ಸೆ.3: ಮಂಗಳೂರಿನಲ್ಲಿ ಹಿರಿಯ ಚಿತ್ರನಟ ಅನಂತನಾಗ್‌ಗೆ ಅಭಿನಂದನೆ ಕಾರ್ಯಕ್ರಮ
ಮಂಗಳೂರು, ಆ.29: ಕಳೆದ ಐದು ದಶಕಗಳ ಕಾಲ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿರುವ ಹಿರಿಯ ಚಿತ್ರನಟ, ಅನಂತ್ ನಾಗ್ ಅವರ 75ನೇ ವರ್ಷದ ಮತ್ತು ವೃತ್ತಿಜೀವನದ 50ರ ಸಂಭ್ರಮವನ್ನು ಸೆ.3ರಂದು ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಆಚರಿಸಲಾಗುವುದು ಎಂದು ಅನಂತ್‌ನಾಗ್ ಅಭಿನಂದನಾ ಸಮಿತಿಯ ಸಂಚಾಲಕ ಗೋಪಿನಾಥ್ ಭಟ್ ತಿಳಿಸಿದ್ದಾರೆ.
ಮಂಗಳವಾರ ನಗರದ ಅಟಲ್ ಸೇವಾ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಗ್ಗೆ 9:30ಕ್ಕೆ ಅನಂತ್ ನಾಗ್ ದಂಪತಿಯನ್ನು ಸಾರೋಟಿನಲ್ಲಿ ಡೊಂಗರಕೇರಿ ಕೆನರಾ ಹೈಸ್ಕೂಲ್‌ನಿಂದ ಮೆರವಣಿಗೆ ಮೂಲಕ ಸಭಾಂಗಣಕ್ಕೆ ಕರೆತರಲಾಗುವುದು. 10ಕ್ಕೆ ಶಾಸಕ ವೇದವ್ಯಾಸ ಕಾಮತ್ ಸಭಾ ಕಾರ್ಯಕ್ರಮ ಉದ್ಘಾಟಿಸುವರು. ಬಳಿಕ ಸಿನೆಮಾಗಳ ಪ್ರಮುಖರು, ಪತ್ರಕರ್ತರು, ಯುವ ಸಮುದಾಯದೊಂದಿಗೆ ಸಂವಹನ ಕಾರ್ಯಕ್ರಮ, ಮಧ್ಯಾಹ್ನ 2ರಿಂದ ಮಣಿಕಾಂತ್ ಕದ್ರಿ, ರವೀಂದ್ರ ಪ್ರಭು ಹಾಗೂ ತಂಡದಿಂದ ಅನಂತ್‌ನಾಗ್‌ರ ಆಯ್ದ ಜನಪ್ರಿಯ ಹಾಡುಗಳು, ನೃತ್ಯ ವೈವಿಧ್ಯ, ಸಂಜೆ ಸನ್ಮಾನ ಸಹಿತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಮಾತನಾಡಿ, 75 ಸಂವತ್ಸರದ ಸಡಗರ ಮತ್ತು ಅವರ ಚಿತ್ರ ಬದುಕಿನ ಐದು ದಶಕಗಳ ಸಾರ್ಥಕ ಪಯಣದ ಸಂಭ್ರಮವನ್ನು ಅವರ ಅಭಿಮಾನಿಗಳ ಜೊತೆಯಲ್ಲಿ ಸೇರಿಸಿ ಕಾರ್ಯಕ್ರಮ ಹಮ್ಮಿಕೊಳ್ಳ ಬೇಕೆಂದು ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ನಿರ್ಧರಿಸಿದೆ. ನಟನೆ ಮಾತ್ರವಲ್ಲದೆ ಸಾಮಾಜಿಕ ಕಾರ್ಯಗಳಲ್ಲಿಯೂ ಕಳಕಳಿ ಯನ್ನು ಹೊಂದಿರುವ ಅನಂತ್‌ನಾಗ್‌ಯುವ ಪೀಳಿಗೆಗೂ ಮಾದರಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮುಕ್ತವಾಗಿ ಪ್ರವೇಶಿಶಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕೆನರಾ ಪದವಿಪೂರ್ವ ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಗಿರಿಧರ ಶೆಟ್ಟಿ, ಜಾದೂಗಾರ ಕುದ್ರೋಳಿ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.