ಉಜಿರೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು; ಆರೋಪಿ ಸೆರೆ

Update: 2023-09-28 17:21 GMT

ಬೆಳ್ತಂಗಡಿ:ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಪ್ರಕರಣ ಉಜಿರೆಯಲ್ಲಿ ನಡೆದಿದ್ದು, ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿ ತಮಿಳುನಾಡು ಮೂಲದ ಉಮೇಶ್ ಬಳೆಗಾರ (47) ಎಂದು ಗುರುತಿಸಲಾಗಿದೆ. ಆತನಿಂದ ಕಳ್ಳತನ ಮಾಡಲಾದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ

ಉಜಿರೆ ಗ್ರಾಮದ ಅಜಿತ್ ನಗರ ಕೆಲ್ಲೆ ನಿವಾಸಿ ಫೆಲಿಕ್ಸ್ ರೋಡ್ರಿಗಸ್ ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಗಲು ಹೊತ್ತಿನಲ್ಲಿ ಮನೆಯ ಬಾಗಿಲು ಮುರಿದು ನುಗ್ಗಿ ಸುಮಾರು 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಆರಂಭಿಸಿದ್ದರು.

ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಹಾಗೂ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿ ಉಮೇಶ್ ಬಳೆಗಾರ ತಮಿಳುನಾಡು ಮೂಲದವನಾಗಿದ್ದು ಅಂತರ್ ರಾಜ್ಯ ಕಳ್ಳನಾಗಿದ್ದಾನೆ. ಈತನ ವಿರುದ್ಧ ತಮಿಳುನಾಡು, ಕೇರಳದ ವಿವಿಧ ಠಾಣೆಗಳಲ್ಲಿ ಕಳ್ಳತನದ ಪ್ರಕರಣಗಳು ದಾಖಲಿಸಲಾಗಿದೆ. ಅಲ್ಲದೆ ಕರ್ನಾಟಕದ ಪುತ್ತೂರು, ಬಂಟ್ವಾಳ, ಮಂಗಳೂರು, ಮೂಡಬಿದ್ರೆ ಠಾಣೆಯಲ್ಲಿಯೂ ಹಲವಾರು ಪ್ರಕರಣಗಳ ಆರೋಪಿಯಾಗಿದ್ದಾನೆ. ಹಗಲು ಹೊತ್ತಿನಲ್ಲಿಯೇ ಕಳ್ಳತನ ನಡೆಸುವ ಚಾಣಾಕ್ಷ ಕಳ್ಳ ಈತನಾಗಿದ್ದು ಈತನಿಗಾಗಿ ಮೂರೂ ರಾಜ್ಯಗಳ ಪೊಲೀಸರು ಹುಡುಕಾಟ ನಡೆಸುತ್ತಿರುವಾಗಲೇ ಆರೋಪಿಯನ್ನು ಬಂಧಿಸುವಲ್ಲಿ ಬೆಳ್ತಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯಿಂದ ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News