ಉಪ್ಪಿನಂಗಡಿ: ಹಿಂದುತ್ವ ಸಂಘಟನೆ ಕಾರ್ಯಕರ್ತರಿಂದ ಕಟ್ಟಡಕ್ಕೆ ನುಗ್ಗಿ ಕೂಲಿ ಕಾರ್ಮಿಕರ ಮೇಲೆ ಹಲ್ಲೆ

Update: 2023-10-05 18:05 GMT

ಉಪ್ಪಿನಂಗಡಿ: ಕಟ್ಟಡದ ವಿಚಾರವೊಂದಕ್ಕೆ ಸಂಬಂಧಿಸಿ ಹಿಂದುತ್ವ ಸಂಘಟನೆಗೆ ಸೇರಿದ ಯುವಕ ತಂಡ ಕಟ್ಟಡಕ್ಕೆ ನುಗ್ಗಿ ಅಲ್ಲಿದ್ದ ಕೂಲಿ ಕಾರ್ಮಿಕರಿಗೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಈ ವೇಳೆ ಸ್ಥಳೀಯ ಯುವಕರು ಹಲ್ಲೆಗೊಳಗಾದವರನ್ನು ರಕ್ಷಿಸಲು ಮುಂದಾದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ.

ಈ ಘಟನೆ ಸೆ.23ರಂದು ಉಪ್ಪಿನಂಗಡಿಯಲ್ಲಿ ನಡೆದಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ವಿವರ: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬಾಂಗಟು ಪಾಸ್ವಾನ್ (35) ಎಂಬವರು ಕಳೆದ ಸೆ.24ರಂದು ದೂರು ನೀಡಿದ್ದು, ತಾನು 34 ನೆಕ್ಕಿಲಾಡಿಯ ಜಗಜ್ಜೀವನ್ ರೈ ಅವರ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಸೆ.23ರಂದು ಉಪ್ಪಿನಂಗಡಿಯ ಬಸ್ ನಿಲ್ದಾಣದ ಬಳಿ ನನ್ನ ಧಣಿಗೆ ಸೇರಿದ ಹಳೆಯ ಕಟ್ಟಡದ ದುರಸ್ತಿ ಮಾಡುತ್ತಿದ್ದ ಸಂದರ್ಭ ಮಧ್ಯಾಹ್ನ ಆರೋಪಿಗಳಾದ ಉಪ್ಪಿನಂಗಡಿ ನಿವಾಸಿ ಸುದರ್ಶನ ಹಾಗೂ 10-15 ಮಂದಿ ಅಕ್ರಮ ಪ್ರವೇಶ ಮಾಡಿ ಜಾತಿ ನಿಂದನೆ ಮಾಡಿ, ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ಬಿಡಿಸಲು ಬಂದ ಜಗಜ್ಜೀವನ್ ರೈಯವರಿಗೆ 10-15 ಮಂದಿ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಜಗಜ್ಜೀವನ್ ರೈ ಹಾಗೂ ಆರೋಪಿ ಸುದರ್ಶನ್‍ಗೂ ಕಟ್ಟಡದ ವಿಚಾರದಲ್ಲಿ ತಕರಾರು ಇದ್ದು, ಜಗಜ್ಜೀವನ್ ಕಟ್ಟಡದ ದುರಸ್ತಿ ಕೆಲಸ ಮಾಡಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸುದರ್ಶನ್‍ ಈ ಕೃತ್ಯವೆಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವೈರಲ್ ವಿಡಿಯೋದಲ್ಲೇನಿದೆ?: ಈ ಪ್ರಕರಣ ನಡೆದು ಹಲವು ದಿನಗಳಾದರೂ, ಹಲ್ಲೆಯ ವಿಡಿಯೋ ಅ. 5ರಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪ್ರಕರಣದ ಆರೋಪಿ ಸುದರ್ಶನ್ ಎಂಬಾತ ವಿಶ್ವ ಹಿಂದೂ ಪರಿಷತ್‍ನ ಉಪ್ಪಿನಂಗಡಿ ಪ್ರಖಂಡದ ಅಧ್ಯಕ್ಷನಾಗಿದ್ದು, ಆತ ಸೇರಿದಂತೆ 10-15 ಜನರು ಈ ಕಟ್ಟಡದೊಳಗೆ ನುಗ್ಗಿ ಅಲ್ಲಿ ಕೆಲಸ ಮಾಡುತ್ತಿದ್ದವರನ್ನು ಹೊರಗಡೆ ದೂಡುವ ಹಾಗೂ ಜಗಜ್ಜೀವನ್ ರೈ ಸೇರಿದಂತೆ ಕೆಲವರಿಗೆ ಹಲ್ಲೆ ಮಾಡುವ ದೃಶ್ಯ ದಾಖಲಾಗಿದೆ. ಈ ಹಲ್ಲೆ ನಡೆಸಿದ 10- 15 ಜನ ಬಜರಂಗದಳ- ವಿಶ್ವಹಿಂದೂಪರಿಷತ್ ಸಂಘಟನೆಯಲ್ಲಿ ಗುರುತಿಸಿಕೊಂಡವರೆನ್ನಲಾಗಿದ್ದು, ಇದರಲ್ಲಿ ಓರ್ವ ಭರತ್ ಕುಮ್ಡೇಲು ಎಂದು ತಿಳಿದುಬಂದಿದೆ.

ಈ ಹಲ್ಲೆ ನಡೆದ ಸಂದರ್ಭ ಸ್ಥಳೀಯ ಕೆಲವು ಯುವಕರು ಹಲ್ಲೆಗೊಳಗಾದವರ ರಕ್ಷಣೆಗೆ ಮುಂದಾಗಿದ್ದು ಕಂಡು ಬರುತ್ತಿದೆ. 

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿ, ಘಟನೆಯ ಬಗ್ಗೆ ವಿವರಿಸಿದ ಜಗಜ್ಜೀವನ್ ರೈ ಅವರ ಪುತ್ರ ಭವಿಷ್ ಜೆ. ರೈ, ನನ್ನ ತಂದೆಗೆ ಹಾಗೂ ದರ್ಶನ್ ಎಂಟರ್‍ಪ್ರೈಸಸ್‍ನ ಸುದರ್ಶನ್‌ಗೆ ಸುಮಾರು 45 ವರ್ಷದಿಂದ ಈ ಕಟ್ಟಡದ ಬಗ್ಗೆ ವಿರೋಧವಿದೆ. ಇದರ ಬಗ್ಗೆ ಸುದರ್ಶನ್  ತಂದೆ 1983ರಲ್ಲಿ ದಾವೆ ಹೂಡಿದ್ದರು. ಇದು ಧರ್ಮಸ್ಥಳದ ಮೂಲ ಗೇಣಿಯಲ್ಲಿರುವ ಜಾಗ. ಇಲ್ಲಿ ಕಟ್ಟಡ ಕಟ್ಟಿದ್ದು ತನ್ನ ತಂದೆ ಜಗಜ್ಜೀವನ್ ರೈಯವರ ತಂದೆ ಬಾಳಪ್ಪ ರೈ.

ಇದರಲ್ಲಿ ಸುದರ್ಶನ್‌ಗೆ ಯಾವುದೇ ಹಕ್ಕಿಲ್ಲ. ನ್ಯಾಯಾಲಯದಲ್ಲಿ ಅಫೀಲು ಮಾಡುತ್ತಲೇ ಇದ್ದು, ಈಗ ಇದು ಹೈಕೋರ್ಟ್‍ನಲ್ಲಿದೆ. 2018ರಲ್ಲಿ ಈ ಕಟ್ಟಡಕ್ಕೆ ಸುದರ್ಶನ್  ಬೆಂಕಿ ಕೊಟ್ಟಿದ್ದು, ಆ ಬಗ್ಗೆ ಎಫ್‍ಐಆರ್ ಕೂಡಾ ದಾಖಲಾಗಿದೆ. ಇದರ ಮೇಲ್ಚಾವಣಿ ಕುಸಿದು ಬಿದ್ದಿದ್ದು, ಇದನ್ನು ದುರಸ್ತಿ ಮಾಡಿಸಬಾರದು ಎಂದು ಸುದರ್ಶನ್ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದ. ಆದರೆ ಆ ತಡೆಯಾಜ್ಞೆ ವಜಾವಾಗಿದೆ. ಆದ್ದರಿಂದ ನಾವು ಮೇಲ್ಚಾವಣಿ ರಿಪೇರಿಗೆ ಮುಂದಾಗಿದ್ದೆವು ಎಂದು ಭವಿಷ್ ತಿಳಿಸಿದರು.

