"ಸುರತ್ಕಲ್ ಟೋಲ್ ಗೇಟ್ ತೆರವಿಗೆ ಒಂದು ವರ್ಷ: ಡಿ.1ರಂದು ಸಂಭ್ರಮಾಚರಣೆ"
ಸುರತ್ಕಲ್, ನ.15: ಇಲ್ಲಿನ ಅನಧೀಕತೃ ಸುರತ್ಕಲ್ ಟೋಲ್ ಗೇಟ್ ನಲ್ಲಿ ಟೋಲ್ ಸಂಗ್ರಹ ರದ್ದುಗೊಳಿಸಲು ಆರಂಭಿಸಿದ್ದ ಹೋರಾಟ ಗೆಲುವು ಕಂಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಡಿ.1ರಂದು ಸಂಭ್ರಮಾಚರಣೆ ಆಚರಿಸುವುದಾಗಿ ಹೋರಾಟ ಸಮಿತಿ ತಿಳಿಸಿದೆ.
ಟೋಲ್ ಸಂಗ್ರಹ ರದ್ದುಗೊಳಿಸಿ ಡಿಸೆಂಬರ್ ಗೆ ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಸುರತ್ಕಲ್ ಖಾಸಗಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಸುರತ್ಕಲ್ ಟೋಲ್ ಗೇಟ್ ನಲ್ಲಿ ಶುಲ್ಕ ಸಂಗ್ರಹ ರದ್ದತಿಗೆ ಆಗ್ರಹಿಸಿ ಸುದೀರ್ಘ ಏಳು ವರ್ಷಗಳ ಹೋರಾಟದ ಕೊನೆಯ ಘಟ್ಟದಲ್ಲಿ ಮೂವತ್ತೈದು ದಿನಗಳ ಕಾಲ ನಡೆದ ಅನಿರ್ಧಿಷ್ಟಾವಧಿ ಹಗಲು ರಾತ್ರಿ ಧರಣಿಯ ಪರಿಣಾಮ 2022 ಡಿಸೆಂಬರ್ 1ರಂದು ಕೇಂದ್ರ ಸರಕಾರದ ತೀರ್ಮಾನದ ಪ್ರಕಾರ ಟೋಲ್ ಸಂಗ್ರಹ ಅಧಿಕೃತವಾಗಿ ರದ್ದುಗೊಂಡು ಹೋರಾಟ ಗೆಲವು ಕಂಡಿತ್ತು. ಕರಾವಳಿಯ ಜನ ಹೋರಾಟಗಳ ಇತಿಹಾಸದಲ್ಲಿ ಸುರತ್ಕಲ್ ಟೋಲ್ ಗೇಟ್‌ನಲ್ಲಿ ಸುಂಕ ಸಂಗ್ರಹ ರದ್ದತಿ ಹೋರಾಟ ಮಹತ್ವದ ಸ್ಥಾನವನ್ನು ಹೊಂದಿದ್ದು, ಟೋಲ್ ಸಂಗ್ರಹ ರದ್ದತಿ ಆದೇಶ ಜಾರಿಗೆ ಬಂದ ಡಿಸೆಂಬರ್ 1ರಂದು ಸಂಜೆ ಮೂರು ಗಂಟೆಗೆ ಎನ್ಐಟಿಕೆ ಬಳಿ ಇರುವ ಸುರತ್ಕಲ್ ಟೋಲ್ ಗೇಟ್ ಸಮೀಪ ಪ್ರಥಮ ವರ್ಷದ ಸಂಭ್ರಮಾಚರಣೆ ನಡೆಸಲು ಸಭೆಯು ತೀರ್ಮಾನಿಸಿತು.
