ಪಿಲಿಕುಳಕ್ಕೆ ಬರಲಿದೆ ಪೆಂಗ್ವಿನ್, ಹಳದಿ ‘ಅನಕೊಂಡ’

Update: 2024-09-18 17:23 GMT

ಮಂಗಳೂರು: ಪ್ರಾಣಿ ವಿನಿಮಯ ಯೋಜನೆಯಡಿಯಲ್ಲಿ ದೇಶದ ವಿವಿಧ ಮೃಗಾಲಯಗಳಿಂದ ಅಪರೂಪದ ಪ್ರಾಣಿ, ಪಕ್ಷಿ ಹಾಗೂ ಉರಗಳನ್ನು ತರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಶೀಘ್ರದಲ್ಲೇ ಒರಿಸ್ಸಾದ ನಂದನ್ ಕಾನನ್ ಮೃಗಾಲಯದಿಂದ ಗಂಡು ಏಷ್ಯಾಟಿಕ್ ಸಿಂಹ, ಅಳಿವಿನಂಚಿನಲ್ಲಿರುವ ತೋಳ, ಘರಿಯಾಲ್ ಮೊಸಳೆ, ಅಪರೂಪದ ಪಕ್ಷಿಗಳು ಆಗಮಿಸಲಿವೆ.

ಪಿಲಿಕುಳದಲ್ಲಿರುವ ಹೆಚ್ಚುವರಿ ಪ್ರಾಣಿಗಳಾದ ಧೋಳ( ಕಾಡು ನಾಯಿ), ರೆಟಿಕ್ಯುಲೆಟೆಡ್ ಹೆಬ್ಬಾವು. ಮರಬೆಕ್ಕು, ಬಿಳಿ ಗರುಡ ಇತ್ಯಾದಿಗಳನ್ನು ನೀಡಲಾಗುತ್ತದೆ.

ಬಾಂಬೈನ ಬೈಕುಳ ಮೃಗಾಲಯದಿಂದ ದಕ್ಷಿಣ ಅಮೆರಿಕ ಮೂಲದ ಪೆಂಗ್ವಿನ್ ಪಕ್ಷಿಗಳನ್ನು ತರಿಸಲಾಗುವುದು. ಪಿಲಿಕುಳದಿಂದ ಮಾರ್ಷ ಮೊಸಳೆಗಳನ್ನು ಬದಲಿಗೆ ನೀಡಲಾಗುವುದು

ಮದ್ರಾಸ್ ಕ್ರೊಕೊಡೈಲ್ ಬ್ಯಾಂಕ್‌ನಿಂದ ‘ಹಳದಿ ಅನಕೊಂಡ’ ಉರಗಗಳು ಆಗಮಿಸಲಿವೆ. ಬದಲಿಗೆ ಸರ್ಪ ಮತ್ತು ವಿಷಕಾರಿ ಹಾವುಗಳನ್ನು ನೀಡಲಾಗುವುದು.

ಪಂಜಾಬ್‌ನ ಮಹೇಂದ್ರ ಚೌದರಿ ಮೃಗಾಲಯದಿಂದ ಅಳಿವಿನಂಚಿನಲ್ಲಿರುವ ತೋಳಗಳು, ಫರಿಯಾಲ್ ಮೊಸಳೆ, ಅಪರೂಪದ ಪಕ್ಷಿಗಳು ಬರಲಿವೆ. ಬದಲಿಗೆ ಹೆಚ್ಚುವರಿ ಪ್ರಾಣಿಗಳಾದ ಧೋಳ (ಕಾಡು ನಾಯಿ, ರೆಟಿಕ್ಯುಲೆಟೆಡ್ ಹೆಬ್ಬಾವು. ಮುಸಕೋಟಿ ಬಾತುಕೋಳಿ ಹಾಗೂ ಹೈನಾ (ಕತ್ತೆ ಕಿರುಬ)ಗಳನ್ನು ನೀಡಲಾಗುವುದು.

ತಮಿಳು ನಾಡಿನ ವನ್ಡಲೂರ್ ಮೃಗಾಲಯದಿಂದ ಅಳಿವಿನಂಚಿನಲ್ಲಿರುವ ತೋಳಗಳು, ಹಾಗೂ ಅಪರೂಪದ ಪಕ್ಷಿಗಳನ್ನು ತರಿಸಲಾಗುವುದು. ಬದಲಿಗೆ ಕಾಳಿಂಗ ಸರ್ಪ ಮತ್ತು ಹೈನಾ (ಕತ್ತೆಕಿರುಬ) ಗಳನ್ನು ನೀಡಲಾಗುವುದು.

ಆಂಧ್ರ ಪ್ರದೇಶದ ತಿರುಪತಿ ಮೃಗಾಲಯದಿಂದ ಅಪರೂಪದ ಪಕ್ಷಿಗಳನ್ನು ತರಿಸಲಾಗುವುದು. ಬದಲಿಗೆ ಮರಬೆಕ್ಕು ಇತ್ಯಾದಿಗಳನ್ನು ನೀಡಲಾಗುವುದು.

ಪೆಂಗ್ವಿನ್‌ಗಳಿಗೆ ಪೂರಕ ಪರಿಸರವನ್ನು ಒದಗಿಸಲು ವಿಶೇಷ ಆವರಣದ ಅವಶ್ಯಕತೆಯಿದೆ, ದಾನಿಗಳು ಅಥವಾ ಸಿಎಸ್‌ಆರ್ ಅನುದಾನದ ಸಹಾಯದಿಂದ ಅವರಣವನ್ನು ರಚಿಸಲಾಗುವುದು. ಪೆಂಗ್ವಿನ್‌ಗಳನ್ನು ಹೊಂದುವುದರಿಂದ, ಮೃಗಾಲಯಕ್ಕೆ ಆಗಮಿಸುವ ವೀಕ್ಷಕರ ಸಂಖ್ಯೆ ಕೂಡ ಗಮನಾರ್ಹವಾಗಿ ಹೆಚ್ಚಾಗಲಿದ್ದು, ಅದಾಯವು ಏರಿಕೆಯಾಗಲಿದೆ ಎಂದು ಪಿಲಿಕುಳ ಜೈವಿಕ ಉದ್ಯಾವನದ ನಿರ್ದೇಶಕ ಹೆಚ್.ಜಿ. ಭಂಡಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News