ಗಣೇಶ ಚತುರ್ಥಿಗೆ ಸರಕಾರದಿಂದ ವಿಘ್ನ ಆರೋಪ : ಶಾಸಕರೇ ಸಂಕುಚಿತ ಭಾವನೆಯಿಂದ ಹೊರಬನ್ನಿ ಎಂದ ಪದ್ಮರಾಜ್

Update: 2024-09-05 09:25 GMT

ಮಂಗಳೂರು, ಸೆ.5: ಶಾಸಕರಾದ ವೇದವ್ಯಾಸ ಕಾಮತ್‌ರವರು ಆರೋಪಿಸಿರುವಂತೆ ಜಿಲ್ಲಾಡಳಿತವಾಗಲಿ, ಸರಕಾರವಾಗಲಿ ಗಣೇಶ ಚತುರ್ಥಿ ಆಚರಣೆಗೆ ಯಾವುದೇ ರೀತಿಯ ನಿರ್ಬಂಧ ವಿಧಿಸಿಲ್ಲ. ಶಾಸಕರು ಸಂಕುಚಿತ ಭಾವನೆಯಿಂದ ಹೊರಬರಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಯಾವುದೇ ಹಬ್ಬ ಆಚರಣೆಗೆ ಸಂಬಂಧಿಸಿ ಕಾಂಗ್ರೆಸ್ ಯಾವತ್ತೂ ತೊಡಕಾಗಿಲ್ಲ. ಬದಲಾಗಿ ಶ್ರದ್ಧಾ ಭಕ್ತಿಯಿಂದ ಹಬ್ಬ ಆಚರಣೆಗೆ ಪ್ರೇರಣೆ ನೀಡಿದೆ. ಹಾಗಾಗಿ ಗಣೇಶ ಹಬ್ಬ ಆಚರಣೆಗೆ ಸಂಬಂಧಿಸಿಯೂ ಯಾವುದೇ ಆತಂಕ ಬೇಡ ಎಂದರು.

ವಿಶೇಷ ಸಂಸ್ಕೃತಿಯನ್ನು ಹೊಂದಿರುವ ದ.ಕ. ಜಿಲ್ಲೆಯಲ್ಲಿ ಎಲ್ಲಾ ಧರ್ಮ, ಭಾಷೆಯವರು ಒಟ್ಟಾಗಿ ಶಿಸ್ತುಬದ್ಧವಾಗಿ ಹಬ್ಬ ಆಚರಿಸುತ್ತಾರೆ. ಇದನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ ಕಾರ್ಯಕ್ರಮ ಆಯೋಜಕರು ಸಿದ್ಧತೆಗಳನ್ನು ನಡೆಸುತ್ತಾರೆ. ಅದಕ್ಕಾಗಿ ಹಿಂದಿನ ಸರಕಾರದ ಅವಧಿಯಲ್ಲಿಯೂ ಆಯೋಜಕರು ಅನುಮತಿ ಕೇಳುವುದು ಸಾಮಾನ್ಯ. ಆದರೆ ಟ್ಯಾಬ್ಲೋಗಳ ವಿಚಾರದಲ್ಲಿ ಕಾಲಕಾಲಕ್ಕೆ ವ್ಯತ್ಯಾಸಗಳು ಆಗುತ್ತವೆ. ನಮ್ಮ ಸಂಸ್ಕೃತಿಗೆ ಕಳಂಕ ಬರುವ ಟ್ಯಾಬ್ಲೋಗಳ ಬಗ್ಗೆ ಗಮನ ಹರಿಸುವ ನಿಟ್ಟಿನಲ್ಲಿ ವಿವರ ಕೇಳುವುದರಲ್ಲಿ ತಪ್ಪೇನು? ಎಂದು ಪ್ರಶ್ನಿಸಿದ ಪದ್ಮರಾಜ್, ಕಾಂಗ್ರೆಸ್‌ನಲ್ಲಿರುವ ನಾವು ಕೂಡಾ ಹಿಂದೂಗಳೇ. ಜಿಲ್ಲೆಯಲ್ಲಿ ಹಿಂದೂಗಳು ಹಬ್ಬಗಳನ್ನು ಅದ್ದೂರಿಗಿಂತಲೂ ಮುಖ್ಯವಾಗಿ ಭಕ್ತಿಪೂರ್ವಕವಾಗಿ ಆಚರಿಸುತ್ತೇವೆ ಎಂದರು.

