ಸುಳ್ಯ: 700 ಮೀಟರ್ ಕಾಂಕ್ರೀಟ್ ರಸ್ತೆಗೆ ಎರಡು ಬಾರಿ ಉದ್ಘಾಟನಾ ಭಾಗ್ಯ!

Update: 2024-11-03 16:36 GMT

ಸುಳ್ಯ: 700 ಮೀಟರ್ ಕಾಂಕ್ರೀಟ್ ರಸ್ತೆಗೆ ಎರಡು ಬಾರಿ ಉದ್ಘಾಟನಾ ಭಾಗ್ಯ ಲಭಿಸಿದೆ. ಮಧ್ಯಾಹ್ನ ಕಾಂಗ್ರೆಸ್‍ನವರು ರಸ್ತೆ ಉದ್ಘಾಟಿಸಿದರೆ, ಸಂಜೆ ಬಿಜೆಪಿಯವರು ಇದೇ ರಸ್ತೆಯನ್ನು ಉದ್ಘಾಟನೆ ಮಾಡಿದರು.

ಕೋಲ್ಚಾರು- ಪೈಂಬೆಚ್ಚಾಲ್ -ಅಜ್ಜಾವರ ಸಂಪರ್ಕ ರಸ್ತೆಗೆ ಎರಡೂ ಪಕ್ಷದವರು ಉದ್ಘಾಟನಾ ಭಾಗ್ಯ ಕಲ್ಪಿಸಿದರು.

ಲೋಕೋಪಯೋಗಿ ಇಲಾಖೆಯ ಸುಳ್ಯ ಉಪವಿಭಾಗದ ಆಲೆಟ್ಟಿ-ಅಜ್ಜಾವರ ಗ್ರಾಮ ಸಂಪರ್ಕಿಸುವ ನೀಲಗಿರಿಯಡ್ಕ, ಪೈಂಬೆಚ್ಚಾಲು ಕೋಲ್ಚಾರು ರಸ್ತೆಯಲ್ಲಿ 50 ಲಕ್ಷ ರೂ ವೆಚ್ಚದಲ್ಲಿ ಸುಮಾರು 700 ಮೀ. ರಸ್ತೆ ಕಾಂಕ್ರೀಟೀಕರಣಗೊಂಡು ಅಭಿವೃದ್ಧಿ ಆಗಿದೆ. ಅನುದಾನ ಬಿಡುಗಡೆಯಾಗಿ ಇದೀಗ ಕಾಮಗಾರಿ ಪೂರ್ತಿಯಾಗಿತ್ತು. ಈ ಹಿನ್ನಲೆಯಲ್ಲಿ ನ.1ರಂದು ಮಧ್ಯಾಹ್ನ ಕಾಂಗ್ರೆಸ್ ಜನಪ್ರತಿನಿಧಿಗಳು ಹಾಗೂ ಪ್ರಮುಖರು ಸೇರಿಸಿ ರಸ್ತೆ ಉದ್ಘಾಟಿಸಿದರು. ಅದೇ ದಿನ ಸಂಜೆ ಬಿಜೆಪಿಯವರು ಉದ್ಘಾಟನಾ ಸಮಾರಂಭ ಏರ್ಪಡಿಸಿದ್ದು, ಶಾಸಕಿ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿದರು.

ಎಸ್.ಅಂಗಾರ ಅವರು ಸಚಿವರಾಗಿದ್ದ ಸಂದರ್ಭ ಅವರ ಪ್ರಯತ್ನ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಪತ್ರದ ಮೇರೆಗೆ ರಸ್ತೆಗೆ ವಿಶೇಷ ಅನುದಾನ ಮಂಜೂರಾಗಿತ್ತು ಎಂದು ಬಿಜೆಪಿಯವರು ಹೇಳುತ್ತಿದ್ದರೆ, ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾಂಗ್ರೆಸ್ ಮುಖಂಡರ ಪ್ರಯತ್ನದಿಂದ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಾರೆ.

ಒಟ್ಟಿನಲ್ಲಿ ರಸ್ತೆಯನ್ನು ಎರಡೆರಡು ಬಾರಿ ಉದ್ಟಾಟನೆ ಮಾಡುವ ಮೂಲಕ ಗ್ರಾಮೀಣ ಭಾಗದಲ್ಲಿ ರಾಜಕೀಯ ಮುಖಂಡರ ಮಧ್ಯೆ ಹೊಂದಾಣಿಕೆ ಇಲ್ಲ ಎಂಬುದನ್ನು ತೋರಿಸುತ್ತದೆ ಎನ್ನುತ್ತಾರೆ ಸಾರ್ವಜನಿಕರು.

ಈ ರಸ್ತೆಯ ಗುದ್ದಲಿ ಪೂಜೆಯೂ ಎರಡು ಬಾರಿ ನಡೆದಿತ್ತು. ಒಮ್ಮೆ ಶಾಸಕರ ನೇತೃತ್ವದಲ್ಲಿ ಗುದ್ದಲಿಪೂಜೆ ನಡೆದರೆ ಮತ್ತೊಮ್ಮೆ ಸುಳ್ಯಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಈ ರಸ್ತೆ ಸೇರಿ ವಿವಿಧ ಕಾಮಗಾರಿಗಳಿಗೆ ಸುಳ್ಯದಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News