್ಯ ಮಯ್ಯದ್ದಿ, ಕನ್ನಂಗಾರ್ ಜುಮಾ ಮಸೀದಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಮಿಲಾಫ್ ಉಪಸ್ಥಿತರಿದ್ದರು.
ಉರೂಸ್ ಸಮಿತಿ ಕಾರ್ಯದರ್ಶಿ ರಕೀಬ್ ಕನ್ನಂಗಾರ್ ಕಾರ್ಯಕ್ರಮ ನಿರೂಪಿಸಿದರು.
ರಕ್ತದಾನ ಶಿಬಿರ: ಇದೇ ಸಂದರ್ಭ ಶ್ರೀನಿವಾಸ ಆಸ್ಪತ್ರೆ ಸುರತ್ಕಲ್ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ನಡೆಯಿತು. ಶಿಬಿರದಲ್ಲಿ 75 ಯುನಿಟ್ ರಕ್ತ ಸಂಗ್ರಹಿಸಲಾಯಿತು.
ವೈದ್ಯಕೀಯ ಶಿಬಿರ: ವೈದ್ಯಕೀಯ ಶಿಬಿರದಲ್ಲಿ 300ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದು, ಕಣ್ಣಿನ ತಪಾಸಣೆ ಸಹಿತ ವಿವಿಧ ವಿಭಾಗಗಳಲ್ಲಿ ತಪಾಸಣೆ ನಡೆಯಿತು.