ಪುತ್ತೂರು: ಮನೆಮಂದಿಯನ್ನು ಕಟ್ಟಿಹಾಕಿ ದರೋಡೆ ಪ್ರಕರಣ; ಆರು ಮಂದಿ ಬಂಧನ

Update: 2023-09-29 16:51 GMT

ಪುತ್ತೂರು: ಸೆ.6ರಂದು ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಕುದ್ಕಾಡಿ ಎಂಬಲ್ಲಿ ಮನೆ ಮಂದಿಯನ್ನು ಕಟ್ಟಿಹಾಕಿ ದರೋಡೆ ನಡೆಸಿದ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸರು ಕೇರಳ ಮೂಲದ ಐವರು ಸೇರಿದಂತೆ ಒಟ್ಟು ಆರು ಮಂದಿ ಯನ್ನು ಬಂಧಿಸಿ, ದರೋಡೆ ನಡೆಸಿದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.

ಅವರು ಶುಕ್ರವಾರ ಸಂಜೆ ಪುತ್ತೂರು ಎಎಸ್‍ಪಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರಕರಣವನ್ನು ಭೇದಿಸಿದ ಬಗ್ಗೆ ಮಾಹಿತಿ ನೀಡಿದರು.

ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪೆರುವಾಯಿ ಗ್ರಾಮದ ಕಿಣಿಯರ ಪಾಲು ನಿವಾಸಿ ಸುಧೀರ್(38), ಕಾಸರಗೋಡು ಪೈವಳಿಕೆ ಸಮೀಪದ ಮಂಜೇಶ್ವರ ಗ್ರಾಮದ ಅಟ್ಟೆಗೋಳಿ ಮಂಜಳ್ತೋಡಿ ನಿವಾಸಿ ಕಿರಣ್ ಟಿ (29), ಕಾಸರಗೋಡು ಜಿಲ್ಲೆಯ ಕಾಂಞಗಾಡ್ ಸಮೀಪದ ಮೂವರಿಕುಂಡ ಕಂಡತ್ತೀಲ್ ವೀಡು ನಿವಾಸಿ ಸನಾಲ್ ಕೆ.ವಿ ( 34), ಕಾಸರಗೋಡು ತಾಲೂಕಿನ ಎಡನಾಡು ಗ್ರಾಮದ ಮುಗು ಸೀತಂಗೋಳಿ ನಿವಾಸಿ ಫೈಝಲ್ (37), ಸೀತಂಗೋಳಿಯ ಅಬ್ದುಲ್ ನಿಝಾರ್ (21) ಮತ್ತು ಮಂಜೇಶ್ವರ ತಾಲೂಕಿನ ಶೇಣಿ ಗ್ರಾಮದ ಹೊಸಗದ್ದೆ ನಿವಾಸಿ ವಸಂತ ಎಂ (31) ಬಂಧಿತ ಆರೋಪಿಗಳು.

ಆರೋಪಿಗಳಾದ ಕಿರಣ್ ಟಿ, ಸುಧೀರ್ ಕುಮಾರ್ ಮಣಿಯಾಣಿ, ಸನಾಲ್ ಕೆ.ವಿ ಎಂಬವರನ್ನು ಗುರುವಾರ ರಾತ್ರಿ ಪುತ್ತೂರು ತಾಲೂಕಿನ ನಿಡ್ಪಳ್ಳಿಯಲ್ಲಿ ಬಂಧಿಸಲಾಗಿದ್ದು, ಉಳಿದಂತೆ ಫೈಝಲ್, ನಿಝಾರ್ ಮತ್ತು ವಸಂತ ಎಂಬವರನ್ನು ಶುಕ್ರವಾರ ಕಾಸರಗೋಡು ಜಿಲ್ಲೆಯ ಮುನಿಯಂಪಾಲ ಎಂಬಲ್ಲಿ ಬಂಧಿಸಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರು, ಕಾರಿನಲ್ಲಿದ್ದ ಚೂರಿ, ಕಬ್ಬಿಣದ ರಾಡ್, ತಲುವಾರು, ಬೈಕ್ ಹಾಗೂ ದರೋಡೆ ಮಾಡಿರುವ ಚಿನ್ನದ ಬಳೆ, ಚೈನು ಮತ್ತು ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳಿಗೆ ಕ್ರಿಮಿನಲ್ ಹಿನ್ನಲೆ