ಜೊತೆಗೆ, ಟೋಲ್ ಗೇಟ್ ನಲ್ಲಿ ಶುಲ್ಕ ಸಂಗ್ರಹ ಕೇಂದ್ರ ಸರಕಾರದ ಅಧಿಕೃತ ಆದೇಶದ ಪ್ರಕಾರ ರದ್ದುಗೊಂಡು ವರ್ಷ ಪೂರ್ಣಗೊಂಡರೂ ಟೋಲ್ ಸಂಗ್ರಹದ ಬೂತ್ ಗಳ ಸಹಿತ ಟೋಲ್ ಗೇಟ್ ನ ರಚನೆಗಳನ್ನು ತೆರವು ಗೊಳಿಸದೆ ಅಪಾಯಕಾರಿಯಾಗಿ ಹಾಗೆಯೆ ಬಿಡಲಾಗಿದೆ. ಇದರಿಂದ ಹಲವು ಅಪಘಾತಗಳು ಸಂಭವಿಸಿವೆ. ಆದುದರಿಂದ ನಿರುಪಯುಕ್ತ ಟೋಲ್ ರಚನೆಯನ್ನು ತಕ್ಷಣವೇ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಸುರತ್ಕಲ್, ನಂತೂರು ಹೆದ್ದಾರಿ ದುರಸ್ತಿಯಾಗಿದ್ದು, ನಿರ್ವಹಣೆ ಇಲ್ಲದೆ ಹದಗೆಟ್ಟಿದೆ. ತಕ್ಷಣವೇ ಹೆದ್ದಾರಿಯನ್ನು ಸುಸಜ್ಜಿತಗೊಳಿಸಬೇಕು. ನಂತೂರು, ಕೆಪಿಟಿ ಮೇಲ್ಸೇತುವೆ, ಕೂಳೂರು ಸೇತುವೆ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ನಂತೂರು, ಸುರತ್ಕಲ್ ರಾಷ್ಟ್ರೀಯ ಹೆದ್ದಾರಿಯನ್ನು ಟೋಲ್ ಮುಕ್ತ ರಸ್ತೆಯನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿ ಅದೇ ಸಂದರ್ಭ ಜನಾಗ್ರಹ ಸಭೆ ನಡೆಸಲು ಹೋರಾಟ ಸಮಿತಿಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಸಾಮಾಜಿಕ ಹೋರಾಟಗಾರರಾದ ಎಮ್.ಜಿ. ಹೆಗ್ಡೆ ವಹಿಸಿದ್ದರು. ಹೋರಾಟ ಸಮಿತಿಯ ಸಂಚಾಲಕ ಹಾಗೂ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅಜೆಂಡಾ ಮಂಡಿಸಿದರು. ಖಾಸಗಿ ಬಸ್ಸು ಮಾಲಕರ ಸಂಘದ ಮುಂದಾಳು ಕಿಶನ್ ಹೆಗ್ಡೆ ಕೊಳ್ಕೆಬೈಲ್, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಎಂ.ದೇವದಾಸ್, ಶೇಖರ ಹೆಜಮಾಡಿ, ರಘು ಎಕ್ಕಾರು, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್, ಮಾಜಿ ಉಪ ಮೇಯರ್ ಗಳಾದ ಪುರುಷೋತ್ತಮ ಚಿತ್ರಾಪುರ, ಮುಹಮ್ಮದ್ ಕುಂಜತ್ತಬೈಲ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಲ್ಪಿ ಡಿಕೋಸ್ತ, ವಿವಿಧ ಸಂಘಟನೆಗಳ ಪ್ರಮುಖರು, ಹೋರಾಟ ಸಮಿತಿಯ ಪದಾಧಿಕಾರಿಗಳಾದ ಶ್ರೀನಾಥ್ ಕುಲಾಲ್, ರಮೇಶ್ ಟಿ.ಎನ್., ಮೂಸಬ್ಬ ಪಕ್ಷಿಕೆರೆ, ಹರೀಶ್ ಪೇಜಾವರ, ಮನ್ಸೂರ್ ಸಾಗ್, ರಾಜೇಶ್ ಪೂಜಾರಿ ಕುಳಾಯಿ, ಹೇಮಂತ್ ಪೂಜಾರಿ, ಶ್ರೀಕಾಂತ್ ಸಾಲ್ಯಾನ್, ಮಾಜಿ ಕಾರ್ಪೊರೇಟರ್ ಅಯಾಝ್ ಕೃಷ್ಣಾಪುರ, ಶಮೀರ್ ಕಾಟಿಪಳ್ಳ, ಮಕ್ಸೂದ್ ಕಾನ, ಗಂಗಾಧರ ಬಂಜನ್, ಅದ್ದು ಕೃಷ್ಣಾಪುರ ಮತ್ತಿತರರು ಉಪಸ್ಥಿತರಿದ್ದರು.