ದ.ಕ. ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಕೊಳೆತ ಮೊಟ್ಟೆ ಪೂರೈಕೆ: ಗರ್ಭಿಣಿಯರು, ಪುಟಾಣಿಗಳ ಹೆತ್ತವರ ಆರೋಪ

Update: 2023-07-19 15:31 GMT

ಮಂಗಳೂರು: ದ.ಕ.ಜಿಲ್ಲೆಯ ಬಹುತೇಕ ಅಂಗನವಾಡಿ ಕೇಂದ್ರಗಳಿಗೆ ಕೊಳೆತ ಮೊಟ್ಟೆ ಪೂರೈಕೆ ಮಾಡಲಾಗಿದೆ ಎಂಬ ಆರೋಪ ವ್ಯಕ್ತವಾಗಿವೆ.

ಜಿಲ್ಲೆಯ ನೂರಾರು ಗರ್ಭಿಣಿಯರು ಮತ್ತು ಪುಟಾಣಿಗಳ ಹೆತ್ತವರು ನಮಗೆ ಕೊಳೆತ ಮೊಟ್ಟೆಯ ಫೋಟೋಗಳನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿಕೊಟ್ಟು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನಾವು ಅದನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ದೂರಿಕೊಂಡಿದ್ದಾರೆ.

ವಾರಕ್ಕೆ ಎರಡು ಮೊಟ್ಟೆಗಳನ್ನು ಮಕ್ಕಳಿಗೆ ಬೇಯಿಸಿ ಕೊಡಬೇಕು. ಆದರೆ ಮೊಟ್ಟೆ ಕೊಳೆತ ಬಗ್ಗೆ ದೂರುಗಳು ಬಂದ ನಂತರ ಈ ಮೊಟ್ಟೆಗಳನ್ನು ಮಕ್ಕಳಿಗೆ ಬೇಯಿಸಿಕೊಡುತ್ತಿಲ್ಲ. ಅದಲ್ಲದೆ ಗರ್ಭಿಣಿಯರಿಗೆ ತಿಂಗಳಿಗೆ 25 ಮೊಟ್ಟೆಗಳನ್ನು ಕೊಡಬೇಕು. ಜೂನ್ ತಿಂಗಳ ಮೊಟ್ಟೆಯನ್ನು ಜುಲೈಗೆ ಸರಬರಾಜು ಮಾಡಲಾಗಿದೆ. ಆದರೆ ಮೊಟ್ಟೆ ಕೊಟ್ಟ ದಿನದಿಂದಲೇ ಕೊಳೆತಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಗರ್ಭಿಣಿಯರ ಮತ್ತು ಮಕ್ಕಳ ಪೋಷಕರ ಪ್ರಶ್ನೆಗೆ ಉತ್ತರಿಸಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಕಾರ್ಯಕರ್ತೆಯರು ಅಳಲು ತೋಡಿಕೊಂಡಿದ್ದಾರೆ.

ನಗರದ ಚಿಲಿಂಬಿ, ಬೋಂದೆಲ್, ಮರಕಡ, ಕಾವೂರು, ಉಳ್ಳಾಲ, ಕೊಣಾಜೆ ಹಾಗೂ ಬಂಟ್ವಾಳ ಮತ್ತಿತರ ಅಂಗನವಾಡಿಗಳಲ್ಲಿ ಕೊಳೆತ ಮೊಟ್ಟೆ ಪೂರೈಕೆಯಾಗಿದೆ ಎಂದು ಆರೋಪಿಸಲಾಗಿದೆ.

ಈಗಾಗಲೆ ನಾವು ಕೊಳೆತ ಮೊಟ್ಟೆಗಳ ಫೋಟೋವನ್ನು ಅಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದೇವೆ. ಮುಂದೆ ಅವರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ. ಮೊಟ್ಟೆ ಪೂರೈಕೆಯನ್ನು ಗುತ್ತಿಗೆದಾರರಿಗೆ ವಹಿಸುವ ಬದಲು ಬಾಲ ವಿಕಾಸ ಸಮಿತಿಯ ಮೂಲಕ ವ್ಯವಸ್ಥೆ ಕಲ್ಪಿಸಿದರೆ ಇಂತಹ ಸಮಸ್ಯೆಗಳು ಎದುರಾಗದು ಎಂದು ಕಾರ್ಯಕರ್ತೆಯರು ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News