ದರೋಡೆ ನಡೆಸಿದ 7 ಮಂದಿ ಆರೋಪಿಗಳು ಎಲ್ಲರೂ ಕ್ರಿಮಿನಲ್ ಹಿನ್ನಲೆ ಹೊಂದಿದವರಾಗಿದ್ದಾರೆ. ಆರೋಪಿ ರವೀ ಕೇರಳದಲ್ಲಿ ನಡೆದ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದವನಾಗಿದ್ದಾನೆ. ಕೇರಳದ ಜೈಲ್‍ನಲ್ಲಿದ್ದ ಈತ ಪೆರೋಲ್‍ನಲ್ಲಿ ಹೊರ ಬಂದಿದ್ದಾಗ ಈ ಕೃತ್ಯದಲ್ಲಿ ಭಾಗಿಯಾಗಿ ಬಳಿಕ ಇದೀಗ ಜೈಲಿಗೆ ಮರಳಿದ್ದಾನೆ. ಕೇರಳ ಜೈಲ್‍ನಲ್ಲಿದ್ದ ಸನಲ್ ಮೇಲೆ 15 ಕೇಸುಗಳಿವೆ. ಸುದೀರ್‍ನ ಮೇಲೆ 2 ಕೇಸುಗಳಿವೆ. ವಸಂತ ಎಂಬಾತನ ಮೇಲೆ 4 ಕೇಸುಗಳಿವೆ, ಕಿರಣ್ ಮೇಲೆ 3 ಕೇಸುಗಳಿವೆ, ಫೈಸಲ್ ಮೇಲೆ 3 ಕೇಸುಗಳಿವೆ ಹಾಗೂ ನಿಸಾರ್ ಮೇಲೆ 2 ಕೇಸುಗಳಿವೆ. ಇವರೆಲ್ಲರೂ ಜೈಲ್‍ನಲ್ಲಿ ಪರಿಚಯವಾಗಿ ಬಳಿಕ ಒಟ್ಟಾಗಿ ಈ ಕೃತ್ಯ ಎಸಗಿರುವ ಸಾಧ್ಯತೆಗಳಿವೆ.

ಸಾಕಷ್ಟು ಪೂರ್ವತಯಾರಿಯಲ್ಲಿ ದರೋಡೆ ನಡೆಸಲಾಗಿತ್ತು. ಆರೋಪಿಗಳೇ ದಾರ ಮತ್ತು ಬಟ್ಟೆಯನ್ನು ತಂದು ಕಟ್ಟಿ ಹಾಕಿ ದರೋಡೆ ಮಾಡಿದ್ದರು. ಬಹಳ ತಾಂತ್ರಿಕವಾಗಿ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಡಿವೈಎಸ್‍ಪಿ ನೇತೃತ್ವದಲ್ಲಿ ಇನ್ಸ್‌ ಪೆಕ್ಟರ್ ರವಿ ಅವರನ್ನು ಒಳಗೊಂಡ ತಂಡವನ್ನು ಮಾಡಿ ಪತ್ತೆಗೆ ಪ್ರಯತ್ನ ನಡೆಸಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡಕ್ಕೆ ನಗದು ಬಹುಮಾನ ಮತ್ತು ಉತ್ತಮ ಸೇವಾ ಪತ್ರ ನೀಡಿ ಗೌರವಿಸಲಾಗುವುದು ಎಂದು ಎಸ್‍ಪಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಡಿವೈಎಸ್‍ಪಿ ಗಾನ ಪಿ ಕುಮಾರ್, ಗ್ರಾಮಾಂತರ ಸರ್ಕಲ್ ಇನ್ಸ್‍ಪೆಕ್ಟರ್ ರವೀ ಬಿ.ಎಸ್, ನಗರ ಠಾಣೆಯ ಎಸ್‍ಐ ಉದಯ ರವೀ ಉಪಸ್ಥಿತರಿದ್ದರು.

ಕೇರಳದ ಇಚ್ಲಂಗೋಡು ಕಂಪಲದ ಪಚ್ಚಂಬಳ ನಿವಾಸಿ ರವಿ ಈ ದರೋಡೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಯಾಗಿ ದ್ದಾನೆ. ಈತ ಜಬ್ಬಾರ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ ಕೇರಳದ ಕಣ್ಣೂರಿನ ಸೆಂಟ್ರಲ್ ಜೈಲಿನಲ್ಲಿದ್ದಾನೆ. ಪೆರೋಲ್‍ನಲ್ಲಿ ಜೈಲಿನಿಂದ ಹೊರ ಬಂದು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಕೃತ್ಯ ನಡೆಸಿದ ಬಳಿಕ ಪೆರೋಲ್ ಮುಗಿದು ಮತ್ತೆ ಜೈಲು ಸೇರಿಕೊಂಡಿದ್ದಾನೆ. ಬಾಡಿ ವಾರಂಟ್ ಹೊರಡಿಸಿ ಆತನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಪ್ರಕರಣದ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News