ಉಳ್ಳಾಲ ನಗರಸಭೆ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಉಳ್ಳಾಲ: ನಗರಸಭೆಯ ಅಧ್ಯಕ್ಷೆಯಾಗಿ ಕಾಂಗ್ರೆಸ್ಸಿನ ಶಶಿಕಲಾ, ಉಪಾಧ್ಯಕ್ಷರಾಗಿ ಸಪ್ನ ಹರೀಶ್ ಆಯ್ಕೆಯಾಗಿದ್ದಾರೆ.
ಉಳ್ಳಾಲ ನಗರ ಸಭೆಯ ಎರಡನೇ ಆಡಳಿತಾವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಗರಸಭೆಯ ಸಭಾಂಗಣದಲ್ಲಿ ಸದಸ್ಯರು ಅಭ್ಯರ್ಥಿಗಳ ಪರ ಕೈ ಎತ್ತುವ ಮೂಲಕ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಕಾಂಗ್ರೆಸ್ ನ ಶಶಿಕಲಾ, ಉಪಾಧ್ಯಕ್ಷರಾಗಿ ಸಪ್ನಾ ಹರೀಶ್ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಎ)ದ ಮಹಿಳೆಗೆ ಮೀಸಲಿರಿಸಲಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನ ಶಶಿಕಲಾ, ಬಿಜೆಪಿಯಿಂದ ಭವಾನಿ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನ ಸಪ್ನ ಹರೀಶ್, ಬಿಜೆಪಿಯಿಂದ ನಮಿತ ಗಟ್ಟಿ, ಎಸ್ ಡಿಪಿಐ ಯಿಂದ ಝರೀನ ರವೂಫ್ ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ನ ಶಶಿಕಲಾ ಪರ 23 ಮತಗಳು, ಬಿಜೆಪಿಯ ಭವಾನಿ ಪರ 6 ಮತಗಳು ಚಲಾವಣೆ ಆಗಿದ್ದು, ಇಬ್ಬರು ನಗರ ಸಭೆ ಸದಸ್ಯರಾದ ಬಶೀರ್ ಹಾಗೂ ದಿನಕರ್ ಉಳ್ಳಾಲ ಮತ ಚಲಾಯಿಸದೆ ತಟಸ್ಥರಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ನ ಸಪ್ನಾ ಹರೀಶ್ ಪರ 17 ಮತಗಳು, ಎಸ್ ಡಿಪಿಐ ಯ ಝರೀನ ರವೂಫ್ ಪರ 6 ,ಬಿಜೆಪಿಯ ನಮಿತ ಗಟ್ಟಿಯ ಪರ 6 ಮತಗಳು ಚಲಾವಣೆ ಆದವು. ಇಬ್ಬರು ನಗರ ಸಭೆ ಸದಸ್ಯರು ತಟಸ್ಥರಾದರು.
23 ಮತ ಪಡೆದ ಶಶಿಕಲಾ ಅಧ್ಯಕ್ಷರಾಗಿ,17 ಮತಗಳನ್ನು ಪಡೆದ ಕಾಂಗ್ರೆಸ್ ನ ಸಪ್ನ ಹರೀಶ್ ಉಪಾಧ್ಯಕ್ಷೆಯಾಗಿ ಆಯ್ಕೆ ಆದರು. ಸಹಾಯಕ ಆಯುಕ್ತ ಹರ್ಷವರ್ಧನ್ ಚುನಾವಣೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಉಳ್ಳಾಲ ನಗರ ಸಭೆಯ ಒಟ್ಟು 31 ಸ್ಥಾನ ಗಳ ಪೈಕಿ ಕಾಂಗ್ರೆಸ್ 13, ಬಿಜೆಪಿ 6, ಜೆಡಿಎಸ್ 4, ಎಸ್ ಡಿಪಿಐ 6 ಹಾಗೂ ಇಬ್ಬರು ಪಕ್ಷೇತರರು ಸ್ಥಾನ ಪಡೆದಿದ್ದಾರೆ. ಈ ಪೈಕಿ ಜೆಡಿಎಸ್ ನ ನಾಲ್ವರು ಸದಸ್ಯರ ಪೈಕಿ ಮೂವರು ಜೆಡಿಎಸ್ ಗೆ ರಾಜೀನಾಮೆ ನೀಡಿದ್ದು, ಇವರಲ್ಲಿ ಇಬ್ಬರು ಕಾಂಗ್ರೆಸ್ ಗೆ ಸೇರಿದ್ದರು. ಉಳ್ಳಾಲ ನಗರ ಸಭೆಯ ಕಾಂಗ್ರೆಸ್ ಆಡಳಿತದ ಮೊದಲ ಹಂತದ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರಾವಧಿ ,2023 ಮೇ ತಿಂಗಳಲ್ಲಿ ಕೊನೆಗೊಂಡಿತ್ತು.
ಗೇರು ನಿಗಮದ ಅಧ್ಯಕ್ಷ ಮಮತಾ ಗಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಬೋಳಿಯಾರ್, ಕಾಂಗ್ರೆಸ್ ನ ಹಿರಿಯ ಮುಖಂಡ ಇಬ್ರಾಹಿಂ ಕೋಡಿಜಾಲ್, ರಹ್ಮಾನ್ ಕೋಡಿಜಾಲ್, ಮಾಜಿ ಕೌನ್ಸಿಲರ್ ಮುಸ್ತಫಾ ಉಳ್ಳಾಲ, ಶೌಕತ್ ಕೊಣಾಜೆ, ಆಗಮಿಸಿ ನೂತನ ಅಧ್ಯಕ್ಷ, ಉಪಾಧ್ಯಕ್ಷ ರಿಗೆ ಹೂ ಗುಚ್ಛ ನೀಡಿ ಶುಭ ಕೋರಿದರು.