ವಿಧಾನಸಭೆಯಲ್ಲಿ ಕೆಟ್ಟ ಸಂಪ್ರದಾಯ ಪ್ರಾರಂಭಕ್ಕೆ ನಾನು ತಯಾರಿಲ್ಲ : ಸ್ಪೀಕರ್ ಯು.ಟಿ.ಖಾದರ್

Update: 2024-07-29 08:04 GMT

ಮಂಗಳೂರು: ವಿಧಾನಸಭೆಯಲ್ಲಿ ಕೆಟ್ಟ ಸಂಪ್ರದಾಯ ಪ್ರಾರಂಭಕ್ಕೆ ನಾನು ತಯಾರಿಲ್ಲ. ಒಂದು ವೇಳೆ ಹಾಗೇ ಮಾಡಿದರೆ ಮುಂದೆ ಬರುವ ಸ್ಪೀಕರ್‌ಗಳಿಗೆ ಸಮಸ್ಯೆಯಾಗಬಹುದು ಎಂದು ವಿಧಾನಭಾ ಸ್ಪೀಕರ್ ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ.

ಮಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ವಿಧಾನಸಭೆಯ ಅಧ್ಯಕ್ಷರು ಎಂಬ ಪೀಠ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿ ಒಂದು .ಇಂತಹ ಪೀಠವು ಯಾವುದೇ ಗೊಂದಲಕ್ಕೆ ಒಳಗಾಗದೆ ಜನಪ್ರಿಯ ಮಾದರಿಯ ಗೋಜಲಿಗೆ ಸಿಲುಕದೆ ನಿಯಮಾವಳಿಗಳಂತೆ ಕೆಲಸ ಮಾಡಬೇಕಾಗುತ್ತದೆ. ಸತ್ಯ ಹೇಳಿದಾಗ, ಇರುವ ನಿಯಮಗಳ ಬಗ್ಗೆ ಹೇಳುವಾಗ ಕೆಲವರಿಗೆ ಅಸಮಾಧಾನ ಆಗುವುದು ಸ್ವಾಭಾವಿಕ . ಆದರೆ ಅವರಿಗೆ ಕೆಲವು ಸಮಯದ ನಂತರ ನಾನು ಯಾಕೆ ಚರ್ಚೆಗೆ ಅವಕಾಶ ಕೊಟ್ಟಿಲ್ಲ ಎಂಬ ವಿಚಾರ ಮನವರಿಕೆಯಾಗುತ್ತದೆ" ಎಂದರು.

ವಾಲ್ಮೀಕಿ ಹಗರಣದ ಸಂಬಂಧಿಸಿ ನಾಲ್ಕು ದಿನ ಚರ್ಚೆ ನಡೆಯಿತು. ಐದನೇ ದಿನ ಮುಡಾ ಹಗರಣ ಬಂತು. ಮುಡಾ ಹಗರಣ ಸಂಬಂಧ ಸದಸ್ಯರು ಸದನದಲ್ಲಿ ಮಂಡಿಸಿದ ನಿಲುವಳಿ ಸೂಚನೆಯನ್ನು ನಿಯಮಗಳ ಪ್ರಕಾರ ಚರ್ಚೆಗೆ ಅವಕಾಶ ನೀಡಲಾಗಿಲ್ಲ. ವಿಧಾನಸಭೆಯ ಸಭಾಧ್ಯಕ್ಷರು ಕರ್ನಾಟಕ ವಿಧಾನಸಭೆ ಕಾರ್ಯ ವಿಧಾನ ಮತ್ತು ನಡವಳಿಕೆಯ ನಿಯಮಗಳ ಪ್ರಕಾರ ಕಾರ್ಯ ನಿರ್ವಹಿಸಬೇಕಾಗುತ್ತದೆಯೇ ಹೊರತು, ವಿಮರ್ಶೆಗಳ ಮರ್ಜಿಗೆ ಅನುಗುಣವಾಗಿ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ʼವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮ ʼ62(7) ’ನಿಲುವಳಿ ಸೂಚನೆಯು ಭಾರತದ ಯಾವುದೇ ಭಾಗದಲ್ಲಿ ವ್ಯಾಪ್ತಿಯನ್ನು ಹೊಂದಿರುವ ನ್ಯಾಯಾಲಯದ ವಿಚಾರಣೆಯಲ್ಲಿರುವ ಯಾವುದೇ ವಿಷಯಕ್ಕೆ ಸಂಬಂಧಿಸಿರತಕ್ಕದ್ದಲ್ಲ’ ಎಂದು ಹೇಳುತ್ತದೆ.

ಮುಡಾ ಹಗರಣದ ತನಿಖೆಗೆ ಈಗಾಗಲೇ ನಿವೃತ್ತ ನ್ಯಾಯಾಧೀಶರ ಆಯೋಗವನ್ನು ರಚನೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಸರಕಾರ ಸ್ಪೀ ಕರ್ ಪೀಠಕ್ಕೆ ನೀಡಿದೆ ಎಂದರು.

