ಸೆ.16: ಅಸೋಸಿಯೇಶನ್ ಆಫ್ ಸಿವಿಲ್ ಎಂಜಿನಿಯರ್ಸ್ ಮೂಲ್ಕಿ ಉದ್ಘಾಟನೆ
ಮಂಗಳೂರು, ಸೆ.9: ಅಸೋಸಿಯೇಶನ್ ಆಫ್ ಸಿವಿಲ್ ಎಂಜಿನಿಯರ್ಸ್ ಮೂಲ್ಕಿ (ಎಸಿಇಎಂ) ಮೂಲ್ಕಿಇದರ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಮತ್ತು ಇಂಜಿನಿಯರ್ಸ್ ದಿನಾಚರಣೆ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕನ್ವೆನ್ಶನ್ ಸೆಂಟರ್‌ನಲ್ಲಿ ಸೆ. 16 ರಂದು ಸಂಜೆ 5 ಗಂಟೆಗೆ ನಡೆಯಲಿದೆ ಎಂದು ಸಂಘಟನೆಯ ಅಧ್ಯಕ್ಷ ಜೀವನ್ ಕೆ. ಶೆಟ್ಟಿ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಎಸಿಇಎಂ ಮೂಲ್ಕಿ ತಾಲೂಕಿನ ಅಭಿವೃದ್ದಿ ಹಾಗೂ ಸಿವಿಲ್ ಇಂಜಿನಿಯರ್ ವೃತ್ತಿಪರರ ಒಗ್ಗಟ್ಟು ಮತ್ತು ಹಿತದೃಷ್ಟಿಯಿಂದ ಹೊಸದಾಗಿ ರೂಪುಗೊಂಡಿರುವ ಸ್ವತಂತ್ರ ಸಂಘಟನೆಯಾಗಿದೆ ಎಂದರು.
ಸಿವಿಲ್ ಎಂಜಿನಿಯರ್ ರಂಗದ ಬಹುತೇಕರು ಈ ಸಂಘಟನೆಯ ಸದಸ್ಯರಾಗಿದ್ದಾರೆ. ನಾವು ಮೂಲ್ಕಿ ರೋಟರಿ ಕ್ಲಬ್‌ನ ಜಂಟಿ ಸಹಯೋಗದೊಂದಿಗೆ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ ಎಂಜಿನಿಯರ್ ದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಅಂದು ಎಂಜಿನಿಯರ್ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗೋಷ್ಠಿ, ಸಾಧಕ ಎಂಜಿನಿಯರ್ಗಳಿಗೆ ಸನ್ಮಾನ ಮುಂತಾದ ಕಾರ್ಯಕ್ರಮಗಳೂ ನಡೆಯಲಿವೆ ಎಂದು ಮಾಹಿತಿ ನೀಡಿದರು.
ಪ್ರತಿ ವರ್ಷವೂ ಎಂಜಿನಿಯರ್ ದಿನದಂದು ನಾವು ಸಾಧಕರನ್ನು ಸನ್ಮಾನಿಸುತ್ತಿದ್ದೇವೆ ಎಂಬುದು ಉಲ್ಲೇಖನೀಯ ಸಂಗತಿಯಾಗಿದೆ.ಪ್ರಸ್ತುತ ನಾವು ನಮ್ಮ ಹೊಸ ಸಂಘಟನೆ ಎಸಿಇಎಂ ಇದರ ಉದ್ಘಾಟನೆ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ೆ ನಡೆಸಲು ನಿರ್ಧರಿಸಿದ್ದೇವೆ. ಈ ಕಾರ್ಯಕ್ರಮದಲ್ಲಿ ಮುಲ್ಕಿ, ಮಂಗಳೂರು, ಉಡುಪಿ, ಕಾರ್ಕಳ ಮೂಡಬಿದ್ರಿ, ಬೆಳ್ತಂಗಡಿ, ಸುಳ್ಯ, ಪುತ್ತೂರು ಮತ್ತು ಉಳ್ಳಾಲ ತಾಲೂಕಿನ ಎಂಜಿನಿಯರ್ಗಳು, ವಾಸ್ತುಶಿಲ್ಪಿಗಳು, ಪ್ರಮುಖ ಬಿಲ್ಡರ್ಗಳು, ಗುತ್ತಿಗೆದಾರರು, ಡೀಲರ್‌ಗಳು, ನಿರ್ಮಾಣ ಮತ್ತು ಒಳಾಂಗಣ ವಿನ್ಯಾಸ ಸಂಬಂಧಿ ಕಂಪೆನಿಗಳು ಮತ್ತು ಇತರ ಪ್ರಮುಖ ಸದಸ್ಯರು ಸೇರಿದಂತೆ ಸುಮಾರು ಸುಮಾರು 1,500ಕ್ಕೂ ಮಿಕ್ಕಿ ಜನ ಸೇರುವ ನಿರೀಕ್ಷೆ ಹೊಂದಿದ್ದೇವೆ ಎಂದು ಮಾಹಿತಿ ನೀಡಿದರು.
ಮೂಲ್ಕಿ ಎರಡೂ ಜಿಲ್ಲೆಗಳ ಮಧ್ಯಭಾಗದಲ್ಲಿದೆ. ಹೀಗಾಗಿ ಎರಡೂ ಜಿಲ್ಲೆಗಳ ಜನರು ಪಾಲ್ಗೊಳ್ಳಲಿದ್ದಾರೆ. ಅದಕ್ಕಾಗಿ ಅದ್ಧೂರಿ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ಸಸಿಹಿತ್ಲು ಬೀಚ್, ಭಗವತಿ ದೇವಸ್ಥಾನ, ಉಮಾಮಹೇಶ್ವರ ದೇವಸ್ಥಾನ, ಮಂತ್ರ ಸರ್ಫಿಂಗ್, ಬಪ್ಪನಾಡು ದೇವಸ್ಥಾನ ಇತ್ಯಾದಿಯನ್ನು ಒಳಗೊಂಡಂತೆ ಪ್ರವಾಸೋದ್ಯಮ ಕಾರಿಡಾರ್ ನಿರ್ಮಾಣ ಮಾಡಬೇಕು ಎಂದು ಸರಕಾರವನ್ನು ಒತ್ತಾಯಿಸಲಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಸಿಇಎಂ ಕಾರ್ಯದರ್ಶಿ ಸುಜಿತ್ ಸಾಲಿಯಾನ್, ಕೋಶಾಧಿಕಾರಿ ವರುಣ್ ಪೂಜಾರಿ , ಹರೀಶ್ಚಂದ್ರ, ವಿಜಯ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.