ಪತಂಜಲಿ ಮಳಿಗೆಗಳಲ್ಲಿ 14 ನಿಷೇಧಿತ ಉತ್ಪನ್ನಗಳ ಮುಕ್ತ ಮಾರಾಟ; ವರದಿ
ಹೊಸದಿಲ್ಲಿ: ಕಳೆದ ಎಪ್ರಿಲ್‌ನಲ್ಲಿ ಉತ್ತರಾಖಂಡ ರಾಜ್ಯ ಪರವಾನಿಗೆ ಇಲಾಖೆಯು ನಿಷೇಧಿಸಿದ 14 ಉತ್ಪನ್ನಗಳ ಮಾರಾಟ ಮತ್ತು ಜಾಹೀರಾತುಗಳನ್ನು ನಿಲ್ಲಿಸಲಾಗಿದೆ ಎನ್ನುವುದಕ್ಕೆ ಪುರಾವೆಯನ್ನು ಒದಗಿಸುವಂತೆ ಸರ್ವೋಚ್ಚ ನ್ಯಾಯಾಲಯವು ಪತಂಜಲಿ ಆಯುರ್ವೇದ್‌ಗೆ ಮಂಗಳವಾರ ಆದೇಶಿಸಿದೆ. ನಿಷೇಧಕ್ಕೆ ಬದ್ಧವಾಗಿರುವಂತೆ ತಾನು ಎಲ್ಲ ಮಳಿಗೆ ಮಾಲಿಕರು,ಜಾಹೀರಾತು ಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನಿರ್ದೇಶನಗಳನ್ನು ಹೊರಡಿಸಿರುವುದಾಗಿ ಪತಂಜಲಿ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ಈ ಆದೇಶ ಹೊರಬಿದ್ದಿದೆ ಎಂದು hindustantimes.com ವರದಿ ಮಾಡಿದೆ.
ಆದರೆ ಈ ನಿಷೇಧಿತ ಉತ್ಪನ್ನಗಳು ಈಗಲೂ ಪತಂಜಲಿಯ ಮಳಿಗೆಗಳಲ್ಲಿ ಮುಕ್ತವಾಗಿ ಮಾರಾಟವಾಗುತ್ತಿವೆ ಎನ್ನುವುದನ್ನು ಆಂಗ್ಲ ದೈನಿಕ ‘Hindustan Times’ತನ್ನ ತನಿಖಾ ವರದಿಯಲ್ಲಿ ಬಯಲಿಗೆಳೆದಿದೆ. ಮಂಗಳವಾರ ಮತ್ತು ಬುಧವಾರ ಹೊಸದಿಲ್ಲಿ,ಲಕ್ನೋ,ಪಾಟ್ನಾ ಮತ್ತು ಡೆಹ್ರಾಡೂನ್‌ನಲ್ಲಿಯ ಪತಂಜಲಿ ಮಳಿಗೆಗಳಿಗೆ ಭೇಟಿ ನೀಡಿದ ವರದಿಗಾರರ ತಂಡವು ನಿಷೇಧಿತ 14 ಉತ್ಪನ್ನಗಳನ್ನು ಖರೀದಿಸಿದೆ ಮತ್ತು ರಸೀದಿಗಳನ್ನೂ ಪಡೆದುಕೊಂಡಿದೆ. ಕೆಲವು ಮಳಿಗೆಗಳಲ್ಲಿ ಎಲ್ಲ ಹದಿನಾಲ್ಕೂ ಉತ್ಪನ್ನಗಳು ಲಭ್ಯವಿರಲಿಲ್ಲ, ಆದರೆ ಇನ್ನೊಂದು ವಾರದಲ್ಲಿ ಲಭ್ಯವಾಗಲಿವೆ ಎಂದು ಮಾಲಿಕರು ತಿಳಿಸಿದ್ದಾರೆ. ಖಚಿತವಾಗಿ ಹೇಳುವುದಾದರೆ ಎಲ್ಲ 14 ನಿಷೇಧಿತ ಉತ್ಪನ್ನಗಳು ಒಂದಲ್ಲ ಒಂದು ಮಳಿಗೆಯಲ್ಲಿ ಲಭ್ಯವಿದ್ದವು.
ಎ.15ರಂದು ಹೇರಲಾಗಿದ್ದ ನಿಷೇಧವನ್ನು ಇನ್ನೊಂದು ರಾಜ್ಯ ಇಲಾಖೆಯು ಕಾರ್ಯವಿಧಾನದ ಆಧಾರದಲ್ಲಿ ಹಿಂದೆಗೆದುಕೊಂಡಿದೆ, ಇದರ ಬಳಿಕ ಜು.8ರಂದು ಪತಂಜಲಿಗೆ ಹೊಸದಾಗಿ ಶೋಕಾಸ್ ನೋಟಿಸ್‌ಗಳನ್ನು ಹೊರಡಿಸಲಾಗಿದೆ ಎಂದು ಉತ್ತರಾಖಂಡ ಸರಕಾರವು ತನ್ನ ಅಫಿಡವಿಟ್‌ನಲ್ಲಿ ತಿಳಿಸಿದ್ದರೂ ಮಂಗಳವಾರ ನ್ಯಾ.ಹಿಮಾ ಕೊಹ್ಲಿ ನೇತೃತ್ವದ ಸರ್ವೋಚ್ಚ ನ್ಯಾಯಾಲಯದ ಪೀಠವು ಪುರಾವೆಗಳನ್ನು ಒದಗಿಸುವಂತೆ ಆದೇಶವನ್ನು ಹೊರಡಿಸಿದೆ. ಆದರೆ, ನಿಷೇಧವನ್ನು ಹಿಂದೆಗೆದುಕೊಂಡಿರುವ ಬಗ್ಗೆ ಯಾವುದೇ ಅಧಿಕೃತ ಸಂವಹನವನ್ನು ಕಂಪನಿಯು ಸ್ವೀಕರಿಸಿಲ್ಲ,ಹೀಗಾಗಿ ಸರ್ವೋಚ್ಚ ನ್ಯಾಯಾಲಯದ ಆದೇಶಗಳಿಗೆ ಕಂಪನಿಯು ಬದ್ಧವಾಗಿದೆ ಎಂದು ಪತಂಜಲಿ ಪರ ವಕೀಲರು ತಿಳಿಸಿದರು.
ಸೂಚನೆಗಳನ್ನು ಅನುಸರಿಸಲಾಗಿದೆಯೇ ಮತ್ತು 14 ಆಯುರ್ವೇದ ಉತ್ಪನ್ನಗಳನ್ನು ಮಾರಾಟದಿಂದ ಹಿಂದೆಗೆದುಕೊಳ್ಳಲಾಗಿದೆಯೇ ಎಂಬ ಬಗ್ಗೆ ಅಫಿಡವಿಟ್‌ನ್ನು ಎರಡು ವಾರಗಳಲ್ಲಿ ಸಲ್ಲಿಸುವಂತೆ ಸೂಚಿಸಿರುವ ಸರ್ವೋಚ್ಚ ನ್ಯಾಯಾಲಯವು ಜು.30ರಂದು ಮುಂದಿನ ವಿಚಾರಣೆಯನ್ನು ನಡೆಸಲಿದೆ.
ಶ್ವಾಸಾರಿ ಗೋಲ್ಡ್,ಶ್ವಾಸಾರಿ ವಟಿ,ಬ್ರಾಂಕೋಮ್,ಶ್ವಾಸಾರಿ ಪ್ರವಾಹಿ,ಶ್ವಾಸಾರಿ ಅವಲೇಹ,ಮುಕ್ತಾ ವಟಿ ಎಕ್ಸ್ಟ್ರಾ ಪವರ್, ಲಿಪಿಡೋಮ್,ಬಿಪಿ ಗ್ರಿಟ್,ಮಧುಗ್ರಿಟ್,ಮಧುನಾಶಿನಿ ವಟಿ ಎಕ್ಸ್ಟ್ರಾ ಪವರ್,ಲಿವಾಮೃತ ಅಡ್ವಾನ್ಸ್,ಲಿವೊಗ್ರಿಟ್,ಆಯ್‌ಗ್ರಿಟ್ ಗೋಲ್ಡ್ ಮತ್ತು ಪತಂಜಲಿ ದೃಷ್ಟಿ ಆಯ್ ಡ್ರಾಪ್ ಇವುಗಳ ತಯಾರಿಕೆ ಪರವಾನಿಗೆಗಳನ್ನು ರದ್ದುಗೊಳಿಸಲಾಗಿತ್ತು.
ಉತ್ತರಾಖಂಡ ರಾಜ್ಯ ಪರವಾನಿಗೆ ಇಲಾಖೆಯು ತನ್ನ 14 ಉತ್ಪನ್ನಗಳ ಮೇಲೆ ಹೇರಿರುವ ನಿಷೇಧಕ್ಕೆ ತಾನು ಬದ್ಧವಾಗಿದ್ದೇನೆ ಎಂದು ಪತಂಜಲಿ ಹೇಳಿಕೊಂಡಿದೆಯಾದರೂ ಈ ಎಲ್ಲ ಉತ್ಪನ್ನಗಳು ಈಗಲೂ ಮಾರಾಟವಾಗುತ್ತಿವೆ ಎನ್ನುವುದು ಸ್ಪಷ್ಟವಾಗಿದೆ ಎಂದು ತನಿಖಾ ವರದಿ ತಿಳಿಸಿದೆ.