ಅಮಿತ್ ಶಾ ಪ್ರವಾಸಗಳ ಬಗ್ಗೆ ಮಾಹಿತಿ ನೀಡಿದವರಿಗೆ ಒಂದು ದಶಲಕ್ಷ ಡಾಲರ್ ಬಹುಮಾನ ಘೋಷಿಸಿದ ಪನ್ನುನ್
ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾರ ವಿದೇಶ ಪ್ರವಾಸಗಳ ಕುರಿತು ನನಗೆ ಮಾಹಿತಿ ನೀಡುವವರಿಗೆ ಒಂದು ದಶಲಕ್ಷ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಿರುವ ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುರು ಪತ್ವಂತ್ ಸಿಂಗ್ ಪನ್ನುನ್, ನವೆಂಬರ್ 26ರಿಂದ CRPF ಶಾಲೆಗಳನ್ನು ಮುಚ್ಚಬೇಕು ಎಂದೂ ಆಗ್ರಹಿಸಿದ್ದಾನೆ.
Times of India ವರದಿಯ ಪ್ರಕಾರ, ಅಮೃತಸರದಲ್ಲಿನ ಸ್ವರ್ಣಮಂದಿರದ ಮೇಲಿನ ದಾಳಿ, 1984ರ ಜನಾಂಗೀಯ ಹತ್ಯೆಯಲ್ಲಿ ಪಾಲ್ಗೊಂಡಿದ್ದವರಿಗೆ ಸನ್ಮಾನ ಹಾಗೂ ಪಂಜಾಬ್ ನಲ್ಲಿ ನ್ಯಾಯಾಂಗ ಬಾಹಿರ ಹತ್ಯೆಗಳಂಥ ದೌರ್ಜನ್ಯಗಳನ್ನು CRPF ನಡೆಸಿದೆ. ಹೀಗಾಗಿ, ಪೋಷಕರು ತಮ್ಮ ಮಕ್ಕಳನ್ನು CRPF ಶಾಲೆಗಳಿಗೆ ಕಳಿಸಬಾರದು ಎಂದು ಪನ್ನುನ್ ತನ್ನ ಪ್ರಕಟಣೆಯಲ್ಲಿ ಹೇಳಿದ್ದಾನೆ.
ತನಗೆ ಹಾಗೂ ತನ್ನ ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾರ ವಿದೇಶ ಪ್ರವಾಸಗಳ ಕುರಿತು ಮಾಹಿತಿ ನೀಡುವವರಿಗೆ ಒಂದು ದಶಲಕ್ಷ ಡಾಲರ್ ಬಹುಮಾನ ನೀಡುವುದಾಗಿಯೂ ಪನ್ನುನ್ ಘೋಷಿಸಿದ್ದಾನೆ.
“ಗೃಹ ಸಚಿವರು CRPF ನ ಮುಖ್ಯಸ್ಥರಾಗಿದ್ದು, ಹರ್ದೀಪ್ ನಿಜ್ಜರ್ ಹತ್ಯೆಗೆ ಬಾಡಿಗೆ ಹಂತಕರನ್ನು ನಿಯೋಜಿಸಿದ್ದಕ್ಕೆ ಹಾಗೂ ನ್ಯೂಯಾರ್ಕ್ ನಲ್ಲಿ ನನ್ನ ಮೇಲೆ ಹತ್ಯಾ ಪ್ರಯತ್ನ ನಡೆಸಿದ್ದಕ್ಕೆ ಅವರೇ ಹೊಣೆ” ಎಂದೂ ಪನ್ನುನ್ ಆರೋಪಿಸಿದ್ದಾನೆ.
ರವಿವಾರ ದಿಲ್ಲಿಯ ರೋಹಿಣಿಯಲ್ಲಿನ ಪ್ರಶಾಂತ್ ವಿಹಾರದಲ್ಲಿರುವ CRPF ಶಾಲೆ ಬಳಿ ಸ್ಫೋಟ ಸಂಭವಿಸಿದ ನಂತರ, ಪನ್ನುನ್ ನಿಂದ ಈ ಹೇಳಿಕೆ ಹೊರ ಬಿದ್ದಿದೆ. ಈ ಸ್ಫೋಟದ ಹೊಣೆಯನ್ನು ಖಾಲಿಸ್ತಾನಿ ಪರ ಗುಂಪೊಂದು ಹೊತ್ತುಕೊಂಡ ನಂತರ, ಆ ಪೋಸ್ಟ್ ನ ಮಾಹಿತಿ ಒದಗಿಸುವಂತೆ ಸಂದೇಶ ತಂತ್ರಾಂಶವಾದ ಟೆಲಿಗ್ರಾಮ್ ಗೆ ದಿಲ್ಲಿ ಪೊಲೀಸರು ಪತ್ರ ಬರೆದಿದ್ದಾರೆ.
ಇದರ ಬೆನ್ನಿಗೇ, CRPF ಸೋಮವಾರ ರಾತ್ರಿ ಸಂಶಯಾಸ್ಪದ ಇಮೇಲ್ ಒಂದನ್ನು ಸ್ವೀಕರಿಸಿದ್ದು, ಮಂಗಳವಾರ 11 ಗಂಟೆಯ ವೇಳೆಗೆ ಮೂರು CRPF ಜಾಗಗಳಲ್ಲಿ ಸುಧಾರಿತ ಬಾಂಬ್ ಗಳು ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂದು ಬೆದರಿಕೆ ಒಡ್ಡಲಾಗಿದೆ.
ಈ ನಡುವೆ, ದಿಲ್ಲಿಯ ರೋಹಿಣಿ, ದ್ವಾರಕಾ ಹಾಗೂ ಹೈದರಾಬಾದ್ ನ ಮೆಡ್ಚಲ್ ನಲ್ಲಿರುವ ಮೂರು CRPF ಶಾಲೆಗಳು ಸುರಕ್ಷಿತವಾಗಿದ್ದು, ಸಹಜವಾಗಿ ಕಾರ್ಯನಿರ್ವಹಿಸುತ್ತಿವೆ.