ಸರಕಾರಿ ಸಾಲ ಸೌಲಭ್ಯ ನೀಡಲು ಅಧಿಕಾರಿಗಳು ನಿರ್ಲಕ್ಷ್ಯ: ದಲಿತ ಸಂಘಟನೆಗಳ ನಾಯಕರ ಆರೋಪ

Update: 2023-09-24 13:38 GMT

ಮಂಗಳೂರು: ಸರಕಾರವು ದಲಿತ ಸಮುದಾಯಕ್ಕೆ ಅನೇಕ ಸಾಲ ಸೌಲಭ್ಯಗಳನ್ನು ಘೋಷಿಸುತ್ತಿವೆ. ಆದರೆ ಅಧಿಕಾರಿಗಳು ಅದನ್ನು ನೀಡಲು ತುಂಬಾ ಸತಾಯಿಸುತ್ತಿದ್ದಾರೆ. ಉನ್ನತ ವಿದ್ಯಾಭ್ಯಾಸಕ್ಕೆ ಶಿಕ್ಷಣ ಸಾಲ ಕೂಡ ಸಕಾಲದಲ್ಲಿ ಸಿಗುತ್ತಿಲ್ಲ ಎಂದು ದಲಿತ ಸಂಘಟನೆಗಳ ಮುಖಂಡರಾದ ಚಂದ್ರಕುಮಾರ್, ಜಗದೀಶ್ ಪಾಂಡೇಶ್ವರ ಆರೋಪಿಸಿದರು.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ್ ಗೋಯಲ್ ಅವರ ಅಧ್ಯಕ್ಷತೆಯಲ್ಲಿ ರವಿವಾರ ನಡೆದ ಎಸ್ಸಿ-ಎಸ್ಟಿ ಅಹವಾಲು ಆಲಿಕೆಯ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.

ಅಧಿಕಾರಿಗಳು ಉದ್ದೇಶಪೂರ್ವಕವಾಗಿ ದಲಿತರ ಅರ್ಜಿಗಳ ಬಗ್ಗೆ ನಿರ್ಲಕ್ಷ್ಯ ತಾಳುತ್ತಿದ್ದಾರೆ. ಅರ್ಜಿಗಳ ವಿಲೇವಾರಿಗೆ ಆಸಕ್ತಿ ವಹಿಸುತ್ತಿಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ‘ಈ ಸಮಸ್ಯೆಯನ್ನು ದ.ಕ.ಜಿಲ್ಲಾಧಿಕಾರಿ ಹಾಗೂ ಸಂಬಂಧಿ ಸಿದ ಬ್ಯಾಂಕ್‌ಗಳ ಗಮನಕ್ಕೆ ತರಲಾಗುವುದು’ ಎಂದರು.

ದಲಿತರ ಕಾಲನಿಗಳಲ್ಲಿ ಗಾಂಜಾ ಮತ್ತಿತರ ಅಕ್ರಮ ಚಟುವಟಿಕೆಗಳು ನಡೆದ ಸಂದರ್ಭ ಸ್ಥಳೀಯ ಅಮಾಯಕ ಯುವಕರ ಮೇಲೆಯೂ ಸಂಶಯ ವ್ಯಕ್ತಪಡಿಸಿ ಅವರನ್ನು ಪೊಲೀಸರು ವಶಕ್ಕೆ ಪಡೆಯುವ ಘಟನೆಗಳು ಮರುಕಳಿಸುತ್ತವೆ. ಹಾಗಾಗಿ ದಲಿತರ ಕಾಲನಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ದಲಿತ ಸಂಘಟನೆಯ ನಾಯಕ ಎಸ್ಪಿ ಆನಂದ ಆಗ್ರಹಿಸಿದರು.

ಸಿಸಿ ಕ್ಯಾಮರಾ ಅಳವಡಿಸಿದರೆ ನೈಜ ಆರೋಪಿಗಳನ್ನು ಪತ್ತೆ ಹಚ್ಚಲು, ಅಕ್ರಮಗಳನ್ನು ತಡೆಯಲು ಪೊಲೀಸರಿಗೆ ಸಹಕಾರಿಯಾಗುತ್ತದೆ. ಅದಕ್ಕಾಗಿ ಈ ಹಿಂದೆಯೇ ಬೇಡಿಕೆ ಸಲ್ಲಿಸಲಾಗಿತ್ತು. ಅದರಂತೆ 11 ಕಡೆ ಸಿಸಿ ಕ್ಯಾಮರಾ ಅಳವಡಿಕೆಗೆ ಪಾಲಿಕೆಯು ಮಂಜೂರಾತಿ ನೀಡಿತ್ತು. ಆದರೆ ಸಿಸಿ ಕ್ಯಾಮರಾ ಅಳವಡಿಕೆ ಇನ್ನೂ ಕಾರ್ಯಗತಗೊಂಡಿಲ್ಲ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ‘ಈ ಬಗ್ಗೆ ಪೂರಕ ದಾಖಲೆ ಒದಗಿಸಿದರೆ ಪಾಲಿಕೆಯ ಜತೆ ಸಂಹವನ ನಡೆಸುವೆ’ ಎಂದು ಭರವಸೆ ನೀಡಿದರು.

