ಅನಿವಾಸಿ ಭಾರತೀಯರಿಗೆ ಜೀವನ ಭದ್ರತೆಯ ಜೊತೆಗೆ ಮತದಾನದ ಅವಕಾಶವನ್ನೂ ಕಲ್ಪಿಸಿ: ವಿಧಾಸಭಾ ಅಧಿವೇಶನದಲ್ಲಿ ಶಾಸಕ ಅಶೋಕ್ ರೈ
ಪುತ್ತೂರು: ಅನಿವಾಸಿ ಭಾರತೀಯರ ಜೀವನ ಭದ್ರೆತೆಯ ಜೊತೆಗೆ ಅವರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲು ಹೊಸ ನಿಯಮವನ್ನು ರೂಪಿಸುವಂತೆ ಪುತ್ತೂರು ಶಾಸಕರಾದ ಅಶೋಕ್ ರೈ ಅವರು ವಿಧಾಸಭಾ ಅಧಿವೇಶನದಲ್ಲಿ ಸರಕಾರವನ್ನು ಆಗ್ರಹಿಸಿದ್ದಾರೆ.
ಅಧಿವೇಶನದಲ್ಲಿ ಅನಿವಾಸಿ ಭಾರತೀಯರ ಪರ ಮಾತನಾಡಿದ ಅವರು ದೇಶದಲ್ಲಿ ಸುಮಾರು 140 ಕೋಟಿ ಜನಸಂಖ್ಯೆ ಇದ್ದು ಇದರಲ್ಲಿ 7 ಶೇ. ಮಂದಿ ಪಾಸ್‍ಪೋರ್ಟು ಹೊದಿದ್ದಾರೆ. 1.03 ಕೋಟಿ ಮಂದಿ ವಿವಿಧ ದೇಶದಲ್ಲಿ ಉದ್ಯೋಗ ನಿಮಿತ್ತ ತೆರಳಿದ್ದು ಅಲ್ಲಿ ವಿವಿಧ ಕಡೆಗಳಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಇವರ ಪೈಕಿ ಉನ್ನತ ಹುದ್ದೆಯಲ್ಲಿಯೂ ಇದ್ದಾರೆ, ಬಡವರೂ ಇದ್ದಾರೆ. 60 ರಿಂದ 70 ವರ್ಷ ಪ್ರಾಯವಾದಾಗ ಅವರು ತಮ್ಮ ಸ್ವದೇಶಕ್ಕೆ ಮರಳುತ್ತಾರೆ. ಬೇರೆಯೇ ವಾತಾವರಣದಲ್ಲಿ ಅನೇಕ ವರ್ಷಗಳ ಕಾಲ ತಮ್ಮ ಕುಟುಂಬಕ್ಕಾಗಿ ಜೀವನ ಸವೆಸಿದ ಅನಿವಾಸಿ ಭಾರತೀಯರು ತಮ್ಮ ವೃದ್ಧಾಪ್ಯದಲ್ಲಿ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದಾರೆ. ಅವರ ಜೀವನಕ್ಕೆ ಭದ್ರತೆಯನ್ನು ಕಲ್ಪಿಸಬೇಕಾಗಿದ್ದು ಇದಕ್ಕಾಗಿ ಸರಕಾರ ಹೊಸ ನಿಯಮವನ್ನು ರೂಪಿಸಬೇಕು. ಅನಿವಾಸಿ ಭಾರತೀಯರಿಂದಾಗಿ 133 ಮಿಲಿಯನ್ ಡಾಲರ್ ಇನ್ವೆಸ್ಟ್ ಮೆಂಟ್ ನಮ್ಮ ದೇಶದಲ್ಲಿ ಆಗುತ್ತಿದ್ದು, ಇದು ದೇಶದ ಅಭಿವೃದ್ದಿಗೂ ಪೂರಕವಾಗಿದೆ. ಈ ನಿಟ್ಟಿನಲ್ಲಿ ತಮ್ಮ ಕುಟುಂಬ ವನ್ನು ಸಲಹುವ ಉದ್ದೇಶದಿಂದ ವಿದೇಶದಲ್ಲಿ ಕೆಲಸ ಮಾಡಿ ಭಾರತಕ್ಕೆ ಮರಳುವ ಅವರಿಗೆ ಜೀವನ ಭದ್ರತೆಯನ್ನು ಸರಕಾರ ರೂಪಿಸಬೇಕು ಎಂದು ಮನವಿ ಮಾಡಿದರು.
ಮತದಾನಕ್ಕೂ ಅವಕಾಶ ಕಲ್ಪಿಸಿ
ಅನಿವಾಸಿ ಭಾರತೀಯರು ಮತದಾನದಿಂದ ವಂಚಿತರಾಗುತ್ತಿದ್ದಾರೆ. ನಮಗೆ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅವರಿಂದ ಬೇಡಿಕೆಯೂ ಇದೆ. ಈ ಕಾರಣಕ್ಕೆ ಸರಕಾರ ಮತದಾನಕ್ಕೆ ಅವಕಾಶವನ್ನು ಮಾಡಿಕೊಡಬೇಕು. ಸರಕಾರ ಅನಿವಾಸಿ ಭಾರತೀಯರ ಪರವಾಗಿದೆ ಎಂಬುದನ್ನು ನಾನು ಭಾವಿಸುತ್ತೇನೆ. ಈ ಬಗ್ಗೆ ಹೊಸ ಕಾನೂನನ್ನು ರಚನೆ ಮಾಡಿ ಎಲ್ಲಾ ಅನಿವಾಸಿ ಭಾರತೀಯರಿಗೆ ಮತದಾನದಲ್ಲಿ ಭಾಗವಹಿಸುವಂತೆ ಅವಕಾಶ ಕಲ್ಪಿಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿದರು.