ಹಾಥ್ರಸ್‌ ನ ಭೋಲೆ ಬಾಬಾ ಸತ್ಸಂಗ ಕಾರ್ಯಕ್ರಮದಲ್ಲಿ ಭೀಕರ ಕಾಲ್ತುಳಿತ | ಕನಿಷ್ಠ 120 ಮಂದಿ ಮೃತ್ಯು

Update: 2024-07-02 17:52 GMT

ಲಕ್ನೊ : ಉತ್ತರಪ್ರದೇಶದ ಹಾಥ್ರಸ್ ನಲ್ಲಿ ಮಂಗಳವಾರ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭೀಕರ ಕಾಲ್ತುಳಿತ ಸಂಭವಿಸಿದ್ದು, 108 ಮಹಿಳೆಯರು, ಏಳು ಮಕ್ಕಳು ಸೇರಿದಂತೆ ಕನಿಷ್ಠ 120 ಮಂದಿ ಮೃತಪಟ್ಟಿದ್ದಾರೆ ಹಾಗೂ 25ಕ್ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಹಾಥರಸ್ ಜಿಲ್ಲೆಯ ಪುಲರಾಯ್ ಗ್ರಾಮದಲ್ಲಿ ಸ್ಥಳೀಯ ಧಾರ್ಮಿಕ ನಾಯಕ ಭೋಲೆ ಬಾಬಾ ಯಾನೆ ನಾರಾಯಣ್ ಸಾಕಾರ್ ಹರಿ ಅವರ ಗೌರವಾರ್ಥ ಆಯೋಜಿಸಲಾಗಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಈ ದುರಂತ ಸಂಭವಿಸಿದೆ. ಸತ್ಸಂಗದಲ್ಲಿ 25 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದು, ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರೆನ್ನಲಾಗಿದೆ.

ಸಮಾರಂಭ ಮುಕ್ತಾಯವಾದ ಬಳಿಕ ಜನರು ಸ್ಥಳದಿಂದ ನಿರ್ಗಮಿಸತೊಡಗಿದಾಗ ಕಾಲ್ತುಳಿತವುಂಟಾಗಿದೆಯೆಂದು ಪ್ರತ್ಯಕ್ಷದರ್ಶಿ ಗಳು ತಿಳಿಸಿದ್ದಾರೆ. ಸ್ವಘೋಷಿತ ಧರ್ಮಗುರು ನಾರಾಯಣ್ ಸಾಕಾರ್ ಹರಿ ಅವರ ಕಾರು ನಿರ್ಗಮಿಸುವವರೆಗೂ ಸ್ಥಳದಿಂದ ಹೊರಹೋಗದಂತೆ ಭಕ್ತಾದಿಗಳನ್ನು ಆಯೋಜಕರು ತಡೆದಿದ್ದರು. ಇದರಿಂದಾಗಿ ಸಣ್ಣ ಪ್ರದೇಶದಲ್ಲಿ ಭಾರೀ ಜನಜಂಗುಳಿ ಜಮಾಯಿಸಿತ್ತು. ಧಾರ್ಮಿಕ ಗುರುವಿನ ಕಾರು ನಿರ್ಗಮಿಸುತ್ತಿದ್ದಂತೆಯೇ, ಜನರು ಒಮ್ಮಿಂದೊಮ್ಮೆಲೆ ಸ್ಥಳದಿಂದ ತೆರಳತೊಡಗಿದಾಗ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಕಾಲ್ತುಳಿತದಿಂದ ಮೃತಪಟ್ಟವರ ಮೃತದೇಹಗಳನ್ನು ಬಸ್, ಟೆಂಪೊಗಳಲ್ಲಿ ಹೇರಿಕೊಂಡು ಸ್ಥಳೀಯ ಸಾಮುದಾಯಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯುತ್ತಿರುವ ದೃಶ್ಯಗಳ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಪೋಸ್ಟ್ ಮಾರ್ಟಂ ಕೇಂದ್ರದ ಹೊರಗಡೆ ಇರಿಸಲಾದ ಶವಗಳ ಮುಂದೆ ಕುಳಿತುಕೊಂಡು ಬಂಧುಗಳು ಸಹಾಯಕ್ಕಾಗಿ ರೋದಿಸುತ್ತಿರುವ ಮನಕಲಕುವ ದೃಶ್ಯಗಳ ವೀಡಿಯೊಗಳನ್ನು ಪ್ರತ್ಯಕ್ಷದರ್ಶಿಗಳು ಹಂಚಿಕೊಂಡಿದ್ದಾರೆ. ಕಾಲ್ತುಳಿತ ಸಂಭವಿಸಿದ ಸ್ಥಳದಲ್ಲಿ ನೂರಾರು ಮಂದಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಆ್ಯಂಬುಲೆನ್ಸ್ ಗಳೇ ಇಲ್ಲವೆಂದು ಅವರು ಹೇಳಿದ್ದಾರೆ.

► ಸತ್ಸಂಗ ಆಯೋಜಕರ ವಿರುದ್ಧ ಎಫ್ಐಆರ್

ಹಾಥ್ರಸ್ ನಲ್ಲಿ ಮಂಗಳವಾರ ಭೀಕರ ಕಾಲ್ತುಳಿತದ ಘಟನೆಗೆ ಸಂಬಂಧಿಸಿ, ಸತ್ಸಂಗ ಕಾರ್ಯಕ್ರಮದ ಆಯೋಜಕರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

► ಜಿಲ್ಲಾಡಳಿತದಿಂದಲೇ ಕಾರ್ಯಕ್ರಮಕ್ಕೆ ಭದ್ರತಾ ವ್ಯವಸ್ಥೆ

ಹಾಥ್ರಸ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಸತ್ಸಂಗ್ ಒಂದು ಖಾಸಗಿ ಕಾರ್ಯಕ್ರಮವಾಗಿದ್ದು, ಅದಕ್ಕೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅವರು ಅನುಮತಿ ನೀಡಿದ್ದರು. ಕಾರ್ಯಕ್ರಮಕ್ಕೆ ಜಿಲ್ಲಾಡಳಿತವು ಭದ್ರತಾ ಏರ್ಪಾಡುಗಳನ್ನು ಮಾಡಿದೆ. ಆದರೆ ಇತರ ವ್ಯವಸ್ಥೆಗಳನ್ನು ಸಂಘಟಕರೇ ಮಾಡಬೇಕಾಗಿತ್ತು ಎಂದು ಕುಮಾರ್ ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News