ಪೇಜಾವರ ಮಠದ ಸಂವಿಧಾನ ವಿರೋಧಿ, ಜಾತಿ ತಾರತಮ್ಯ ಹೇಳಿಕೆ ವಿರುದ್ಧ ಜನಜಾಗೃತಿ: ಸಮಾನ‌ ಮನಸ್ಕರ ಎಚ್ಚರಿಕೆ

Update: 2024-11-01 13:49 GMT

ಸಾಂದರ್ಭಿಕ ಚಿತ್ರ

ಮಂಗಳೂರು: ಬಿ.ಕೆ ಹರಿಪ್ರಸಾದ್ ರನ್ನು ಗುರಿಯಾಗಿಸಿ ದ್ವೇಷಪೂರಿತ ಹೇಳಿಕೆ, ನಿರ್ಣಯ ಕೈಗೊಂಡಿರುವ ಜಾತಿವಾದಿ, ಪ್ರತಿಗಾಮಿ ಶಕ್ತಿಗಳ ಕ್ರಮವನ್ನು ವಿರೋಧಿಸಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನಾಗರಿಕರು, ಚಿಂತಕರು, ಸಮಾನತೆಯ ಪರ ಇರುವ ಹೋರಾಟಗಾರರು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಪೇಜಾವರ ಮಠದ ಸಂವಿಧಾನ ವಿರೋಧಿ, ಜಾತಿ ತಾರತಮ್ಯ ಹೇಳಿಕೆ ವಿರುದ್ಧ ಜನಜಾಗೃತಿ ಮಾಡುವುದಾಗಿ ಸಮಾನ‌ ಮನಸ್ಕರು ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ನ್ಯಾಯದ ಪರವಾದ ಗಟ್ಟಿ ಧ್ವನಿ, ಹಿರಿಯ ರಾಜಕಾರಣಿ, ಹಿಂದುಳಿದ ಸಮುದಾಯಗಳ ಪ್ರಬಲ ನಾಯಕ ಬಿ ಕೆ ಹರಿಪ್ರಸಾದ್ ಅವರನ್ನು ಗುರಿಯಾಗಿಸಿ ಅಖಿಲ ಭಾರತ ಬ್ರಾಹ್ಮಣ ಮಹಾ ಸಭಾವು ಗಾಯತ್ರಿ ಮಂತ್ರದ ಸಮಾರೋಪ ಕಾರ್ಯಕ್ರಮದಲ್ಲಿ ಮಾನಹಾನಿಕರ, ದ್ವೇಷಪೂರಿತ ಹೇಳಿಕೆ ನೀಡಿರುವುದು, ಬಿಕೆ ಹರಿಪ್ರಸಾದ್ ಅವರ ವಿರುದ್ಧ ಅಕ್ಷೇಪಾರ್ಹ ಪದಗಳನ್ನು ಬಳಸಿ ಖಂಡನಾ ನಿರ್ಣಯ ಅಂಗೀಕರಿಸಿ ಪೇಜಾವರ ಮಠದ ಸ್ವಾಮಿಗಳಲ್ಲಿ ಕ್ಷಮಾಪಣೆಗೆ ಆಗ್ರಹಿಸಿರುವುದು, ಅವರನ್ನು ಹಿಂದು ಸಮಾಜದ ವಿರೋಧಿ ಎಂಬಂತೆ ಚಿತ್ರಿಸುತ್ತಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಇದಲ್ಲದೆ, ಬಿಜೆಪಿ, ಶಾಸಕ ಹರೀಶ್ ಪೂಂಜಾ ಅಸಭ್ಯ ಭಾಷೆಯನ್ನು ಬಳಸಿ ಹೇಳಿಕೆ ನೀಡಿದ್ದಾರೆ. ಹರಿಪ್ರಸಾದ್ ಅವರ ಡಿಎನ್ಎ ಕುರಿತು ನೀಡಿದ ಹೇಳಿಕೆ ಹುಟ್ಟಿನ ಮೂಲವನ್ನು ಪ್ರಶ್ನಿಸುವ ತೀರಾ ಅಸಭ್ಯದಿಂದ ಕೂಡಿದೆ. ಹರೀಶ್ ಪೂಂಜಾ ತನ್ನ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಯಾಚಿಸಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದು ಸಮಾನ‌ ಮನಸ್ಕರು ಹೇಳಿಕೆ ನೀಡಿದ್ದಾರೆ.