ನಗರದ ಟ್ರಾಫಿಕ್ ಒತ್ತಡದ ಕುರಿತಂತೆಯೂ ಶಾಸಕರು ಬಾಯಿಚಪಲಕ್ಕೆ ಹೇಳಿಕೆ ನೀಡಿದ್ದಾರೆ. ಉಸ್ತುವಾರಿ ಸಚಿವರ ಮೌಖಿಕ ಆದೇಶದ ಮೇರೆಗೆ ಬದಲಾವಣೆ ಮಾಡಲಾಗಿದೆ ಎಂದು ತಪ್ಪು ಆರೋಪ ಮಾಡಿದ್ದಾರೆ. ಬೆಳೆಯುತ್ತಿರುವ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹದಗೆಟ್ಟಿರುವುದು ಎಲ್ಲರಿಗೂ ತಿಳಿದ ವಿಚಾರ. ಸ್ಥಳೀಯ ಶಾಸಕರಾಗಿರುವ ವೇದವ್ಯಾಸ ಕಾಮತ್‌ರವರು ಇದಕ್ಕಾಗಿ ಶಾಶ್ವತ ಪರಿಣಿತರ ತಂಡದ ಬಗ್ಗೆ ಮಾತನಾಡಿದ್ದಾರೆಯೇ ತಿಳಿಸಲಿ. ಈ ಬಗ್ಗೆ ಉಸ್ತುವಾರಿ ಸಚಿವರ ಬಗ್ಗೆ ಚರ್ಚೆ ನಡೆಸಿದ್ದೀರಾ, ಅವರೇನಾದರೂ ನಿಮ್ಮ ಸಲಹೆಯನ್ನು ನಿರ್ಲಕ್ಷಿಸಿದ್ದಾರೆಯೇ ಎಂದು ಪ್ರಶ್ನಿಸಿದರು.

ಸ್ವಯಂ ಘೋಷಿತ ಆಸ್ತಿ ತೆರಿಗೆ ವಿಚಾರದಲ್ಲಿಯೂ ಜನರನ್ನು ದಾರಿ ತಪ್ಪಿಸುವ ಹೇಳಿಕೆಯನ್ನು ಶಾಸಕರು ನೀಡಿದ್ದಾರೆ. ಆದರೆ ಕಾಂಗ್ರೆಸ್ ಆಸ್ತಿ ತೆರಿಗೆ ಹೆಚ್ಚಳ ಮಾಡಿಲ್ಲ. ನೀರಿನ ದರ ಕೂಡಾ ಬಿಜೆಪಿ ಅವಧಿಯಲ್ಲಿ ಏರಿಕೆಯಾಗಿರುವುದು. ಕಾಂಗ್ರೆಸ್ ಅವಧಿಯಲ್ಲಿ 25000 ಲೀಟರ್ ನೀರು 65 ರೂ.ಗಳಿಗೆ ನೀಡಲಾಗುತ್ತಿತ್ತು. ಬಿಜೆಪಿ ಆಡಳಿತದಲ್ಲಿ 8000 ಲೀಟರ್‌ಗೆ 140 ರೂ. ಮಾಡಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಮತ್ತೆ ಇಳಿಕೆಯಾಗಿದ್ದರೂ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಇಳಿಕೆಯಾಗದಿರುವ ಬಗ್ಗೆ ಉತ್ತರ ನೀಡಲಿ ಎಂದು ಪದ್ಮರಾಜ್‌ರವರು ಶಾಸಕರಿಗೆ ಸವಾಲೆಸೆದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಶಾಸಕರು ಆರೋಪದಂತೆ ಸರಕಾರದ ಕಾನೂನಿನಿಂದ ಕಳೆದ ವರ್ಷ ಅಥವಾ ಈ ವರ್ಷ ಎಷ್ಟು ಕಡೆ ಗಣೇಶ ಪ್ರತಿಷ್ಟಾಪನೆಗೆ ತೊಂದರೆ ಆಗಿದೆ ಎಂಬುದನ್ನು ತಿಳಿಸಲಿ ಎಂದು ಸವಾಲೆಸೆದರು.

