ಗ್ಯಾರಂಟಿ ಅನುಷ್ಠಾನಕ್ಕೆ ಗ್ರಾಪಂನಲ್ಲೂ ನೋಡಲ್ ಅಧಿಕಾರಿ: ಪುಷ್ಪಾ ಅಮರನಾಥ್

Update: 2024-09-18 10:55 GMT

ಮಂಗಳೂರು, ಸೆ.18: ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆ ಅನುಷ್ಟಾನ ದ.ಕ. ಜಿಲ್ಲೆಯಲ್ಲಿ ಉತ್ತಮವಾಗಿದೆ. ಸಣ್ಣಪ್ಟು ಸಮಸ್ಯೆಗಳನ್ನು ಬಗೆಹರಿಸಿಕೊಂಡು ಗ್ರಾ.ಪಂ. ಮಟ್ಟದಲ್ಲೂ ಯೋಜನೆ ಅರ್ಹ ಫಲಾನುಭವಿಗಳಿಗೆ ದೊರಕುವಂತೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಚರ್ಚಿಸಿ ನೋಡಲ್ ಅಧಿಕಾರಿಗಳನ್ನು ನೇಮಕಕ್ಕೆ ಕ್ರಮ ವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸರಕಾರದ ಐದು ಗ್ಯಾರಂಟಿ ಯೋಜನೆಗಲಿಂದ ಗ್ರಾಮ ಮಟ್ಟದವರೆಗೆ ಯಾರೊಬ್ಬ ಅರ್ಹ ಫಲಾನುಭವಿಯೂ ವಂಚಿತರಾಗಬಾರದು. ಇದು ಶೋಕಿಗಾಗಿ, ಬೂಟಾಟಿಕೆಯ ಯೋಜನೆಯಲ್ಲ. ಬದಲಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯವನ್ನು ಎತ್ತಿ ಹಿಡುಯುವ ಸ್ವಾಬಿಮಾನದ ಯೋಜನೆಯಾಗಿದೆ ಎಂದರು.

ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿದ್ದರೂ ತಾಂತ್ರಿಕ ಕಾರಣಗಳಿಂದ ಕೆಲವು ಮಂದಿಗೆ ಗೃಹಲಕ್ಷ್ಮಿ ತಲುಪಿಲ್ಲ. ಪ್ರತಿ ಅರ್ಹರನ್ನು ಪತ್ತೆ ಹಚ್ಚಿ ಯೋಜನೆ ಒದಗಿಸುವುದು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅನುಷ್ಠಾನ ಸಮಿತಿಯ ಸದಸ್ಯರು ಹಾಗೂ ಅಧಿಕಾರಿಗಳ ಜವಾಬ್ಧಾರಿಯಾಗಿದೆ. ಬೂತ್ ಮಟ್ಟದಲ್ಲೂ ಯೋಜನೆ ಅನುಷ್ಠಾನ ಪ್ರಕ್ರಿಯೆ ನಡೆಸಲು ಉದ್ದೇಶಿಸಲಾಗಿದೆ ಎಂದು ಪುಷ್ಪಾ ಅಮರನಾಥ್ ಹೇಳಿದರು.

ಗೃಹಲಕ್ಷ್ಮಿ ಶೇ. 92 ಫಲಾನುಭವಿಗಳಿಗೆ ಲಭ್ಯ

ಗೃಹಲಕ್ಷ್ಮಿಯೋಜನೆಯಡಿ ರೇಶನ್ ಕಾರ್ಡ್ಗಳ ಆಧಾರದಲ್ಲಿ ಫಲಾನುಭವಿಗಳನ್ನು ಗುರುತಿಸಿ ಗುರಿ ನಿಗದಿಪಡಿಸಲಾಗಿತ್ತು. ದ.ಕ. ಜಿಲ್ಲೆಯಲ್ಲಿ ಹೀಗೆ ಗುರುತಿಸಲಾದ ಒಟ್ಟು 4,03,333 ಮಹಿಳೆಯರಲ್ಲಿ ಶೇ.92ರಷ್ಟು ಮಂದಿಗೆ (3,69,292) 2 ಸಾವಿರ ರು. ತಲುಪುತ್ತಿದೆ. ತಮಗೆ ಅಗತ್ಯ ಇಲ್ಲ ಎಂಬ ಕಾರಣಕ್ಕೋ, ಮಾಹಿತಿ ಕೊರತೆಯಿಂದಲೋ ಅಥವಾ ಭೌತಿಕವಾಗಿ ಬಂದು ಅರ್ಜಿ ಹಾಕಲು ಸಾಧ್ಯವಿಲ್ಲದೆ ಉಳಿದವರು ಇರಬಹುದು. ಅವರೆಲ್ಲರನ್ನು ಹುಡುಕಿ ಗೃಹಲಕ್ಷ್ಮಿಗೆ ನೋಂದಣಿ ಮಾಡಿಸಿ ಶೇ.100ರಷ್ಟು ಗುರಿ ಸಾಧಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಂದರು.