ಬಿ ಕೆ ಹರಿಪ್ರಸಾದ್ ರವರು ಜಾತಿ ಗಣತಿ ಕುರಿತು ಪೇಜಾವರ ಶ್ರೀ ಗಳ ಹೇಳಿಕೆಗೆ ನೀಡಿದ ಪ್ರತಿಕ್ರಿಯೆಯಲ್ಲಿ ಅಂತಹ ಯಾವ ತಪ್ಪೂ ಇರಲಿಲ್ಲ. ಪೇಜಾವರ ಶ್ರೀಗಳಿಗೆ ದಲಿತ, ಹಿಂದುಳಿದ ಜಾತಿಗಳ ಕುರಿತಾಗಿ ಇರುವ ಪೂರ್ವಾಗ್ರಹ, ಅಸಹನೆ ಅವರ ಹೇಳಿಕೆಯಲ್ಲಿ ಸ್ಪಷ್ಟವಾಗಿ ಧ್ವನಿಸಿತ್ತು. ಶತಮಾನಗಳಿಂದ ಅಸಮಾನತೆಗೆ ಗುರಿಯಾದ ಸಮುದಾಯಗಳಿಗೆ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಕನಿಷ್ಟ ನ್ಯಾಯ ದೊರಕಲು ಜಾತಿ ಗಣತಿಯ ಅಗತ್ಯ ಇದೆ. "ಹಿಂದುಗಳು ಎಲ್ಲಾ ಒಂದು, ದಲಿತರ ಕೇರಿಗೆ ಹೋಗಿ ಹಿಂದು ಧರ್ಮದ ಪರ ಪ್ರಚಾರ ಮಾಡುತ್ತೇನೆ" ಎಂದು ತನ್ನ ಬೆನ್ನು ತಾನೆ ತಟ್ಟಿಕೊಳ್ಳುವ ಪೇಜಾವರ ಶ್ರೀಗಳು ಹಿಂದು ಧರ್ಮದಲ್ಲಿರುವ ಕೆಳ ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದ ಜಾತಿ ಗಣತಿಯನ್ನು ವಿರೋಧಿಸುವುದು ಯಾಕೆ ? ಪೇಜಾವರ ಶ್ರೀ ಗಳ ಈ ಅಸಹನೆ, ವಿರೋಧವನ್ನು ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇರಿಸಿರುವ ಕಾಂಗ್ರೆಸ್ ಪಕ್ಷದ ಜವಾಬ್ದಾರಿಯುತ ನಾಯಕರು ಆಗಿರುವ ಬಿ ಕೆ ಹರಿಪ್ರಸಾದ್ ಖಂಡಿಸಿ ಮಾತಾಡಿದ್ದರಲ್ಲಿ ತಪ್ಪೇನಿದೆ ? ಪೇಜಾವರ ಶ್ರೀ ಗಳಿಗೆ ವಿರೋಧಿಸುವ ಸ್ವಾತಂತ್ರ್ಯ ಇರುವಂತೆ, ಅವರ ವಿರೋಧವನ್ನು ಖಂಡಿಸುವ ಸ್ವಾತಂತ್ರ್ಯ, ಹಕ್ಕು ಹಿಂದುಳಿದ ಸಮುದಾಯಗಳ ನಾಯಕ ಬಿ ಕೆ ಹರಿಪ್ರಸಾದ್ ಅವರಿಗೂ ಇದೆ. ಇದೇ ಖಂಡನಾ ಸಭೆಯಲ್ಲಿ ಪೇಜಾವರ ಸ್ವಾಮಿಗಳು ಸ್ವತಹ ಭಾಗವಹಿಸಿ ಬಿ ಕೆ ಹರಿಪ್ರಸಾದ್ ಅವರ ಘನತೆ ಕುಗ್ಗಿಸುವ ರೀತಿಯ ಮಾತುಗಳನ್ನು ಸುಳ್ಳುಗಳನ್ನು ಪೋಣಿಸಿ ಹೇಳಿದ್ದಾರೆ. ಇದು ಕಾವಿ ತೊಟ್ಟವರಿಗೆ ಹೇಳಿಸಿದ ನಡೆಯಲ್ಲ. "ರಾಜಕಾರಣಿಗಳಿಗೆ ಇರುವಂತೆ ವಾಕ್ ಸ್ವಾತಂತ್ರ್ಯ ತನಗೂ ಇದೆ" ಎಂದು ಸ್ವಾಮಿಗಳು ಹೇಳಿದ್ದಾರೆ. ವಾಕ್ ಸ್ವಾತಂತ್ರ್ಯದ ಕುರಿತು ಹರಿಪ್ರಸಾದ್‌ ರನ್ನು ಪ್ರಶ್ನಿಸುವ ಸ್ವಾಮಿಗಳು ತನ್ನ ಮಠದ ಒಳಗಡೆ ವಾಕ್ ಸ್ವಾತಂತ್ರ್ಯಕ್ಕೆ, ಪ್ರಶ್ನಿಸುವ ಹಕ್ಕಿಗೆ ಎಷ್ಟು ಅವಕಾಶ ನೀಡಿದ್ದಾರೆ ಎಂದು ಮೊದಲು ಸ್ಪಷ್ಟ ಪಡಿಸಲಿ ಎಂದು ಹೇಳಿದ್ದಾರೆ.

ಉಡುಪಿ ಮಠದಲ್ಲಿ ಬ್ರಾಹ್ಮಣೇತರ ಜಾತಿಗಳಿಗೆ ಸಹಪಂಕ್ತಿ ಭೋಜನ ಇಲ್ಲದಿರುವುದು ಇಡೀ ನಾಡಿಗೆ ತಿಳಿದಿರುವ ಸತ್ಯ. ಶೂದ್ರ ಜಾತಿಗಳನ್ನಂತೂ ಹತ್ತಿರಕ್ಕೂ ಸುಳಿಯಲು ಬಿಡದೆ ಅಡಿಗಳ ಅಂತರದಲ್ಲಿ ನಿಲ್ಲಿಸಲಾಗುತ್ತದೆ‌. ಅವರಿಗೆ ಪ್ರಸಾದ ರೂಪದ ಹಣ್ಣು ಹಂಪಲುಗಳನ್ನು ಕೈ ಸೋಕದಂತೆ ಇದೆ ಸ್ವಾಮಿಗಳು ಎಸೆದು ನೀಡುತ್ತಾರೆ. ಹಿಂದುಳಿದ ಜಾತಿಗಳು ಬಿಡಿ, ಉಡುಪಿ ಮಠದಲ್ಲಿ ಮಾಧ್ವೇತರ ಬ್ರಾಹ್ಮಣ ಪಂಗಡಗಳಿಗೆ ಸಹಪಂಕ್ತಿ ಭೋಜನ ಯಾಕಿಲ್ಲ ? ಸ್ವತಹ ಪೇಜಾವರ ಶ್ರೀಗಳು ಯಾವತ್ತಾದರು ಮಾಧ್ವರಲ್ಲದ ಬ್ರಾಹ್ಮಣರ ಜೊತೆ ಮಠದಲ್ಲಿ ಸಹ ಭೋಜನ ಮಾಡಿದ್ದಾರೆಯೆ ಎಂಬ ಪ್ರಶ್ನೆಗೆ ಉತ್ತರಿಸಲಿ. ಹಿಂದುಳಿದ ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆ ಯಾಗಿರುವ ಜಾತಿ ಗಣತಿಯನ್ನು ವಿರೋಧಿಸಲು, ಜಾತ್ಯಾತೀತತೆ, ಪ್ರಜಾಪ್ರಭುತ್ವ, ಸಂವಿಧಾನದ ಆಶಯಗಳನ್ನು ಉಲ್ಲೇಖಿಸುವ ಪೇಜಾವರ ಶ್ರೀಗಳಿಗೆ ನೆಲದ ಕಾನೂನು, ಸಮಾನತೆ, ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಕನಿಷ್ಟ ಗೌರವಗಳಾದರೂ ಇರುವುದು ಅನುಮಾನ. ತನ್ನ ಸುತ್ತಲ ಸಮಾಜದಲ್ಲಿ ನಡೆಯುವ ಜಾತಿ, ಧರ್ಮಾಧಾರಿತ ಹಿಂಸೆಗೆ ಕುರುಡಾಗಿರುವ, ಇಂತಹ ಅಸಮಾನತೆಯ ಪ್ರಾಯೋಜಕ ಶಕ್ತಿಗಳ ಪೋಷಕರಾಗಿರುವ ಇವರಿಗೆ ವಾಕ್ ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಕುರಿತು ಉಲ್ಲೇಖಿಸಲು ಯಾವ ನೈತಿಕತೆಯೂ ಇಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪೇಜಾವರ ಶ್ರೀಗಳು ಮಠಾಧೀಶರಾಗಿ, ಪೀಠಾಧಿಪತಿಯಾಗಿ ಬಿಜೆಪಿ ಪರವಾದ, ಹಿಂದುಳಿದ, ದಲಿತ ಸಮುದಾಯಗಳ ವಿರುದ್ಧವಾದ ಹೇಳಿಕೆ ನೀಡುತ್ತಿರುವುದು ಇದು ಮೊದಲಲ್ಲ, ಬಿಜೆಪಿಯ ಕೋಮುವಾದಿ ರಾಜಕಾರಣವನ್ನು ಶ್ರೀಗಳು ಬಹಿರಂಗವಾಗಿ ಬೆಂಬಲಿಸುತ್ತಾ ಬಂದಿದ್ದಾರೆ. ಉಡುಪಿಯ ಬೇರೆ ಯಾವ ಮಠಾಧೀಶರೂ ರಾಜಕಾರಣದ ಪಾತ್ರ ವಹಿಸದೆ, ವೈದಿಕ ಧರ್ಮದ ಆಚರಣೆಗಳ ಕೆಲಸಗಳನ್ನಷ್ಟೆ ಮಾಡುತ್ತಾ ಬಂದಿದ್ದಾರೆ. ಪೇಜಾವರ ಶ್ರೀಗಳು ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿಗೆ ಅನುಕೂಲಕರವಾದ, ಜಾತಿ ತಾರತಮ್ಯ, ಮತೀಯ ಅಸಹನೆಯ ಹೇಳಿಕೆಗಳನ್ನು ಉತ್ಸಾಹದಿಂದ ನೀಡುತ್ತಾ ಬಂದಿದ್ದಾರೆ‌. ಕೆಳ ಜಾತಿಗಳು, ಧಾರ್ಮಿಕ ಅಲ್ಪಸಂಖ್ಯಾತರ ಕುರಿತು ಆಕ್ರಮಣಕಾರಿ ನಿಲುವುಗಳಿಗೆ ಶ್ರೀ ಗಳು ಈಗಾಗಲೆ ಕುಖ್ಯಾತರಾಗಿದ್ದಾರೆ‌. ಈ ರಾಜಕೀಯ ನಿಲುವುಗಳ ಹಿನ್ನಲೆಯಲ್ಲಷ್ಟೆ ಬಿ ಕೆ ಹರಿಪ್ರಸಾದ್ ತನ್ನ ಅಭಿಪ್ರಾಯವನ್ನು ಸ್ಪಷ್ಟ ಧ್ವನಿಯಲ್ಲಿ ವ್ಯಕ್ತಪಡಿಸಿದ್ದಾರೆ‌. ಹರಿಪ್ರಸಾದರ ಈ ನಿಲುವನ್ನು, ಅಭಿಪ್ರಾಯವನ್ನು ನಾವು ಬೆಂಬಲಿಸುತ್ತೇವೆ, ಅನುಮೋದಿಸುತ್ತೇವೆ. ಇದರಲ್ಲಿ ಬ್ರಾಹ್ಮಣ ಸಮುದಾಯ ಇಡಿಯಾಗಿ ಆಕ್ರೋಶಗೊಳ್ಳುವಂತಹದ್ದು ಏನೂ ಇಲ್ಲ. ಬಿ ಕೆ ಹರಿಪ್ರಸಾದ್ ಬ್ರಾಹ್ಮಣ ಸಮುದಾಯದ ವಿರೋಧಿಯೂ ಅಲ್ಲ. ಯಾವುದೇ ಜಾತಿಯನ್ನು ಇಡಿಯಾಗಿ ವಿರೋಧಿಸುವ ಜಾಯಮಾನವೂ ಅವರದ್ದಲ್ಲ. ಹರಿಪ್ರಸಾದ್ ಅವರದ್ದು ಸೈದ್ದಾಂತಿಕ ವಿರೋಧ ಮಾತ್ರ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿ ಕೆ ಹರಿಪ್ರಸಾದ್ ಅವರ ಸ್ಪಷ್ಟ ಸೈದ್ದಾಂತಿಕ ನಿಲುವು, ಪ್ರಖರ ಮಾತುಗಳು, ಸಮಾಜದಲ್ಲಿ ಅವರು ಉಂಟು ಮಾಡುತ್ತಿ ರುವ ರಾಜಕೀಯ ಜಾಗೃತಿಯಿಂದ ವಿಚಲಿತಗೊಂಡಿರುವ ಸಂಘ ಪರಿವಾರ ಬಿ ಕೆ ಹರಿಪ್ರಸಾದ್ ಹೇಳಿಕೆಯನ್ನು ತಿರುಚಿ ಹಿಂದು ವಿರೋಧಿ ಎಂದು ಹಣೆಪಟ್ಟಿ ಕಟ್ಟಲು ಯತ್ನಿಸುತ್ತಿದೆ‌. ಇದು ತಮ್ಮ ಶ್ರೇಣೀಕೃತ ವ್ಯವಸ್ಥೆಗೆ ಸಣ್ಣ ವಿರೋಧ ಧ್ವನಿಯೂ ಏಳದಂತೆ ಹತ್ತಿಕ್ಕುವ ಯತ್ನವಲ್ಲದೆ ಮತ್ತೇನಲ್ಲ. ಅದಕ್ಕಾಗಿ ಹರೀಶ್ ಪೂಂಜಾ ರಂತಹ ಹೊಡಿ ಬಡಿ ಸಂಸ್ಕೃತಿಯ, ಹಸಿ ಕೋಮುವಾದಿ ರಾಜಕಾರಣಿಯನ್ನು ಹಾಗೂ, ಕರ್ಮಠ ಜಾತಿವಾದಿಗಳನ್ನು ಬಿ ಕೆ ಹರಿಪ್ರಸಾದ್ ವಿರುದ್ಧ ಚೂ ಬಿಟ್ಟಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ನಾವೆಲ್ಲಾ ಬಿ ಕೆ ಹರಿಪ್ರಸಾದ್ ಜೊತೆಗಿದ್ದೇವೆ. ಹಿಂದುಳಿದ, ದಲಿತ, ಸಮಾನತೆ ಪರವಾದ ಚಳವಳಿಗಳೂ ಹರಿಪ್ರಸಾದ್ ಜೊತೆ ನಿಲ್ಲಲಿದೆ‌. ಹರಿಪ್ರಸಾದ್ ವಿರುದ್ಧದ ಅಪಪ್ರಚಾರದ ಅಭಿಯಾನ ನಿಲ್ಲಿಸದಿ ದ್ದಲ್ಲಿ ಅದಕ್ಕೆ ತಕ್ಕ ಪ್ರತ್ಯುತ್ತರ ನಾವು ಸಂಘಟಿತವಾಗಿ ನೀಡಲಿದ್ದೇವೆ‌, ಹರೀಶ್ ಪೂಂಜಾ ಹಾಗೂ ಬ್ರಾಹ್ಮಣ ಮಹಾ ಸಭಾ ಹಿಂದುಳಿದ ಸಮುದಾಯಗಳ ಹಿರಿಯ ನಾಯಕನ ವಿರುದ್ಧದ ತನ್ನ ಕೊಳಕು ಮಾತುಗಳನ್ನು ಹಿಂಪಡೆಯಬೇಕು ಆಗ್ರಹಿಸುತ್ತಿ ದ್ದೇವೆ. ಶ್ರೀ ಗಳು ಹಾಗೂ ಅವರ ಬೆಂಬಲಿಗರ ನಡೆ ಹೀಗೆಯೆ ಮುಂದುವರಿದರೆ ಪೇಜಾವರ ಶ್ರೀಗಳು ಹಾಗೂ ಪೇಜಾವರ ಮಠದ ಸಂವಿಧಾನ ವಿರೋಧಿ, ಜಾತಿ ತಾರತಮ್ಯ, ಕೆಳ ಜಾತಿಗಳ ಕುರಿತಾದ ಅಸಹನೆಯ ಎದುರಾಗಿ ಜನಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಲಿದ್ದೇವೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ.

