ಪುತ್ತೂರು ನಗರಸಭೆಯಲ್ಲಿ ತೆರಿಗೆ ವಸೂಲಾತಿ ಆಂದೋಲನ: ತಮಟೆ ಸದ್ದಿನ ಪ್ರಯೋಗ, ನೋಟೀಸು ನೀಡಿ ಎಚ್ಚರಿಕೆ

Update: 2023-10-05 16:20 GMT

ಪುತ್ತೂರು: ನಗರಸಭೆಯ ವ್ಯಾಪ್ತಿಯೊಳಗೆ ಕಟ್ಟಡ ತೆರಿಗೆ, ಉದ್ಯಮ ಪರವಾನಿಗೆ ಶುಲ್ಕ ಹಾಗು ನೀರಿನ ಶುಲ್ಕ ಇತ್ಯಾದಿ ತೆರಿಗೆಗಳು ಬಾಕಿ ಇರುವ ಹಿನ್ನೆಲೆಯಲ್ಲಿ ನಗರಸಭೆಯಿಂದ 31 ವಾರ್ಡ್‍ಗಳಲ್ಲಿ 15 ದಿನಗಳ ತೆರಿಗೆ ವಸೂಲಾತಿ ಆಂದೋಲನಕ್ಕೆ ತಮಟೆ ಸದ್ದಿನ ಪ್ರಯೋಗ ಮಾಡಿದೆ. ನಗರಸಭೆಯ ಪ್ರತಿ ವಾರ್ಡಿನ ಮನೆಮನೆಗಳಿಗೆ ನಗರಭೆ ಸಿಬ್ಬಂದಿ ತೆರಳಿ ತೆರಿಗೆ ಬಾಕಿದಾರರಿಗೆ ನೋಟೀಸ್ ನೀಡಿ ಎಚ್ಚರಿಕೆ ನೀಡಲಿದ್ದಾರೆ.

ನಗರಸಭೆಯ ಕಚೇರಿ ವಠಾರದಲ್ಲಿ ಗುರುವಾರ ನಗರಸಭೆಯ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ತಮಟೆ ಬಡಿಯುವ ಮೂಲಕ ಆಂದೋಲನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಗರಸಭೆಯ ಪ್ರತಿ ವಾರ್ಡ್‍ ಗಳಿಗೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರು ಪ್ರತಿ ವಾರ್ಡ್‍ಗಳಲ್ಲಿ ಪರಿಶೀಲನೆ ನಡೆಸಿ ಬಾಕಿದಾರ ರನ್ನು ಜಾಗೃತಿಗೊಳಿಸಲಿದ್ದಾರೆ. ಮತ್ತು ತೆರಿಗೆ ಬಾಕಿದಾರರಿಗೆ ನೋಟಿಸ್ ಮಾಡುವ ಕಾರ್ಯ ಮಾಡಲಿದ್ದಾರೆ. ಈ ನಡುವೆ ಪ್ರತಿ ವಾರ್ಡ್‍ಗಳ ಗಲ್ಲಿಗಲ್ಲಿಯಲ್ಲೂ ವಾಹನದ ಮೂಲಕ ತಮಟೆ ಬಡಿದು, ಅನೌನ್ಸ್ ಮಾಡಿಕೊಂಡು ಜಾಗೃತಿ ಮೂಡಿಸುವ ಕಾರ್ಯ ನಡೆಯುವುದು ಎಂದರು.

ನಗರಸಭೆಯ ಎಲ್ಲಾ ಕಾಮಗಾರಿಗಳು, ಕೆಲಸ ಕಾರ್ಯಗಳಿಗೆ ತೆರಿಗೆ ಹಣದಿಂದಲೇ ಪಾವತಿಸಬೇಕಾಗುತ್ತದೆ. ಈಗಾಗಲೇ ರಾಜ್ಯ ಸರ್ಕಾರರ ಮಾಡಿರುವ ಆದೇಶದಂತೆ ಶೇ.100 ರಷ್ಟು ತೆರಿಗೆ ವಸೂಲಾತಿ ಜನವರಿ ತಿಂಗಳೊಳಗಡೆ ಮಾಡಬೇಕಾಗಿದೆ. ಅದಕ್ಕಾಗಿ ಆಂದೋಲನ ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ದಿಂದ ಯಾವುದೇ ಅನುದಾನ ಬಿಡುಗಡೆಯಾಗಬೇಕಾದರೆ ಶೇ.100 ರಷ್ಟು ನಮ್ಮ ತೆರಿಗೆ ವಸೂಲಾತಿ ಆಗಬೇಕಿದೆ. ಈ ನಿಟ್ಟಿನಲ್ಲಿ 15 ದಿನಗಳ ಆಂದೋಲನದಲ್ಲಿ ನಾಗರಿಕರು ಅತಿ ಹೆಚ್ಚಾಗಿ ಬಂದು ಬಾಕಿ ತೆರಿಗೆಯನ್ನು ಪಾವತಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನ ತೆರಿಗೆ ವಸೂಲಾತಿಗೆ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ ಎಂದು ಅವರು ತಿಳಿಸಿದರು.

ನಗರಸಭೆಯ ಸದಸ್ಯ ಯುಸೂಫ್ ಡ್ರೀಮ್, ಕಂದಾಯ ನಿರೀಕ್ಷಕ ರಾಜೇಶ್ ನಾೈಕ್, ಬಿಲ್ ಕಲೆಕ್ಟರ್ ಪುರುಷೊತ್ತಮ, ರೇಣುಕಪ್ರಸಾದ್, ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾಪ್ರಸಾದ್, ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾಕಿರಣ್, ಕರುಣಾಕರ್, ಸಿ.ಆರ್ ದೇವಾಡಿಗ, ರವಿಪ್ರಕಾಶ್,ವರಲಕ್ಷ್ಮೀ ಮತ್ತಿತರರು ಇದ್ದರು. ನಗರಸಭೆಯ ವಿವಿಧ ಕಡೆಗಳಲ್ಲಿ ಸಿಬ್ಬಂದಿ ರಾಧಾಕೃಷ್ಣ ಅವರು ತಮಟೆ ಬಾರಿಸಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News