ಕಳೆದ 5 ವರ್ಷಗಳಲ್ಲಿ 140 ಖಾಸಗಿ ವಿ.ವಿ. ಆರಂಭ: ಸಚಿವಾಲಯ
ಹೊಸದಿಲ್ಲಿ: ಕಳೆದ 5 ವರ್ಷಗಳಲ್ಲಿ ದೇಶಾದ್ಯಂತ ಒಟ್ಟು 140 ಖಾಸಗಿ ವಿಶ್ವವಿದ್ಯಾನಿಲಯಗಳನ್ನು ಆರಂಭಿಸಲಾಗಿದೆ. ಇವುಗಳಲ್ಲಿ ಅತ್ಯಧಿಕ ವಿಶ್ವವಿದ್ಯಾನಿಲಯಗಳನ್ನು ಗುಜರಾತ್ ನಲ್ಲಿ ಸ್ಥಾಪಿಸಲಾಗಿದೆ. ಅನಂತರ ಕ್ರಮವಾಗಿ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶಗಳಲ್ಲಿ ಆರಂಭಿಸಲಾಗಿದೆ ಎಂದು ಶಿಕ್ಷಣ ಸಚಿವಾಲಯದ ಅಂಕಿ-ಅಂಶಗಳು ತಿಳಿಸಿವೆ.
ಕಳೆದ 5 ವರ್ಷಗಳಲ್ಲಿ ಗುಜರಾತ್ ನಲ್ಲಿ 28 ಖಾಸಗಿ ವಿಶ್ವವಿದ್ಯಾನಿಲಯಗಳನ್ನು ಆರಂಭಿಸಲಾಗಿದೆ. ಇದೇ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 15, ಮಧ್ಯಪ್ರದೇಶದಲ್ಲಿ 14 ಹಾಗೂ ಕರ್ನಾಟಕದಲ್ಲಿ 10 ವಿಶ್ವವಿದ್ಯಾನಿಲಯಗಳನ್ನು ಆರಂಭಿಸಲಾಗಿದೆ ಎಂದು ಅದು ಹೇಳಿದೆ.
‘‘ಸಂಬಂಧಿತ ರಾಜ್ಯದ ಶಾಸನ ಸಭೆಗಳು ಅಂಗೀಕರಿಸಿದ ಕಾಯ್ದೆ ಹಾಗೂ ಸಂಬಂಧಿತ ರಾಜ್ಯ ಸರಕಾರ ಜಾರಿಗೊಳಿಸಿದ ಅಧಿಸೂಚನೆ ಹಿನ್ನೆಲೆಯಲ್ಲಿ ಖಾಸಗಿ ವಿಶ್ವವಿದ್ಯಾನಿಲಯಗಳನ್ನು ಆರಂಭಿಸಲಾಗಿದೆ’’ ಎಂದು ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
‘‘ಖಾಸಗಿ ವಿಶ್ವವಿದ್ಯಾನಿಯಗಳ ಹೆಸರುಗಳನ್ನು ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ಕಾಯಿದೆ 1956ರ ಸೆಕ್ಷನ್ 2 (ಎಫ್)ರ ಪ್ರಕಾರ ಕಾಯ್ದೆಯ ಪ್ರತಿಯನ್ನು ಹಾಗೂ ವಿಶ್ವವಿದ್ಯಾನಿಲಯದಿಂದ ಅಧಿಸೂಚನೆಯನ್ನು ಸ್ವೀಕರಿಸಿದ ಬಳಿಕ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಸೇರಿಸಲಾಗಿದೆ’’ ಎಂದು ಅವರು ಹೇಳಿದ್ದಾರೆ.
ಇಂತಹ ಖಾಸಗಿ ವಿಶ್ವವಿದ್ಯಾನಿಲಯಗಳು ವಿಶ್ವವಿದ್ಯಾನಿಲಯದ ಅನುದಾನ ಆಯೋಗದ ನಿರ್ದಿಷ್ಟ ಅನುಮೋದನೆ ಇಲ್ಲದೆಯೂ ಸಾಮಾನ್ಯ ಪದವಿ ಪ್ರದಾನ ಮಾಡುವ ಅಧಿಕಾರವನ್ನು ಹೊಂದಿದೆ.
‘‘ಆದರೆ, ವೃತ್ತಿಪರ ಹಾಗೂ ವೈದ್ಯಕೀಯ ಶಿಕ್ಷಣ ನೀಡಲು ಸಂಬಂಧಿಸಿದ ಶಾಸನಬದ್ಧ ಸಂಸ್ಥೆಗಳು ಅನುಮೋದನೆ ನೀಡಬೇಕು. ಅಂತಹ ಶಿಕ್ಷಣವನ್ನು ಆಲ್ ಇಂಡಿಯನ್ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್, ನ್ಯಾಷನಲ್ ಮೆಡಿಕಲ್ ಕಮಿಷನ್ ಹಾಗೂ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದಂತಹ ಸಂಬಂಧಿತ ಸಂಸ್ಥೆಗಳ ನಿಯಮಗಳು ಈ ಶಿಕ್ಷಣವನ್ನು ನಿಯಂತ್ರಿಸುತ್ತವೆ’’ ಎಂದು ಅವರು ಹೇಳಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಚತ್ತೀಸ್ ಗಡದಲ್ಲಿ 7 ಖಾಸಗಿ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲಾಗಿದೆ. ಇದೇ ಅವಧಿಯಲ್ಲಿ ಜಾರ್ಖಂಡ್ ಹಾಗೂ ರಾಜಸ್ಥಾನದಲ್ಲಿ 5 ವಿಶ್ವವಿದ್ಯಾನಿಲಯಗಳನ್ನು ಆರಂಭಿಸಲಾಗಿದೆ. ಬಿಹಾರ, ಒಡಿಶಾ, ಉತ್ತರಾಖಂಡ ಹಾಗೂ ತೆಲಂಗಾಣದಲ್ಲಿ ತಲಾ 5, ಆಂಧ್ರಪ್ರದೇಶ, ಹರ್ಯಾಣ, ಮಣಿಪುರ, ಒಡಿಶಾ, ತಮಿಳುನಾಡು, ಸಿಕ್ಕಿಂ ಹಾಗೂ ಉತ್ತರಪ್ರದೇಶದಲ್ಲಿ ತಲಾ 4 ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.