ಶ್ರೀನಗರದಲ್ಲಿ ಗ್ರೆನೇಡ್ ದಾಳಿ: 12 ನಾಗರಿಕರಿಗೆ ಗಾಯ
ಜಮ್ಮು,ಕಾಶ್ಮೀರ: ಶ್ರೀನಗರದಲ್ಲಿ ರವಿವಾರ ನಡೆದ ಗ್ರೆನೇಡ್ ದಾಳಿಯಲ್ಲಿ ಕನಿಷ್ಠ 12 ನಾಗರಿಕರು ಗಾಯಗೊಂಡಿದ್ದು, ಗಾಯಾಳುಗಳನ್ನು ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶ್ರೀನಗರದ ಟೂರಿಸ್ಟ್ ರಿಸಿಪ್ಸನ್ ಸೆಂಟರ್ ಬಳಿಯ ಸಂಡೇ ಮಾರ್ಕೆಟ್ ನಲ್ಲಿ ಸ್ಪೋಟ ಸಂಭವಿಸಿದೆ. ಸ್ಫೋಟದಿಂದಾಗಿ ಪ್ರದೇಶದಲ್ಲಿ ಭೀತಿ ಉಂಟಾಗಿದೆ. ಗಾಯಗೊಂಡವರಲ್ಲಿ 8 ಪುರುಷರು ಮತ್ತು ಮಹಿಳೆಯರು ಸೇರಿದ್ದಾರೆ. ಗಾಯಗೊಂಡವರನ್ನು ರಕ್ಷಿಸಿ ಪೊಲೀಸರು ಮತ್ತು ಅರೆಸೇನಾ ಪಡೆಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳ ಆರೋಗ್ಯ ಸ್ಥಿರವಾಗಿದೆ ಎಂದು ಎಸ್ಎಂಎಚ್ಎಸ್ನ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ತಸ್ನೀಮ್ ಶೋಕತ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಘಟನೆಯನ್ನು ಖಂಡಿಸಿದ್ದು, ಶ್ರೀನಗರದ 'ಸಂಡೇ ಮಾರ್ಕೆಟ್'ನಲ್ಲಿ ಅಮಾಯಕ ವ್ಯಾಪಾರಿಗಳ ಮೇಲೆ ಗ್ರೆನೇಡ್ ದಾಳಿ ನಡೆದಿರುವುದು ಆಘಾತಕಾರಿಯಾಗಿದೆ. ಅಮಾಯಕ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಸಿರುವ ಈ ದಾಳಿಗೆ ಯಾವುದೇ ಸಮರ್ಥನೆ ಇಲ್ಲ. ಈ ದಾಳಿ ಕೊನೆಗೊಳಿಸಲು ಭದ್ರತಾ ಸಂಸ್ಥೆಗಳು ಸಾಧ್ಯವಿರುವ ಎಲ್ಲವನ್ನೂ ಮಾಡಬೇಕು ಎಂದು ಉಮರ್ ಅಬ್ದುಲ್ಲಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.