ಮೇಯರ್ ಫೋನ್‌ ಇನ್‌ಗೆ ಸಾರ್ವಜನಿಕರ ಸ್ಪಂದನೆ: ನೀರು, ರಸ್ತೆ ಸಮಸ್ಯೆಗಳೇ ಅಧಿಕ

Update: 2023-09-30 12:11 GMT

ಮಂಗಳೂರು, ಸೆ.30: ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಫೋನ್‌ಇನ್ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ದೂರುಗಳ ಮಹಾಪೂರವೇ ಹರಿದಿದ್ದು, ಒಂದು ಗಂಟೆಯಲ್ಲಿ 23 ದೂರವಾಣಿ ಕರೆಗಳನ್ನು ಮೇಯರ್ ಸ್ವೀಕರಿಸಿದರು.

ಐದು ವರ್ಷಗಳ ಬಳಿಕ ಪುನರಾರಂಭಗೊಂಡ ಫೋನ್‌ಇನ್ ಕಾರ್ಯಕ್ರಮದಲ್ಲಿ ನೀರು ಹಾಗೂ ರಸ್ತೆಗಳ ಸಮಸ್ಯೆ ಕುರಿ ತಂತೆ ಬಹುತೇಕ ದೂರುಗಳು ಕೇಳಿ ಬಂದಿದ್ದು, ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಪ್ರತಿ ತಿಂಗಳು ಫೋನ್ ಇನ್ ಕಾರ್ಯಕ್ರಮ ನಡೆಸುವುದಾಗಿ ಹೇಳಿದರು.

ನಗರದ ಹಲವೆಡೆ ಕ್ರಾಂಕ್ರೀಟೀಕರಣಗೊಂಡ ರಸ್ತೆಗಳ ಅಂಚುಗಳನ್ನು ಸಮತಟ್ಟುಗೊಳಿಸದಿರುವ ಕಾರಣ ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗುತ್ತಿರುವ ಬಗ್ಗೆ ಸಾರ್ವಜನಿಕರೊಬ್ಬರು ದೂರಿದಾಗ, ಅಂತಹ ರಸ್ತೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಮೇಯರ್ ಸೂಚನೆ ನೀಡಿದರು.

ನಂತೂರು ಜಂಕ್ಷನ್‌ನಲ್ಲಿ ಸಂಚಾರ ಅಸ್ತವ್ಯಸ್ತವಾಗಿರುವುದಾಗಿ ಸಾರ್ವಜನಿಕರೊಬ್ಬರ ಕರೆಗೆ ನಗರ ಸಂಚಾರ ಪೊಲೀಸ್ ಅಧಿಕಾರಿಗಳ ಜತೆ ಈ ಬಗ್ಗೆ ಚರ್ಚಿಸುವುದಾಗಿ ಮೇಯರ್ ಹೇಳಿದರು.

ಪಾರ್ಕಿಂಗ್ ನಿಯಮ ಉಲ್ಲಂಘನೆ ಬಗ್ಗೆ 13 ದೂರು

ವಸತಿ ಸಮುಚ್ಛಯದ ಪಾರ್ಕಿಂಗ್ ಪ್ರದೇಶವನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವ ಬಗ್ಗೆ 13 ದೂರುಗಳು ಬಂದಿದ್ದು, ನಿಯಮ ಉಲ್ಲಂಘಿಸಿದ ಕಟ್ಟಡದ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಮೊದಲ ಹಂತದಲ್ಲಿ ತಪ್ಪಿತಸ್ಥರಿಗೆ ಶೀಘ್ರದಲ್ಲಿಯೇ ನೋಟೀಸ್ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.

ಅಣಬೆ ಫ್ಯಾಕ್ಟರಿಗೆ ಪಾಲಿಕೆ ತಂಡ

ವಾಮಂಜೂರಿನಲ್ಲಿ ನಿರ್ಮಿಸಲಾಗಿರುವ ಅಣಬೆ ಫ್ಯಾಕ್ಟರಿ ಹೊರಸೂಸುವ ತ್ಯಾಜ್ಯದಿಂದ ಪರಿಸರದಲ್ಲಿ ದುರ್ನಾತ ಹರಡಿದೆ. ಫ್ಯಾಕ್ಟರಿಗೆ ಬಂದು ಹೋಗುವ ಘನ ವಾಹನಗಳಿಂದ ಇಲ್ಲಿನ ರಸ್ತೆಗಳು ಹಾಳಾಗಿವೆ. ಜೊತೆಗೆ ದಿನ 24 ಗಂಟೆ ಸಹಜ ಜೀವನಕ್ಕೆ ಅಡ್ಡಿಯಾಗಿದೆ. ಆದ್ದರಿಂದ ಈ ಫ್ಯಾಕ್ಟರಿಯನ್ನು ಜನವಸತಿ ಕಡಿಮೆ ಇರುವ ಕೈಗಾರಿಕಾ ಪ್ರದೇಶಕ್ಕೆ ಸ್ಥಳಾಂತರಿ ಸುವಂತೆ ಸ್ಥಳೀಯ ನಿವಾಸಿಗಳಾದ ಗೀತಾ ಮತ್ತು ರೀಟಾ ಎಂವಬರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ಫ್ಯಾಕ್ಟರಿ ಯಾವ ರೀತಿ ಕಾರ್ಯನಿರ್ವಹಿಸಬೇಕು ಎನ್ನುವ ಕುರಿತು ಜಿಲ್ಲಾಧಿಕಾರಿಯವರು ಮಾರ್ಗಸೂಚಿ ಹೊರಡಿಸಿದೆ. ಈ ಮಾರ್ಗಸೂಚಿ ಪಾಲನೆಯಾಗಿದೆಯೇ ಎಂದು ಪಾಲಿಕೆಯ ತಂಡ ಸ್ಥಳಕ್ಕೆ ಬೇಟಿ ನೀಡಿ ಬಳಿಕ ಜಿಲ್ಲಾಧಿಕಾರಿಗೆ ವರದಿ ನೀಡಲಿದೆ ಎಂದರು.

ಬೀದಿ ಬದಿ ವ್ಯಾಪಾರಸ್ಥರು ನಗರದ ಅನೇಕ ಕಡೆ ರಸ್ತೆ ಹಾಗೂ ಫುಟ್‌ಪಾತ್ ಅತಿಕ್ರಮಣ ನಡೆಸಿದ್ದಾರೆ. ಈ ಬಗ್ಗೆ ಪಾಲಿಕೆ ಕ್ರಮ ಕೈಗೊಳ್ಳಬೇಕು. ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿದೆಯೇ ಎನ್ನುವುದರ ಕುರಿತು ಮೇಲ್ವಿಚಾರಣೆ ನಡೆ ಸಲು ಸಾರ್ವಜನಿಕರು ಹಾಗೂ ತಜ್ಞರನ್ನು ಒಳಗೊಂಡ ಉಸ್ತುವಾರಿ ಸಮಿತಿ ರಚಿಸಬೇಕು ಎಂದು ಸಾಮಾಜಿಕ ಕಾರ್ಯ ಕರ್ತ ಜಿ.ಕೆ.ಭಟ್ ಮನವಿ ಮಾಡಿದರು.

ಸಂಚಾರಿ ಪೊಲೀಸ್ ಅಧಿಕಾರಿಗಳ ಜೊತೆ ಸಮಾಲೋಚಿಸಿ ಫುಟ್‌ಪಾತ್ ಅತಿಕ್ರಮಣ ತಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಹೇಳಿದರು.


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News