ಎಂಟು ದಿನಗಳ ಕಾಲ ನಡೆದ ವಿಧಾನಸಭೆಯ ಕಳೆದ ಅಧಿವೇಶನದಲ್ಲಿ ಸಾರ್ವಜನಿಕ ವಿಚಾರಗಳಿಗೆ ಸಂಬಂಧಿಸಿ ಬಹಳಷ್ಟು ಚರ್ಚೆ ಆಗಿದೆ. ಆದರೆ ನಿರೀಕ್ಷಿಸಿದಷ್ಟು ನಡೆದಿಲ್ಲ. ಈ ವಿಚಾರದಲ್ಲಿ ತಮಗೆ ಬೇಸರ ಇದೆ ಎಂದರು. ಮೂರು ತಿಂಗಳಿಗೊಮ್ಮೆ ಅಧಿವೇಶನ ನಡೆಯುವಾಗ ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಪರಿಹಾರದ ನಿರೀಕ್ಷೆಯಲ್ಲಿರುತ್ತಾರೆ. ಅದು ಸಹಜ ಎಂದು ಹೇಳಿದರು.

ರಸ್ತೆ ಹಾನಿಯ ಬಗ್ಗೆ ಪರಿಶೀಲನೆ: ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಮಗೆ ಹೆಚ್ಚು ಸಮಸ್ಯೆ ಆಗಿದೆ. ರಸ್ತೆ ಕೆಟ್ಟು ಹೋಗಿರುವ ವಿಚಾರಕ್ಕೆ ಸಂಬಂಧಿಸಿ ಬೇರೆ ಬೇರೆ ಇಲಾಖೆಯ ಸಭೆ ಕರೆಯಲಾಗಿದೆ. ಸಭೆಗೆ ಪಿಡಬ್ಲುಡಿಯ ಮುಖ್ಯ ಕಾರ್ಯದರ್ಶಿ ಆಗಮಿಸಿದ್ದಾರೆ. ಆಯಾ ಇಲಾಖೆಗಳ ವ್ಯಾಪ್ತಿಯ ಕೆಲಸಗಳಿಗೆ ಸಂಬಂಧಿಸಿದ ಇಲಾಖೆಗಳೇ ಜವಾಬ್ದಾರರಾಗಿರುತ್ತಾರೆ. ರಸ್ತೆ ಸ್ಥಿತಿಯ ಬಗ್ಗೆ ಮಾತಣಾಡಿದ ಅವರು ಬಂಟ್ವಾಳ ರಸ್ತೆಯ ಅಲ್ಲಲ್ಲಿ ನೀರು ನಿಂತು ಸಣ್ಣ ಸಣ್ಣ ವಾಹನಗಳಿಗೆ ಸಂಚರಿಸಲು ಸಮಸ್ಯೆಯಾಗಿದೆ. ಶಿರಾಡಿ, ಚಾರ್ಮಾಡಿ ರಸ್ತೆಯ ಪರಿಶೀಲನೆ ಮಾಡಲಾಗುವುದು ಎಂದು ಹೇಳಿದರು.

ಮಳೆಗಾಲದಲ್ಲಿ ನಮ್ಮಲ್ಲಿ ರಸ್ತೆಯ ಪಕ್ಕದ ಗುಡ್ಡ ಕುಸಿಯುವುದು ಸಹಜ. ಇಲ್ಲಿ ಸ್ವಲ್ಪ ರಸ್ತೆ ಕುಸಿದ ತಕ್ಷಣ ರಸ್ತೆಯನ್ನು ಬಂದ್ ಮಾಡುವುದಲ್ಲ. ಈ ಸಮಸ್ಯೆಗೆ ರಸ್ತೆ ಬಂದ್ ಮಾಡುವುದು ಪರಿಹಾರವಲ್ಲ. ಮಂಗಳೂರು ಸಂಪರ್ಕದ ರಸ್ತೆ ಬಂದ್ ಮಾಡುವಾಗ ಪಕ್ಕದ ಜಿಲ್ಲೆಗಳೊಂದಿಗೆ ಸಮನ್ವಯ ಸಾಧಿಸಬೇಕು. ಸೈನಿಕರಿಗೆ ತರಬೇತಿ ಕೊಡುವುದು ಯುದ್ಧ ಬಂದಾಗ ಯುದ್ಧ ಮಾಡುವುದಕ್ಕಾಗಿ, ಹೊರತು ಯುದ್ಧ ಬಂದಾಗ ಬಾಗಿಲು ಹಾಕಿ ಮನೆಯಲ್ಲಿ ಕುಳಿತುಕೊಳ್ಳಲು ಅಲ್ಲ. ಹಾಗೆಯೇ ಅಧಿಕಾರಿಗಳು ರಸ್ತೆಯ ಸ್ಥಿತಿಯ ಬಗ್ಗೆ ಮೊದಲ ಅರಿತುಕೊಳ್ಳಬೇಕು. ಒಂದು ಕಡೆ ಪ್ರತಿ ವರ್ಷ ರಸ್ತೆಯ ಪಕ್ಕದ ಗುಡ್ಡ ಕುಸಿಯುತ್ತಿದ್ದರೆ, ಅದು ಮಣ್ಣಿನ ಸಮಸ್ಯೆ ಅಲ್ಲ, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News