ಹರೇಕಳ ಆಲಡ್ಕ ಮದ್ರಸದಲ್ಲಿ ಮತದಾನ ಜಾಗೃತಿ: ವಿದ್ಯಾರ್ಥಿ ಸಂಘಕ್ಕೆ ಪ್ರಜಾಪ್ರಭುತ್ವ ಮಾದರಿ ಚುನಾವಣೆ

Update: 2024-06-30 17:43 GMT

ಮಂಗಳೂರು: ಎಲ್ಲರಿಗೂ ಮದ್ರಸದಲ್ಲಿ ಮೊದಲ ಮತದಾನದ ಸಂಭ್ರಮ. ಕೆಲವರಿಗೆ ಶಾಲೆಗಳಲ್ಲಿ ಮತದಾನ ಮಾಡಿದ ಅನುಭವ. ಆದರೂ ನಾಮಪತ್ರ ಸಲ್ಲಿಕೆ, ಹಿಂಪಡೆಯಲು ಮತ್ತು ಪ್ರಚಾರಕ್ಕೆ ಸಮಯಾವಕಾಶ, ಗುರುತಿನ ಚೀಟಿ ವಿತರಿಸಿ ಮತದಾರರ ಪಟ್ಟಿ ತಯಾರಿ, ಮಕ್ಕಳ ವಿದ್ಯಾರ್ಥಿ ಮಂಡಳಿ (ಎಸ್ ಬಿ ಎಸ್) ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ, ಸಾರ್ವತ್ರಿಕ ಚುನಾವಣಾ ಪದ್ಧತಿಯ ಮಾದರಿಯಲ್ಲಿ ಸಣ್ಣ ಪ್ರಾಯದಲ್ಲೇ ಆಡಳಿತ ವ್ಯವಸ್ಥೆ ಹಾಗೂ ಚುನಾವಣಾ ಜಾಗೃತಿ ಮೂಡಿಸಲು ಹರೇಕಳ ಆಲಡ್ಕದ ಬದ್ರಿಯಾ ಜುಮಾ ಮಸೀದಿ ಅಧೀನದ ಹಿದಾಯತುಲ್ ಇಸ್ಲಾಂ ಮದ್ರಸದಲ್ಲಿ ಅಧ್ಯಾಪಕರ ವಿನೂತನ ಪ್ರಯತ್ನ ನಡೆಯಿತು.

ಎಸ್ ಬಿ ಎಸ್ ಅಧ್ಯಕ್ಷ, ಕಾರ್ಯದರ್ಶಿ ಮತ್ತು ವಿದ್ಯಾರ್ಥಿನಿಯರ ಸಮಿತಿಗೆ ಒಟ್ಟು 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.  ಎಲ್ಲಾ ಅಭ್ಯರ್ಥಿಗಳನ್ನು ಪ್ರತಿನಿಧಿಸುವ ಏಜೆಂಟರುಗಳು ಉಪಸ್ಥಿತರಿದ್ದರು. ಮತದಾರ ವಿದ್ಯಾರ್ಥಿಗಳು ಗುರುತು ಪತ್ರ ತೋರಿಸಿ ಮತ‌ ಚಲಾಯಿಸಿದರು.

ಚುನಾವಣೆಯಲ್ಲಿ ಪಾಲ್ಗೊಳ್ಳಲು 113 ಮತದಾರರನ್ನು ಗುರುತಿಸಿ ಗುರುತಿನ ಚೀಟಿ ನೀಡಲಾಗಿತ್ತು. 14 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು ಚುನಾವಣೆ ಎದುರಿಸಿದರು. ಚುನಾವಣಾಧಿಕಾರಿಯಾಗಿ ಮದ್ರಸ ಶಿಕ್ಷಕರಾದ ಸಲಾಂ ಮದನಿ, ಹಮೀದ್ ಸಖಾಫಿ, ಮುಸ್ತಫ ಮದನಿ, ರಫೀಕ್ ಮಿಸ್ಬಾಹಿ, ಅಶ್ರಫ್ ಸಅದಿ, ಅನ್ವರ್ ಮರ್ಝೂಕಿ ಜವಾಬ್ದಾರಿ ವಹಿಸಿದ್ದರು. ಉತ್ತರಾಧಿಕಾರಿ, ವ್ಯವಸ್ಥಾಪಕರಾಗಿ ಮಸೀದಿ ಆಡಳಿತ ಸಮಿತಿಯವರು ಕರ್ತವ್ಯ ನಿರ್ವಹಿಸಿದರು. ಮತಗಟ್ಟೆ ಪ್ರವೇಶಿಸುವ ಮುಖ್ಯ ದ್ವಾರದಲ್ಲಿ ಇಬ್ಬರು ವಿದ್ಯಾರ್ಥಿಗಳು ಪೊಲೀಸ್ ಪಡೆಯ ಸಮವಸ್ತ್ರ ಧರಿಸಿ ಕಾವಲಿದ್ದರು. ಒಳಭಾಗದಲ್ಲಿ ಗುರುತಿನ ಚೀಟಿ ಪರಿಶೀಲನೆ, ಬೆರಳಿಗೆ ಶಾಯಿ, ಮತಪತ್ರಕ್ಕೆ ಮೊಹರು, ಡಬ್ಬದ ವ್ಯವಸ್ಥೆ ಇತ್ತು. ಈ ಮೂಲಕ ಪ್ರಜಾಪ್ರಭುತ್ವ ಮಾದರಿಯ ಚುನಾವಣೆ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಯಿತು.

ಚುನಾಯಿತ ಪದಾಧಿಕಾರಿಗಳು:

ಅಧ್ಯಕ್ಷ- ಶಫೀಖ್, ಉಪಾಧ್ಯಕ್ಷ- ಅಮೀನ್, ಪ್ರ.ಕಾರ್ಯದರ್ಶಿ- ಶಯಾಲ್, ಕಾರ್ಯದರ್ಶಿ- ಫಾಶಿಹ್, ಕೋಶಾಧಿಕಾರಿ- ರಿಯಾಫ್, ಮದ್ರಸ ಲೀಡರ್- ಸುಫೈದ್, ಗ್ರೂಪ್ ಲೀಡರ್- ಜಾವಿದ್, ತಜ್ಮಲ್ ಆಯ್ಕೆಯಾದರು.

ವಿದ್ಯಾರ್ಥಿನಿಯರ ಸಮಿತಿ: ಮದ್ರಸ ಲೀಡರ್- ಮಶ್ಹೂರ, ಶಾಝಿಯಾ, ಗ್ರೂಪ್ ಲೀಡರ್- ಝುಹಾ, ಹೈಫಾ, ಹಫೀಝ, ಮುಶ್ರಿಫಾ ಆಯ್ಕೆಯಾದರು.

 

 

 

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News