ಆನ್ಲೈನ್ ಗೇಮಿಂಗ್ ಕಂಪೆನಿಗಳಿಗೆ 1 ಲಕ್ಷ ಕೋಟಿ ರೂ. ಜಿಎಸ್ಟಿ ನೋಟಿಸ್
ಹೊಸದಿಲ್ಲಿ: ಈವರೆಗೆ ನಡೆಸಿರುವ ತೆರಿಗೆ ವಂಚನೆಗಾಗಿ ಆನ್ಲೈನ್ ಗೇಮಿಂಗ್ ಕಂಪೆನಿಗಳಿಗೆ ಜಿಎಸ್ಟಿ ಅಧಿಕಾರಿಗಳು ಒಂದು ಲಕ್ಷ ಕೋಟಿ ರೂಪಾಯಿ ಮೊತ್ತದ ಶೋಕಾಸ್ ನೋಟಿಸ್ಗಳನ್ನು ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಆದರೂ ̧ಅ.1ರ ಬಳಿಕ, ಭಾರತದಲ್ಲಿ ವಿದೇಶಿ ಗೇಮಿಂಗ್ ಕಂಪೆನಿಗಳ ನೋಂದಾವಣೆ ಬಗ್ಗೆ ಯಾವುದೇ ಅಂಕಿಅಂಶಗಳು ಲಭ್ಯವಿಲ್ಲ ಎಂದು ಅವರು ತಿಳಿಸಿದರು.
ಸರಕಾರವು ಜಿಎಸ್ಟಿ ಕಾನೂನಿಗೆ ತಿದ್ದುಪಡಿ ತಂದಿದ್ದು, ಅಕ್ಟೋಬರ್ ನಿಂದ ವಿದೇಶಿ ಆನ್ಲೈನ್ ಗೇಮಿಂಗ್ ಕಂಪೆನಿಗಳು ಭಾರತದಲ್ಲಿ ತಮ್ಮ ಹೆಸರನ್ನು ನೋಂದಾಯಿಸುವುದನ್ನು ಕಡ್ಡಾಯಗೊಳಿಸಿದೆ.
ಆನ್ಲೈನ್ ಗೇಮಿಂಗ್ ವೇದಿಕೆಗಳಲ್ಲಿ ಮಾಡುವ ಬೆಟ್ಗಳ ಪೂರ್ಣ ಮೌಲ್ಯದ ಮೇಲೆ 28 ಶೇಕಡ ಜಿಎಸ್ಟಿ ವಿಧಿಸಲಾಗುವುದು ಎಂಬುದಾಗಿ ಜಿಎಸ್ಟಿ ಮಂಡಳಿಯು ಆಗಸ್ಟ್ನಲ್ಲಿ ಹೇಳಿತ್ತು.
‘‘ಜಿಎಸ್ಟಿ ಅಧಿಕಾರಿಗಳು ಈವರೆಗೆ ಆನ್ಲೈನ್ ಗೇಮಿಂಗ್ ಕಂಪೆನಿಗಳಿಗೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಮೊತ್ತಕ್ಕೆ ನೋಟಿಸ್ಗಳನ್ನು ನೀಡಿದ್ದಾರೆ’’ ಎಂದು ಅಧಿಕಾರಿ ತಿಳಿಸಿದರು. ಡ್ರೀಮ್ 11 ಮುಂತಾದ ಆನ್ಲೈನ್ ಗೇಮಿಂಗ್ ಕಂಪೆನಿಗಳು ಮತ್ತು ಡೆಲ್ಟಾ ಕಾರ್ಪ್ ಮುಂತಾದ ಕ್ಯಾಸಿನೊ ಆಪರೇಟರ್ಗಳಿಗೆ ಕಡಿಮೆ ತೆರಿಗೆ ಪಾವತಿಗಾಗಿ ಕಳೆದ ತಿಂಗಳು ಜಿಎಸ್ಟಿ ಅಧಿಕಾರಿಗಳು ಶೋಕಾಸ್ ನೋಟಿಸ್ಗಳನ್ನು ನೀಡಿದ್ದರು.