ಸುರತ್ಕಲ್: ಸೌಹಾರ್ದ ಆಟಿಕೂಟ ಮತ್ತು ಗ್ರಾಮೀಣ ಆಟೋಟ ಸ್ಪರ್ಧೆ
ಸುರತ್ಕಲ್, ಆ.6: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಸುರತ್ಕಲ್ ಬ್ಲಾಕ್ ಕಿಸಾನ್ ಘಟಕದ ವತಿಯಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ಸೌಹಾರ್ದ ಆಟಿಕೂಟ ಮತ್ತು ಗ್ರಾಮೀಣ ಆಟೋಟ ಸ್ಪರ್ಧೆ ಎನ್‌ಐಟಿಕೆ ಸಮೀಪದ ಪಡ್ರೆ ಶ್ರೀ ಧೂಮಾವತಿ ದೈವಸ್ಥಾನದ ವಠಾರದ ಗದ್ದೆಯಲ್ಲಿ ರವಿವಾರ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಇನಾಯತ್ ಅಲಿ, ನಾವು ಯಾವುದೇ ರೀತಿಯ ಭೇದ, ಭಾವ, ಜಾತಿ, ಧರ್ಮಗಳ ಸಂಕೋಲೆಗಳ ಮಧ್ಯೆ ಬಂಧಿಗಳಲ್ಲ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ಕಾಂಗ್ರೆಸ್ ಕುಟುಂಬದ ಸದ್ಯಸರು. ಈ ಕಾರ್ಯಕ್ರಮ ನಮ್ಮೊಳಗಿನ ಸಹೋದರೆ ಗಟ್ಟಿಗೊಳಿಸುವ ಉದ್ದೇಶದಿಂದ ಆಯೋಜಿಸಲಾಗಿದೆ. ಈ ಮೂಲಕ ಪರಶುರಾಮನ ಸೃಷ್ಠಿಯ ತುಳು ನಾಡಿನ ಸಂಪ್ರದಾಯಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಜೊತೆಗೆ ಪಕ್ಷ ಸಂಘಟನೆಯಲ್ಲೂ ನಾವು ತೊಡಗಿಕೊಳ್ಳಬೇಕಿದೆ ಎಂದು ಅವರು ನುಡಿದರು.
ಕಾರ್ಯಕ್ರಮದಲ್ಲಿ ಪಾರ್ದನ ಕಲಾವಿದೆ ಕುತ್ತಾರು ತಮ್ಮಕ್ಕ ಅವರಿಂದ ಪಾರ್ದನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಪಡ್ರೆ ಶ್ರೀ ಧೂಮಾವತಿ ದೈವಸ್ಥಾನದ ಬಾಬು ಪಡ್ರಿಯಾರ್ ಉದ್ಘಾಟಿಸಿದರು. ಕೆಸರು ಗದ್ದೆಯ ಕ್ರೀಡಾ ಕೂಟವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ, ಮಾಜಿ ಮೇಯರ್ ಕವಿತಾ ಸನಿಲ್ ಮಾತನಾಡಿದರು. ಸಮಾರಂಭದಲ್ಲಿ ಬಾಬು ಶೆಟ್ಟಿ, ಪ್ರತಾಪ್ ಚಂದ್ರ ಶೆಟ್ಟಿ, ಕಿಸಾನ್ ಘಟಕದ ರಾಜೇಶ್ ಪಡ್ರೆ, ಪ.ಪಂಗಡ ವಿಭಾಗದ ಅಧ್ಯಕ್ಷರಾದ ಮಲ್ಲಿಕಾರ್ಜುನ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಶಿಕಲಾ ಪದ್ಮನಾಭ, ಅಸಂಘಟಿತ ವಲಯದ ಆನಂದ್ ಪಡ್ರೆ, ಹಿಂದುಳಿದ ವರ್ಗಗಳ ಅಧ್ಯಕ್ಷ ಚಂದ್ರಹಾಸ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ರೆಹ್ಮಾನ್ ಖಾನ್ ಕುಂಜತ್ತಬೈಲ್ ಸ್ವಾಗತಿಸಿದರು. ಕಿಶೋರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದು ವೋಟು ಹಾಕಿದ ಕಪ್ಪು ಶಾಯಿಯ ಗುರುತು ಮಾಸುವ ಮುನ್ನ ನಾವು ನೀಡಿದ್ದ ಐದು ಗ್ಯಾರಂಟಿಗಳ ಪೈಕಿ ನಾಲ್ಕನ್ನು ಈಡೇರಿಸಿದ್ದೇವೆ. ಉಳಿದ ಇನ್ನೊಂದು ಗ್ಯಾರಂಟಿಯೂ ಶಿಘ್ರದಲ್ಲೇ ನೀಡಲಿದ್ದೇವೆ. ಆದರೆ, ಕೆಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರ ಹಿಡಿದು 9 ವರ್ಷಗಳು ಕಳೆದರೂ ಈ ವರೆಗೂ ಕಪ್ಪು ಹಣ ಬರಲೇ ಇಲ್ಲ ಎಂದು ಇನಾಯತ್ ಅಲಿ ಬಿಜೆಪಿಯನ್ನು ಟೀಕಿಸಿದರು.