ಹಬ್ಬಗಳು ಸುಲಲಿತವಾಗಿ ನಡೆಯುವ ನಿಟ್ಟಿನಲ್ಲಿ ಕೆಲವೊಂದು ಮುನ್ನೆಚ್ಚರಿಕೆಯ ಕ್ರಮಗಳನ್ನು ಸರಕಾರ ಜಾರಿ ತರುತ್ತದೆಯೇ ಹೊರತು ತೊಂದರೆ ನೀಡುವುದಕ್ಕಾಗಿ ಅಲ್ಲ ಎಂದು ಅವರು ಹೇಳಿದರು.

 

ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಂದ್ಯಾ ಕಾಲೇಜು ಮುಚ್ಚುವ ನಿರ್ಧಾರ ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ಈಗಾಗಲೇ ವಿವಿಯ ಕುಲಪತಿ ಜತೆ ಚರ್ಚಿಸಲಾಗಿದೆ. ಹಿಂದಿನ 5 ವರ್ಷಗಳಲ್ಲಿ ವಿವಿಯಲ್ಲಿ ಕೈಗೊಂಡ ಕೆಲವೊಂದು ಕೆಟ್ಟ ನಿರ್ಧಾರಗಳಿಂದ ಈ ದುಸ್ಥಿತಿಗೆ ಕಾರಣವಾಗಿದ್ದು ಇದರ ಬಗ್ಗೆ ಉನ್ನತ ಶಿಕ್ಷಣ ಸಚಿವರ ಜತೆ ಮಾತನಾಡಿ ವಿವಿಯ ಪುನಶ್ಚೇತನಕ್ಕೆ ನಮ್ಮ ಜನಪ್ರತಿನಿಧಿಗಳು ಹಾಗೂ ನಾಯಕರು ಪ್ರಯತ್ನಿಸುತ್ತಿದ್ದಾರೆ. ಅಲ್ಲಿ ಈ ಹಿಂದೆ ಆಗಿರುವ ವ್ಯವಹಾರಗಳ ಬಗ್ಗೆಯೂ ತನಿಖೆ ಮಾಡುವ ಕೆಲಸ ಸರಕಾರ ಮಾಡಲಿದೆ ಎಂದು ಪದ್ಮರಾಜ್ ಆರ್.ರವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಗೋಷ್ಟಿಯಲ್ಲಿ ಕಾಂಗ್ರೆಸ್ ನಾಯಕ ಪ್ರೇಮ್ ಬಳ್ಳಾಲ್‌ಬಾಗ್ ಉಪಸ್ಥಿತರಿದ್ದರು.

 

ಮನಪಾದಲ್ಲಿ ವಿಪಕ್ಷವಾದ ಕಾಂಗ್ರೆಸ್ ಸದಸ್ಯರು ಕಳೆದ ಮೂರ್ನಾಲ್ಕು ತಿಂಗಳಿಂದ ಏರಿಕೆಯಾಗಿರುವ ಸ್ವಯಂ ಘೋಷಿತ ಆಸ್ತಿ ತೆರಿಗೆ ಇಳಿಸುವಂತೆ ಪ್ರತಿಭಟನೆ ನಡೆಸಿದ್ದಾರೆ. ಮಾರ್ಗಸೂಚಿ ದರದ ಶೇಕಡಾವಾರು ದರವನ್ನು ಇಳಿಕೆ ಮಾಡುವಂತೆ ಆಗ್ರಹಿಸಲಾಗಿದೆ. ಈ ಮಾರ್ಗಸೂಚಿ ದರದ ಮೇಲೆ ಶೇಕಡಾವಾರು ನಿಗದಿ ಮಾಡುವುದು ಮನಪಾದ ಆಡಳಿತ. ಹಿಂದಿನ ಸಭೆಯಲ್ಲಿ ಮೇಯರ್ ಅವರಿಗೆ ಈ ಅಧಿಕಾರ ನೀಡಲಾಗಿತ್ತು. ಆದರೆ ಕಳೆದ 40 ದಿನಗಳಿಂದ ಅದನ್ನು ಕಡಿಮೆ ಮಾಡಿ ಸರಕಾರಕ್ಕೆ ಕಳುಹಿಸುವ ಕಾರ್ಯ ಮಾಡದಿರುವುದು ಮನಪಾ ಆಡಳಿತದ ವೈಫಲ್ಯ ಎಂದು ಮನಪಾ ಹಿರಿಯ ಸದಸ್ಯ ಶಶಿಧರ ಹೆಗ್ಡೆ ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News