ಪುತ್ತೂರು: ಆದರ್ಶ ವಿವಿಧೋದ್ದೇಶ ಸಹಕಾರ ಸಂಘದಲ್ಲಿ 595.46 ಕೋಟಿ ರೂ. ವ್ಯವಹಾರ
ಪುತ್ತೂರು: ಪುತ್ತೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದು, 13 ಶಾಖೆಗಳನ್ನು ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘವು 2022-23ನೇ ಸಾಲಿನ ಆರ್ಥಿಕ ವರ್ಷದಲ್ಲಿ ರೂ. 595.46 ಕೋಟಿ ವ್ಯವಹಾರ ನಡೆಸಿ ರೂ. 2.15 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸಂಘ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ.
ಪ್ರಸ್ತುತ ಆರ್ಥಿಕ ಸಾಲಿನ ಅಂತ್ಯಕ್ಕೆ ಸಂಘದಲ್ಲಿ ಒಟ್ಟು 7961 ಸದಸ್ಯರಿದ್ದು ರೂ. 2.92 ಕೋಟಿ ಪಾಲು ಬಂಡವಾಳ ಹೊಂದಿದೆ. ರೂ. 116.38 ಕೋಟಿ ಠೇವಣಿ ಹೊಂದಿದೆ. ಕಳೆದ ವರ್ಷದಿಂದ ಶೇ. 16.60 ರಷ್ಟು ಹೆಚ್ಚಳವಾಗಿದೆ. ರೂ. 91.16 ಕೋಟಿ ಹೊರ ಸಾಲ ಬಾಕಿಯಿದೆ. ಕಳೆದ ವರ್ಷದಿಂದ ಶೇ. 23.12ರಷ್ಟು ಹೆಚ್ಚಳವಾಗಿದೆ. ರೂ. 3.02 ಕೋಟಿ ಕ್ಷೇಮ ನಿಧಿ ಮತ್ತು ರೂ. 1.97 ಕೋಟಿ ಇತರ ನಿಧಿಗಳನ್ನು ಹೊಂದಿದ್ದು, ರೂ. 124.57 ಕೋಟಿ ದುಡಿಯುವ ಬಂಡವಾಳ ಹೊಂದಿರುತ್ತದೆ.
ಸ್ಥಾಪನೆಗೊಂಡ ವರ್ಷದಿಂದ ತನ್ನ ಸದಸ್ಯರಿಗೆ ಡಿವಿಡೆಂಡ್ ನೀಡಿಕೊಂಡು ಬರುತ್ತಿರುವ ಮತ್ತು ಅಡಿಟ್ ವರ್ಗದಲ್ಲಿ `ಎ' ತರಗತಿಯನ್ನು ಕಾಯ್ದುಕೊಂಡು ಬಂದಿರುವ ಏಕೈಕ ಸಂಘವಾಗಿರುತ್ತದೆ. ಕಡಬದಲ್ಲಿ ಸಂಘದ ಕಟ್ಟಡಕ್ಕಾಗಿ ಈಗಾಗಲೇ ರೂ. 1,28,99,100 ವೆಚ್ಚದಲ್ಲಿ 0.75 ಸೆಂಟ್ಸ್ ಪರಿವರ್ತಿತ ನಿವೇಶನವನ್ನು ಖರೀದಿಸಲಾಗಿದೆ. ಸಂಘದ ಎಲ್ಲಾ ಶಾಖೆಗಳ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳಲ್ಲಿ 5ರಿಂದ 10ನೇ ತರಗತಿಯಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಹಾಯಧನವನ್ನು ನೀಡಲಾಗುತ್ತಿದೆ. ಈತನಕ ಒಟ್ಟು ರೂ. 17,37,000 ಮೊತ್ತವನ್ನು 979 ವಿದ್ಯಾರ್ಥಿಗಳಿಗೆ ಸಂಘದ ಮಹಾಸಭೆಯ ಸಂದರ್ಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ವಿತರಿಸಲಾಗಿದೆ. ಸಂಘದಲ್ಲಿ ಒಟ್ಟು 55 ಸಿಬ್ಬಂದಿಗಳು ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದಾರೆ.
ಸಂಘದ ಅತ್ಯುತ್ತಮ ಸಾಧನೆಗಾಗಿ ಸಂಘಕ್ಕೆ 2022-23ನೇ ಸಾಲಿನಲ್ಲಿ ಎಸ್‍ಸಿಡಿಸಿಸಿ ಬ್ಯಾಂಕ್‍ನಿಂದ ಸಾಧನಾ ಪ್ರಶಸ್ತಿ ಪಡೆದುಕೊಂಡಿದೆ. ಈತನಕ ಒಟ್ಟು ಎಸ್‍ಸಿಡಿಸಿಸಿ ಬ್ಯಾಂಕ್‍ನಿಂದ 4 ಬಾರಿ ಸಾಧನಾ ಪ್ರಶಸ್ತಿ ಪಡೆದುಕೊಂಡಿದೆ ಎಂದು ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ.