ಕರ್ನಾಟಕ ಮಹಿಳಾ ಕ್ರಿಕೆಟ್ ತಂಡಕ್ಕೆ ಪುತ್ತೂರು ಮೂಲದ ಶ್ರೀನಿತಿ ರೈ ಆಯ್ಕೆ
ಪುತ್ತೂರು: ಅಕ್ಟೋಬರ್ 8ರಿಂದ 16ರ ತನಕ ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ ನಡೆಯಲಿರುವ ಬಿಸಿಸಿಐ 19 ವರ್ಷ ದೊಳಗಿನ ಮಹಿಳಾ ಏಕದಿನ ಟ್ರೋಪಿ 2023-24 ಕ್ರಿಕೆಟ್ ಪಂದ್ಯಾಟದಲ್ಲಿ ಆಡಲು ಕರ್ನಾಟಕ ರಾಜ್ಯ ತಂಡಕ್ಕೆ ಪುತ್ತೂರು ಮೂಲದ ಶ್ರೀನಿತಿ ಪಿ.ರೈ ಅವರು ಆಯ್ಕೆಗೊಂಡಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೇಟ್ ಎಸೋಸಿಯೇಶನ್ ವತಿಯಿಂದ 19 ವರ್ಷದೊಳಗಿನ ಮಹಿಳೆಯರ ರಾಜ್ಯ ಕ್ರಿಕೇಟ್ ತಂಡದ ಆಯ್ಕೆ ನಡೆದಿದ್ದು, ಬೆಂಗಳೂರಿನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಎಡಗೈ ಸ್ಪಿನ್ನರ್ ಆಗಿರುವ ಶ್ರೀನಿತಿ ಪಿ.ರೈ ಅವರು ಸ್ಥಾನ ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಅಕ್ಷಯನಗರದಲ್ಲಿರುವ ಸೈಂಟ್ ಆ್ಯನ್ಸ್ ಐಸಿಎಸ್‍ಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಸ್ತುತ ಎಸ್ಸೆಸ್ಸೆಲ್ಸಿ ಕಲಿಯುತ್ತಿರುವ ಶ್ರೀನಿತಿ ಅವರು ಮೂಲತಾ ಪುತ್ತೂರಿನ ಕರೆಮೂಲೆ ನಿವಾಸಿ, ಪ್ರಸ್ತುತ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮಕ್ಕಂದೂರುವಿನ ಹೆಮ್ಮೆತ್ತಾಳು ಗ್ರಾಮದವರಾಗಿದ್ದು ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಬಿ.ಜಿ.ಪ್ರಕಾಶ್ ರೈ ಹಾಗೂ ಪುತ್ತೂರು ತಾಲೂಕಿನ ನುಳಿಯಾಲು ವಿನುತಾ ಪ್ರಕಾಶ್ ರೈ ದಂಪತಿ ಪುತ್ರಿ.
ಕಲಿಕೆಯಲ್ಲೂ ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ಶ್ರೀನಿತಿ ಅವರು ಕ್ರಿಕೇಟ್ ಜತೆಗೆ ಬ್ಯಾಡ್ಮಿಂಟನ್,ವಾಲಿಬಾಲ್ ಪಂದ್ಯಾಟಗಳಲ್ಲಿಯೂ ಶಾಲಾ ತಂಡವನ್ನು ಪ್ರತಿನಿಧಿಸುತ್ತಿರುವ, ಈಜಿನಲ್ಲಿಯೂ ಪರಿಣತಿ ಹೊಂದಿರುವ ಬಹುಮುಖ ಪ್ರತಿಭೆ.