ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ: ಸಚಿವ ಝಮೀರ್ ಅಹ್ಮದ್ ಖಾನ್
ಮಂಗಳೂರು : ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ. ಶಿಕ್ಷಣದಿಂದಲೇ ಭವಿಷ್ಯ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಕಣಚೂರು ವೈದ್ಯಕೀಯ ಕಾಲೇಜು ವತಿಯಿಂದ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತಾನಾಡಿದ ಅವರು, ಶಿಕ್ಷಣ ಇಲ್ಲದಿದ್ದರೆ ಶೂನ್ಯ. ರಾಜಕೀಯ ಅಧಿಕಾರ ಸಿಗಬಹುದು. ಆದರೆ ಶಿಕ್ಷಣ ಇಲ್ಲದಿದ್ದರೆ ಏನೂ ಸಾಧಿಸಲಾಗದು ಎಂದು ತಿಳಿಸಿದರು.
ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು. ಕೆಎಂಡಿಸಿ ಹಾಗೂ ಅಲ್ಪಸಂಖ್ಯಾತ ನಿರ್ದೇಶನಾಲಯದ ವತಿಯಿಂದ ಎಂಬಿಬಿಸ್, ಎಂಜಿನಿಯರಿಂಗ್ ಸೇರಿ ಉನ್ನತ ಶಿಕ್ಷಣ ಕ್ಕೆ ಸಾಕಷ್ಟು ನೆರವು ದೊರೆಯುತ್ತಿದೆ. ವೈದ್ಯಕೀಯ ಮೆರಿಟ್ ವಿದ್ಯಾರ್ಥಿಗಳಿಗೆ ನೀಡುವ ಸಾಲದ ಮೊತ್ತ ಐದು ಲಕ್ಷ ರೂ. ಗೆ ಹೆಚ್ಚಿಸಲು, ವಿದೇಶದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ 20 ರಿಂದ 30 ಲಕ್ಷ ರೂ. ವರೆಗೆ ಹೆಚ್ಚಿಸಲು ತೀರ್ಮಾನ ಮಾಡಿದ್ದೇವೆ. ಇದರ ಅನುಕೂಲ ಪಡೆಯಬೇಕು ಎಂದು ಹೇಳಿದರು.
ಪೋಷಕರು ತಮ್ಮ ಮಕ್ಕಳು ವಿದ್ಯಾವಂತ ರಾಗಿ ಉನ್ನತ ಹುದ್ದೆ ಏರುವ ಕನಸು ಕಂಡಿರುತ್ತಾರೆ. ನೀವು ನನಸು ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಕಣಚೂರು ವಿದ್ಯಾಸಂಸ್ಥೆ ಯಲ್ಲಿ 2018 ರಲ್ಲಿ 7 ಸಾವಿರ ಮಕ್ಕಳು ಪ್ರವೇಶ ಪಡೆದಿದ್ದು, ಈಗ ಅದರ ಸಂಖ್ಯೆ 10 ಸಾವಿರಕ್ಕೆ ಏರಿದೆ. ಇದು ಸಂಸ್ಥೆಯು ಗುಣಮಟ್ಟ ಶಿಕ್ಷಣ ನೀಡುತ್ತಿರುವುದಕ್ಕೆ ಸಾಕ್ಷಿ ಎಂದು ತಿಳಿಸಿದರು.
ಪೌರಾಡಳಿತ ಸಚಿವ ರಹೀಮ್ ಖಾನ್, ಮಾತನಾಡಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹಮದ್ ಖಾನ್ ಅವರು ಶಿಕ್ಷಣ ಕ್ಕೆ ಹೆಚ್ಚು ಒತ್ತು ಕೊಟ್ಟು ಬಡ ಕುಟುಂಬದ ಮಕ್ಕಳಿಗೆ ಇಲಾಖೆ ಮೂಲಕ ಉತ್ತಮ ನೆರವು ಕೊಡಿಸುತ್ತಿದ್ದಾರೆ ಎಂದು ತಿಳಿಸಿದರು.
ಕಣಚೂರು ವಿದ್ಯಾಸಂಸ್ಥೆ ಶೇ.100 ರಷ್ಟು ಫಲಿತಾಂಶ ಪಡೆದಿರುವುದು ಸಂತೋಷಕರ ಎಂದು ಹೇಳಿದರು.
ಪರಿಷತ್ ಸದಸ್ಯ ಹರೀಶ್ ಕುಮಾರ್ ಸಂಸ್ಥೆ ಮುಖ್ಯಸ್ಥ ಡಾ. ಹಾಜಿ ಯು ಕೆ ಮೋನು, ಡಾ. ಯು. ಟಿ.ಇಫ್ತಾಕಾರ್ ಅಲಿ, ಜಿ. ಎ. ಬಾವ, ಅಬ್ದುಲ್ ರೆಹಮಾನ್, ಮುಕುಲ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ದಲ್ಲಿ ಸಚಿವರಾದ ಝಮೀರ್ ಅಹ್ಮದ್ ಖಾನ್ ಹಾಗೂ ರಹೀಮ್ ಖಾನ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.