ಗಾಂಜಾ ಸಹಿತ ಡ್ರಗ್ಸ್ ವ್ಯಸನಿಗಳು ಒಮ್ಮೆ ಸಿಕ್ಕಿಬಿದ್ದರೆ ಅನಂತರ ಅವರನ್ನು ವಾರಕ್ಮೊಮ್ಮೆಯಾದರೂ ಠಾಣೆಗೆ ಕರೆಯಿಸಿ ಸಹಿ ಪಡೆದು ಎಚ್ಚರಿಕೆ ನೀಡಬೇಕು. ಆಗ ಅವರು ತಮ್ಮ ಕೃತ್ಯ ಪುನರಾವರ್ತನೆ ಮಾಡುವುದನ್ನು ತಪ್ಪಿಸಲು ಸಾಧ್ಯವಿದೆ ಎಂದು ಸದಾಶಿವ ಉರ್ವಸ್ಟೋರ್ ಅಭಿಪ್ರಾಯಪಟ್ಟರು.

ಗೃಹರಕ್ಷಕರು ಪೊಲೀಸರೊಂದಿಗೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸುತಿದ್ದಾರೆ. ಆದರೆ ಅವರಿಗೆ ಇಎಸ್‌ಐ, ಪಿಎಫ್ ಸಹಿತ ಯಾವುದೇ ಸೌಲಭ್ಯಗಳಿಲ್ಲ. ಅಪಘಾತ ಅಥವಾ ಅಸೌಖ್ಯವಾದರೆ ವೈದ್ಯಕೀಯ ವೆಚ್ಚಕ್ಕೆ ವ್ಯವಸ್ಥೆಯೂ ಇಲ್ಲ. ಗೃಹರಕ್ಷಕ ದಳದಲ್ಲಿ ಶೇ.೫೦ಕ್ಕೂ ಅಧಿಕ ಮಂದಿ ದಲಿತರಿದ್ದಾರೆ. ಆದರೆ ಕೆಲವೊಮ್ಮೆ ಅವರು ಕರ್ತವ್ಯ ಮುಗಿಸಿ ಮನೆಗೆ ತಲುಪಲು ಪರದಾಡಬೇಕಾಗುತ್ತದೆ ಎಂದು ಸದಾಶಿವ ಉರ್ವಸ್ಟೋರ್ ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಬಿ.ಪಿ. ದಿನೇಶ್ ಕುಮಾರ್ ಗೃಹರಕ್ಷಕ ದಳದ ಸಿಬ್ಬಂದಿಯನ್ನು ಕೂಡ ಪೊಲೀಸ್ ಸಿಬ್ಬಂದಿಯಂತೆಯೇ ಪರಿಗಣಿಸಲಾಗುತ್ತದೆ. ಕರ್ತವ್ಯ ಮುಗಿದ ಅನಂತರ ಮನೆಗೆ ತಲುಪಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಆದಾಗ್ಯೂ ನಿರ್ದಿಷ್ಟ ದೂರುಗಳಿದ್ದರೆ ಗಮನಕ್ಕೆ ತರಬಹುದು. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಡಿಸಿಪಿ ಸಿದ್ಧಾರ್ಥ್ ಗೋಯೆಲ್ ಮಾತನಾಡಿ ಗೃಹರಕ್ಷಕ ದಳದವರ ಸೇವೆ ಖಾಯಂ ಅಲ್ಲ. ಹಾಗಾಗಿ ಅವರಿಗೆ ಸರಕಾರದ ಇತರ ಸೌಲಭ್ಯಗಳು ದೊರೆಯುತ್ತಿಲ್ಲ. ಈ ಬಗ್ಗೆ ಹೋಂಗಾರ್ಡ್ ಕಮಾಂಡೆಂಟ್ ಮೂಲಕ ಪ್ರಸ್ತಾವನೆ ಬಂದರೆ ಅದನ್ನು ಸರಕಾರದ ಗಮನಕ್ಕೆ ತರಲಾಗುವುದು. ಗೃಹರಕ್ಷಕರಿಗೆ ನೀಡಲು ಸಾಧ್ಯವಿರುವ ಎಲ್ಲ ಸಹಕಾರ ನೀಡಲಾಗುವುದು ಎಂದರು.

ಕಿನ್ನಿಗೋಳಿಯ ಶಾಲೆಯ ಎದುರು ರಸ್ತೆ ಬದಿ ನಡೆಯುತ್ತಿರುವ ವಾರದ ಸಂತೆಯನ್ನು ಸ್ಥಳಾಂತರಿಸಬೇಕು. ಸಣ್ಣ ಮಕ್ಕಳಿಗೆ ಆನ್‌ಲೈನ್ ತರಗತಿ ನಡೆಸದಂತೆ ಸರಕಾರದ ಗಮನ ಸೆಳೆಯಬೇಕು. ಉಳ್ಳಾಲದಲ್ಲಿ ದೈವದ ವಿಭಿನ್ನ ವೇಷ ಮಾಡಿ ಸಮುದಾಯವನ್ನು ನಿಂದನೆ ಮಾಡಲಾಗಿದೆ. ಅಂತಹವರ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಬೇಕು ಎಂಬ ಆಗ್ರಹ ಸಭೆಯಲ್ಲಿ ಕೇಳಿಬಂತು.

ಸಭೆಯಲ್ಲಿ ಎಸಿಪಿಗಳಾದ ಮಹೇಶ್ ಕುಮಾರ್, ಗೀತಾ ಕುಲಕರ್ಣಿ, ಧನ್ಯಾ ಎನ್.ನಾಯಕ್ ಉಪಸ್ಥಿತರಿದ್ದರು. ಇನ್‌ಸ್ಪೆಕ್ಟರ್ ಭಾರತಿ ಕಳೆದ ಸಭೆಯ ನಡಾವಳಿ ವಾಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News