ಪುತ್ತೂರು: ಮಾರಕಾಸ್ತ್ರಗಳಿಂದ ಯುವಕನ ಹತ್ಯೆ

Update: 2023-11-07 04:39 GMT

ಪುತ್ತೂರು: ಪೇಟೆಯ ಹೊರ ವಲಯದ ನೆಹರು ನಗರದಲ್ಲಿ ನಿನ್ನೆ ತಡ ರಾತ್ರಿ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಯುವಕನೋರ್ವನ ಹತ್ಯೆ ನಡೆಸಿದೆ.

ಹತ್ಯೆಗೀಡಾದ ಯುವಕನನ್ನು ಅಕ್ಷಯ್ ಕಲ್ಲೇಗ ಎಂದು ಗುರುತಿಸಲಾಗಿದೆ. ಈತ ಪುತ್ತೂರಿನ ಪ್ರಖ್ಯಾತ ಹುಲಿ ವೇಷ ಕುಣಿತ ತಂಡ ಟೈಗರ್ಸ್ ಕಲ್ಲೇಗ ತಂಡದ ಸದಸ್ಯನಾಗಿದ್ದ.

ಘಟನೆಗೆ ಕೆಲ ಗಂಟೆಗಳ ಮೊದಲು ಕ್ಷುಲ್ಲಕ ಕಾರಣವೊಂದಕ್ಕೆ ಅಕ್ಷಯ್ ಹಾಗೂ ಕೃತ್ಯ ಎಸಗಿದ ತಂಡದ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ಅದರ ಮುಂದುವರಿದ ಭಾಗವಾಗಿ ಅಕ್ಷಯ್ ನನ್ನು ನೆಹರೂ ನಗರಕ್ಕೆ ಬರಲು ಹೇಳಿ ಹತ್ಯೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಕೃತ್ಯವು ರಾತ್ರಿ 11.30 ಗಂಟೆ ಸುಮಾರಿಗೆ ನಡೆದಿದೆ ಎಂದು ತಿಳಿದು ಬಂದಿದೆ.

ಸಂಜೆ ವೇಳೆ ವಾಹನ ಅಪಘಾತದ ವಿಚಾರದಲ್ಲಿ ಅಕ್ಷಯ್ ಹಾಗೂ ಎದುರಾಳಿ ತಂಡದ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಇದರ ನಷ್ಟದ ಬಾಬ್ತು ಮಾತನಾಡಲೆಂದು ಪುನ: ಅದೇ ತಂಡ ಅಕ್ಷಯ್ ನನ್ನು ರಾತ್ರಿ ವೇಳೆ ನೆಹರೂ ನಗರ ಬಳಿ ಕರೆದು ಕೃತ್ಯ ಎಸಗಿದೆ ಎನ್ನಲಾಗುತ್ತಿದೆ.

ಅಕ್ಷಯ್ ಮೃತದೇಹ ವಿವೇಕಾನಂದ ಕಾಲೇಜಿಗೆ ತೆರಳುವ ರಸ್ತೆಯ ವಿರುದ್ದ ದಿಕ್ಕಿನಲ್ಲಿ ಹೆದ್ದಾರಿಯ ಅಂಚಿನಲ್ಲಿರುವ ಗಿಡಗಂಟಿಗಳಿಂದ ಅವೃತ್ತವಾದ ಹಡೀಲು ಬಿದ್ದ ಜಾಗದಲ್ಲಿ ಬಿದ್ದು ಕೊಂಡಿತ್ತು. ಒಟ್ಟು ಮೂವರಿದ್ದ ತಂಡ ಕೃತ್ಯ ಎಸಗಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಈ ಪೈಕಿ ಇಬ್ಬರು ಕೃತ್ಯ ನಡೆದ ಕೆಲ ಗಂಟೆಯ ಬಳಿಕ ಮನೀಶ್ ಹಾಗೂ ಚೇತು ಎಂಬವರು ಪೊಲೀಸರಿಗೆ ಶರಣಾಗಿದ್ದಾರೆ. ಇನ್ನೋರ್ವ ತಲೆಮರೆಸಿಕೊಂಡಿದ್ದ ಆರೋಪಿ ಮಂಜುನಾಥ್ ಯಾನೆ ಮಂಜ ಎಂಬಾತನನ್ನು ಪೊಲೀಸರು ಇಂದು ಬೆಳಿಗ್ಗೆ ಬಂಧಿಸಿದ್ದಾರೆ.

ಎರಡು ತಿಂಗಳ ಅಂತರದಲ್ಲಿ ನಡೆದ ಎರಡನೇ ಹತ್ಯೆ

ಪುತ್ತೂರು ಪೇಟೆಯಲ್ಲಿ ಎರಡು ತಿಂಗಳ ಅಂತರದಲ್ಲಿ ನಡೆದ ಎರಡನೇ ಹತ್ಯೆ ಇದಾಗಿದೆ. ಕಳೆದ ಅಗಸ್ಟ್ ತಿಂಗಳ ಕೊನೆ ವಾರದಲ್ಲಿ ಪ್ರೇಮಿಯೊಬ್ಬ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಮುಂಭಾಗ ಯುವತಿಯನ್ನು ಚೂರಿ ಇರಿದು ಹತ್ಯೆ ಮಾಡಿದ್ದ . 4 ವರ್ಷಗಳ ಹಿಂದೆ ಪುತ್ತೂರು ಗ್ರಾಮಾಂತರ ಠಾಣೆಯ ಮುಂಭಾಗ ಹಿಂದೂ ಜಾಗರಣೆ ವೇದಿಕೆ ಕಾರ್ಯಕರ್ತ ಕಾರ್ತಿಕ್ ಮೇರ್ಲ ಎಂಬವರನ್ನು ತಡ ರಾತ್ರಿ ಚೂರಿ ಇರಿದು ಹತ್ಯೆ ಮಾಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News