ಚೆಂಬುಗುಡ್ಡೆ: ಹೊಂಡಮಯವಾದ ರಸ್ತೆ, ಸಂಚಾರ ದುಸ್ತರ

Update: 2024-06-30 18:25 GMT

ಉಳ್ಳಾಲ: ಇಲ್ಲಿನ ಚೆಂಬುಗುಡ್ಡೆ ಮಸೀದಿ ಹಿಂಭಾಗ ದಲ್ಲಿರುವ ರಸ್ತೆ ಹೊಂಡಗಳಿಂದ ಕೂಡಿದ್ದು, ಸಂಚಾರ ದುಸ್ತರವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರಸ್ತೆ ಮೂಲಕ ಕುತ್ತಾರ್‌ವರೆಗೆ ಸಂಪರ್ಕಿಸಬಹುದಾಗಿದ್ದು, ರಸ್ತೆ ದುರಸ್ತಿಗೆ ನಗರಸಭೆ, ಶಾಸಕರು ಸಹಕಾರ ನೀಡುತ್ತಿಲ್ಲ. ಸ್ಥಳೀಯ ಕೌನ್ಸಿಲರ್ ಶಶಿಕಲಾ ಹಣ ಮಂಜೂರು ಆಗಿದೆ ಎಂದಷ್ಟೇ ಹೇಳಿ ಕೈತೊಳೆದುಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

‘ವಾರ್ತಾಭಾರತಿ’ ಜೊತೆ ಮಾತನಾಡಿದ ಸ್ಥಳೀಯರು, ‘ಈ ಭಾಗದಲ್ಲಿ ಹಲವು ಮನೆಗಳಿದ್ದು, ಇಲ್ಲಿನ ವಿದ್ಯಾರ್ಥಿಗಳು ಈ ಹೊಂಡ ತುಂಬಿದ ರಸ್ತೆಯಲ್ಲಿ ಬಿದ್ದುಕೊಂಡೇ ಶಾಲೆ, ಮದ್ರಸಕ್ಕೆ ತೆರಳುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನ ಸೆಳೆದರೂ ಸ್ಪಂದಿಸುತ್ತಿಲ್ಲ’ ಎಂದು ತಮ್ಮ ಅಳಲು ತೋಡಿಕೊಂಡರು.

ವಾಹನಗಳು ಹೋಗುವಾಗ ರಸ್ತೆಯಲ್ಲಿರುವ ಕೆಸರು ಪಾದಚಾರಿ ಮೇಲೆ ಎರಚುತ್ತಿದೆ. ಈ ಬಗ್ಗೆ ದುರಸ್ತಿಗೆ ಆಗ್ರಹಿಸಿದರೆ ಶಾಸಕರು 1.20 ಕೋಟಿ ರೂ. ಈ ರಸ್ತೆ ಅಭಿವೃದ್ಧಿಗೆ ಇಟ್ಟಿದ್ದಾರೆ ಎಂದು ಹಾರಿಕೆಯ ಉತ್ತರ ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಈ ರಸ್ತೆ ಶೀಘ್ರ ದುರಸ್ತಿಪಡಿಸಬೇಕು. ಇದಕ್ಕೆ ಸ್ಥಳೀಯ ಕೌನ್ಸಿಲರ್ ಮುತುವರ್ಜಿ ವಹಿಸಬೇಕು. ಇಲ್ಲಿಗೆ ಮಂಜೂರಾದ ಟೆಂಡರ್ ಅನ್ನು ಬೇರೆ ಕಡೆ ಕೊಂಡು ಹೋಗಿ ರಾಜಕೀಯ ಮಾಡುತ್ತಿದ್ದಾರೆ. ಈ ರಸ್ತೆ ಅಭಿವೃದ್ಧಿ ಮಾಡದೆ ತೊಂದರೆ ನೀಡುತ್ತಿದ್ದಾರೆ ಎಂದು ಸ್ಥಳೀಯರು ನೋವು ತೋಡಿಕೊಂಡರು.

ಈ ಸಂದರ್ಭದಲ್ಲಿ ಚೆಂಬುಗುಡ್ಡೆ ಮಸೀದಿ ಅಧ್ಯಕ್ಷ ಇಮ್ತಿಯಾಝ್, ಉಪಾಧ್ಯಕ್ಷ ಇಕ್ಬಾಲ್, ಕಾರ್ಯದರ್ಶಿ ರಿಯಾಝ್, ಜೊತೆ ಕಾರ್ಯದರ್ಶಿ ಲತೀಫ್ ಮುಸ್ತಫ, ಕೆರೆ ಬೈಲ್ ನವಾಝ್, ಇಮ್ರಾನ್, ನವಾಝ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News