ಸೆ.8ರಂದು ಕೂಡಾ ಸುದರ್ಶನ್ ಸ್ಥಳೀಯ ಯುವಕರ ತಂಡವನ್ನು ಕಟ್ಟಿಕೊಂಡು ಬಂದು ಕಟ್ಟಡದೊಳಗೆ ಅಕ್ರಮ ಪ್ರವೇಶ ಮಾಡಿ ಪಿಲ್ಲರ್‍ಗಳಿಗೆ ಹಾನಿಯೆಸಗಿದ್ದ. ಈ ಬಗ್ಗೆಯೂ ಪ್ರಕರಣ ದಾಖಲಾಗಿದೆ. ಸೆ.23ರಂದು ನಾವು ಮೇಲ್ಚಾವಣಿಯ ಕೆಲಸಕ್ಕೆ ಮುಂದಾದಾಗ ಭರತ್ ಕುಂಮ್ಡೇಲು, ಉದಯ ಸವಣೂರು ಸೇರಿದಂತೆ 10-15 ಜನ ಬಂದು ಕಟ್ಟಡದೊಳಗೆ ನುಗ್ಗಿ, ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಭವಿಷ್ ವಿವರಿಸಿದ್ದಾರೆ.

ನೀವು ಬಜರಂಗದಳ ಅಂತ ಹೆಸರು ಹೇಳಿಕೊಂಡು ಬಂದು ಹಿಂದೂಗಳಿಗೆ ಅನ್ಯಾಯ ಮಾಡುವುದು ಸರಿಯಲ್ಲ ಅಂತ ನಾವು ಹೇಳಿದ್ದೆವು. ಆಗ ಪೊಲೀಸರು ಬಂದು ಕೆಲಸ ನಿಲ್ಲಿಸಲು ಸೂಚಿಸಿದ್ದರಲ್ಲದೆ, ಸಂಜೆ 3 ಗಂಟೆಗೆ ವೃತ್ತ ನಿರೀಕ್ಷಕರು ಬರುತ್ತಾರೆ. ಆಗ ಎರಡೂ ಕಡೆಯವರು ಬಂದು ಮಾತನಾಡಿ ಎಂದು ಹೇಳಿ ಹೋಗಿದ್ದರು. ಹಾಗಾಗಿ ನಾವು ಕೆಲಸ ನಿಲ್ಲಿಸಿದ್ದೆವು. ನಾನು ಮಧ್ಯಾಹ್ನ 2:30ಕ್ಕೆ ಪೊಲೀಸ್ ಠಾಣೆಗೆ ತೆರಳಿದ್ದೆ. ಸುದರ್ಶನ್‍ ಠಾಣೆಗೆ ಬಂದು ಮಾತನಾಡದೆ ಆ ಹೊತ್ತಿನಲ್ಲಿ ಏಕಾಏಕಿ ಜನರನ್ನು ಕಟ್ಟಿಕೊಂಡು ಬಂದು ಅಲ್ಲಿ ಕೆಲಸದವರು ಚಾ ಕುಡಿಯುತ್ತಿದ್ದ ಸಂದರ್ಭ ಕಟ್ಟಡದೊಳಗೆ ನುಗ್ಗಿ ಹಲ್ಲೆ ನಡೆಸಿದ್ದಾನೆ. ಆಗ ನಮ್ಮ ರಕ್ಷಣೆಗೆ ಸ್ಥಳೀಯ ಮುಸ್ಲಿಮ್‌ ಯುವಕರು ಬಂದಿದ್ದರು ಎಂದು ಭವಿಷ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News