ಮಂಗಳೂರಿನಲ್ಲಿ ನಡೆದ ಗಾಯತ್ರಿ ಮಂತ್ರ ದ ಸಮಾರೋಪ ಕಾರ್ಯಕ್ರಮ ಎಂಬ ತೀರಾ ಧಾರ್ಮಿಕ ವಿಧಿ ವಿಧಾನಗಳ ವೇದಿಕೆಯಲ್ಲಿ ಅಖಿಲ ಭಾರತ ಬ್ರಾಹ್ಮಣ ಪರಿಷತ್ತಿನ ನಾಯಕತ್ವ ಬಿ.ಕೆ.ಹರಿ ಪ್ರಸಾದ್ ರವರ ಮೇಲೆ ದಾಳಿ ನಡೆಸಿದ್ದು ಮಾತ್ರ ಅಲ್ಲದೇ, ಶತಮಾನಗಳ ಕಾಲ ಅಬಾಧಿತವಾಗಿ ದಲಿತರನ್ನು, ಆದಿವಾಸಿ ಗಳನ್ನು ಮತ್ತು ಶೂದ್ರ ಸಮುದಾಯದ ಮೇಲೆ ನಡೆಸಿದ ದಬ್ಬಾಳಿಕೆ ,ಶೋಷಣೆ ಮತ್ತು ಕೌರ್ಯವನ್ನು ನಿರ್ಲಜ್ಜವಾಗಿ ಸಮರ್ಥಿಸಿ ಅದನ್ನು ಮತ್ತೆ ಮುಂದುವರಿಸು ವುದನ್ನು ಬಹಿರಂಗ ವಾಗಿ ಘೋಷಿಸಿದ ಕಾರ್ಯ ಕ್ರಮವಾಗಿದೆ. ಹಿಂದು ಐಕ್ಯತೆಯ ಕುರಿತು ಬೊಗಳೆ ಬಿಡುವ ಸನಾತನ ಸಿದ್ದಾಂತಿಗಳು ಗಾಯತ್ರಿ ಮಂತ್ರ ಕಾರ್ಯಕ್ರಮದಲ್ಲಿ ಹಿಂದು ಸಮುದಾಯದ ಇತರೆ ಜಾತಿಗಳನ್ನು ಬಿಡಿ, ಬ್ರಾಹ್ಮಣರಲ್ಲಿನ ಒಳಪಂಗಡಗಳ ಐಕ್ಯತೆ ಸಾಧಿಸಲೂ ಸೋತಿದ್ದಾರೆ. ತಮ್ಮೊಳಗಿನ ಭಿನ್ನತೆಯನ್ನು ತೋರ್ಪಡಿಸಿಕೊಂಡಿದ್ದಾರೆ. ಗಾಯತ್ರಿ ಮಂತ್ರ ಕಾರ್ಯಕ್ರಮದಲ್ಲಿ ಸನಾತನ ಧರ್ಮದ ಪ್ರಸ್ತಾಪ ರಕ್ತಸಿಕ್ತ ಅಧ್ಯಾಯದ ಮರು ಸ್ರಷ್ಟಿಯಾಗಿ ಶೋಷಿತ ವರ್ಗಕ್ಕೆ ಗಂಡಾಂತರದ ಮುನ್ಸೂಚನೆ ಯಾಗಿದೆ. ಈ ಅಪಾಯದ ವಿರುದ್ಧ ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕಾಗುತ್ತದೆ ಎಂದು ಈ ಮೂಲಕ ತಿಳಿಯಪಡಿಸುತ್ತೇವೆ ಎಂದು ಸಮಾನ ಮನಸ್ಕಾರಾದ ಡಾ. ಗಣನಾಥ ಶೆಟ್ಟಿ ಎಕ್ಕಾರು (ನಿವೃತ್ತ ಪ್ರಾಂಶುಪಾಲರು, ಜನಪದ ತಜ್ಞರು), ಡಾ. ಶ್ರೀನಿವಾಸ ಕಕ್ಕಿಲ್ಲಾಯ (ವೈದ್ಯರು, ಬರಹಗಾರರು), ಡಾ. ಶಿವರಾಮ ಶೆಟ್ಟಿ (ನಿವೃತ್ತ ಪ್ರಾಧ್ಯಾಪಕರು, ಚಿಂತಕರು), ಡಾ. ಉದಯ ಇರ್ವತ್ತೂರು (ನಿವೃತ್ತ ಪ್ರಾಂಶುಪಾಲರು, ಬರಹಗಾರರು), ಡಾ. ಕೃಷ್ಣಪ್ಪ ಕೊಂಚಾಡಿ (ಸಂಚಾಲಕರು, ಪ್ರಗತಿಪರ ಚಿಂತಕರ ವೇದಿಕೆ), ಡಾ. ವಸಂತ ಕುಮಾರ್ (ನಿವೃತ್ತ ಪ್ರಾಂಶುಪಾಲರು), ಎಂ‌. ದೇವದಾಸ್ ( ರಾಜ್ಯ ಮುಖಂಡರು, ದಲಿತ ಸಂಘರ್ಷ ಸಮಿತಿ, ಬಿ ಕೆ ಕೃಷ್ಣಪ್ಪ ಸ್ಥಾಪಿತ), ದಿನೇಶ್ ಕುಕ್ಕಜಡ್ಕ (ವ್ಯಂಗ್ಯಚಿತ್ರಕಾರರು), ಜಯನ್ ಮಲ್ಪೆ (ಆಂಬೆಡ್ಕರ್ ಯುವಸೇನೆ, ಉಡುಪಿ), ನವೀನ್ ಸೂರಿಂಜೆ (ಪತ್ರಕರ್ತರು, ಬರಹಗಾರರು), ಪ್ರಭಾಕರ ಕಾಪಿಕಾಡ್ (ರಂಗಕರ್ಮಿಗಳು), ಸುನಿಲ್ ಕುಮಾರ್ ಬಜಾಲ್ (ಕಾರ್ಮಿಕ ನಾಯಕರು, ಮಂಗಳೂರು), ವಾಸುದೇವ ಉಚ್ಚಿಲ (ಚಿಂತಕರು, ಮಂಗಳೂರು), ಸಂತೋಷ್ ಬಜಾಲ್ (ಜಿಲ್ಲಾ ಕಾರ್ಯದರ್ಶಿ, ಡಿವೈಎಫ್ಐ ದಕ್ಷಿಣ ಕನ್ನಡ), ಗುಲಾಬಿ ಬಿಳಿಮಲೆ ( ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಮಂಗಳೂರು), ಭಾರತಿ ಬೋಳಾರ (ಅಧ್ಯಕ್ಷರು, ಜನವಾದಿ ಮಹಿಳಾ ಸಂಘಟನೆ, ಮಂಗಳೂರು), ಶ್ರೀನಿವಾಸ ಕಾರ್ಕಳ (ಬರಹಗಾರರು, ಮಂಗಳೂರು), ಮನೋಜ್ ವಾಮಂಜೂರು (ಕಾರ್ಯದರ್ಶಿ, ಸಮುದಾಯ ಕರ್ನಾಟಕ) ಹೇಳಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News