ವಿವಿಧ ರೀತಿಯ ಸಾಲ ಪಡೆದುಕೊಂಡವರು ಆದಾಯ ತೆರಿಗೆ ಪಾವತಿದಾರರು ಎಂದು ಆನ್ ಲೈನ್ನಲ್ಲಿ ತಾನಾಗೇ ನಮೂದಾಗುತ್ತಿದೆ. ಇದರಿಂದ ಅನೇಕರು ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆಯನ್ನೂ ಗಂಭೀರವಾಗಿ ಪರಿಗಣಿಸಲಾಗಿದ್ದು, ಸರ್ಕಾರದ ಮಟ್ಟದಲ್ಲಿ ಸಮಸ್ಯೆ ನೀಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಅನ್ನಭಾಗ್ಯ ಯೋಜನೆಯಲ್ಲಿ ಅನೇಕರಿಗೆ ಬೆರಳಚ್ಚು ಮ್ಯಾಚ್ ಆಗದೆ ಸಮಸ್ಯೆಯಾಗಿದೆ. ಬೆರಳಚ್ಚು ಮ್ಯಾಚ್ ಆಗದೆ ಇದ್ದರೂ ಅಕ್ಕಿ ನೀಡಲು ಸೂಚನೆ ನೀಡಲಾಗಿದೆ. ಅಂಥ ಫಲಾನುಭವಿಗಳ ಕಣ್ಣಿನ ರೆಟಿನಾ ಸ್ಕ್ಯಾನ್ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಪುಷ್ಪಾಅಮರನಾಥ್ ಹೇಳಿದರು.

170 ಸರಕಾರಿ ಬಸ್ ಗಳ ಬೇಡಿಕೆ

ಶಕ್ತಿ ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ ಮಹಿಳೆಯರು ಪ್ರಯೋಜನ ಪೆಡಯುತ್ತಿದ್ದರೂ, ಅನೇಕ ಕಡೆ ಸರಕಾರಿ ಬಸ್ಸುಗಳಿಲ್ಲ ಎಂಬ ಕೂಗು ಇದೆ. ಜಿಲ್ಲೆಯಲ್ಲಿ ಹೊಸದಾಗಿ 170 ರೂಟ್ಗಳಿಗೆ ಸರಕಾರಿ ಬಸ್ಸು ಓಡಿಸುವ ಬೇಡಿಕೆಯಿದ್ದು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬಳಿ ಮಾತುಕತೆ ನಡೆಸಲಾಗುವುದು ಎಂದರು.

ಯುವನಿಧಿಗೆ ಒತ್ತು ನೀಡಲು ಸೂಚನೆ

ದ.ಕ. ಜಿಲ್ಲೆಯಲ್ಲಿ ಯುವನಿಧಿ ಫಲಾನುಭವಿಗಳ ಸಂಖ್ಯೆ ಕಡಿಮೆ ಇದೆ. ಅರ್ಹ ಫಲಾನುಭವಿಗಳಿಗೆ ಒದಗಿಸುವುದು ಸೇರಿದಂತೆ ದಸರಾ ಸಂದರ್ಭ ಜನನಿಬಿಡ ಪ್ರದೇಶಗಳಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಜಾಹೀರಾತು ಟ್ಯಾಬ್ಲೋ, ಫ್ಲೆಕ್ ಅಳವಡಿಸುವ ಮೂಲಕ ಕ್ರಮ ವಹಿಸಲು ಸೂಚನೆ ನೀಡಲಾಗಿದೆ ಎಂದು ಪುಷ್ಪಾ ಅಮರಾನಾಥ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಜಿಪಂ ಸಿಇಒ ಡಾ.ಆನಂದ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಮತ್ತಿತರರು ಇದ್ದರು.

ಗ್ಯಾರಂಟಿ ಬೇಡವಾದರೆ ವಾಪಸ್ ಗೆ ಅವಕಾಶ

ಗೃಹಲಕ್ಷ್ಮಿಸೇರಿದಂತೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವುದು ನಮ್ಮ ಗುರಿ. ಆದರೆ ಯಾರಿಗೆ ಈ ಯೋಜನೆಗಳ ಅಗತ್ಯವಿಲ್ಲ ಅನಿಸುತ್ತದೆಯೋ ಅಂಥವರು ಸ್ವಯಂ ಪ್ರೇರಣೆಯಿಂದ ಯೋಜನೆಯಿಂದ ವಾಪಸಾಲು ಅವಕಾಶ ಕಲ್ಪಿಸುವ ಚಿಂತನೆ ನಡೆಸಲಾಗಿದೆ. ಈ ಹಿಂದೆ ಗ್ಯಾಸ್ ಸಬ್ಸಿಡಿ ಬೇಡದವರು ಕೈಬಿಡುವ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಅದೇ ರೀತಿ ಗ್ಯಾರಂಟಿ ಯೋಜನೆಯಲ್ಲೂ ಜಾರಿಗೆ ತರಲು ಮುಖ್ಯಮಂತ್ರಿ ಬಳಿ ಮಾತುಕತೆ ನಡೆಸಲಾಗುವುದು ಎಂದು ಪುಷ್ಪಾಅಮರನಾಥ್ ತಿಳಿಸಿದರು.

ದ.ಕ. ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಗೃಹಲಕ್ಷ್ಮೀ ಯೋಜನೆ ಕಂತು ಫಲಾನುಭವಿಗಳಿಗೆ ತಲುಪಿಲ್ಲ. ಈ ಎರಡೂ ತಿಂಗಳ ಹಣ ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ ಎಂದು ಪುಷ್ಪಾ ಅಮರನಾಥ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News