ಬಿಜೆಪಿಗೆ 170 ಕೋಟಿ ರೂ. ದೇಣಿಗೆ ನೀಡಿದ ನಂತರ ವಾದ್ರಾ ಭೂವ್ಯವಹಾರದಲ್ಲಿ ಕ್ಲೀನ್ ಚಿಟ್ ಪಡೆದ ಡಿಎಲ್ಎಫ್
ಹೊಸದಿಲ್ಲಿ: ಗುರುಗ್ರಾಮದಲ್ಲಿ ಭೂವ್ಯವಹಾರಗಳಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಡೆದಿದೆ ಎಂದು ಹರ್ಯಾಣ ಪೊಲೀಸರು ಸೆಪ್ಟೆಂಬರ್ 2018ರಲ್ಲಿ ಉದ್ಯಮಿ ರಾಬರ್ಟ್ ವಾದ್ರಾ ಹಾಗೂ ರಿಯಲ್ ಎಸ್ಟೇಟ್ ಉದ್ಯಮವಾದ ಡಿಎಲ್ಎುಫ್ ಸಮೂಹ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಅಳಿಯ, ರಾಬರ್ಟ್ ವಾದ್ರಾ ಭಾಗಿಯಾಗಿದ್ದ ಭೂವ್ಯವಹಾರವು 2014ರ ಚುನಾವಣೆಯಲ್ಲಿ ಪ್ರಚಾರದ ವಿಷಯವಾಗಿ ಬದಲಾಗಿತ್ತು. ಇದರಿಂದಾಗಿ ಬಿಜೆಪಿಯು ಕಾಂಗ್ರೆಸ್ ನಿಂದ ಅಧಿಕಾರ ಕಸಿದುಕೊಳ್ಳಲು ಸಾಧ್ಯವಾಗಿತ್ತು.
ಐದು ವರ್ಷಗಳ ಬಳಿಕ ಈ ಪ್ರಕರಣವು ಆಶ್ಚರ್ಯಕರ ತಿರುವು ಪಡೆದುಕೊಂಡಿತು. ಭೂ ವ್ಯವಹಾರಗಳಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಎಪ್ರಿಲ್ 2023ರಲ್ಲಿ ಹೈಕೋರ್ಟ್ ಗೆ ರಾಜ್ಯ ಬಿಜೆಪಿ ಸರಕಾರವು ತಿಳಿಸಿತು. ಇದರ ಬೆನ್ನಿಗೇ ನಾನು ದೋಷಮುಕ್ತನಾಗಿದ್ದೇನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವಾದ್ರಾ ಪ್ರತಿಪಾದಿಸಿದಾಗ, ಬಿಜೆಪಿ ನೇತೃತ್ವದ ಹರ್ಯಾಣ ಸರಕಾರವು ತಾನು ಯಾವುದೇ ಆರೋಪಿಗೆ ಕ್ಲೀನ್ ಚಿಟ್ ನೀಡಿಲ್ಲ ಎಂದು ಸ್ಪಷ್ಟೀಕರಣ ನೀಡಿತ್ತು.
ಈಗ, ಭಾರತೀಯ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಚುನಾವಣಾ ಬಾಂಡ್ ಗಳ ದತ್ತಾಂಶದ ಪ್ರಕಾರ, ಡಿಎಲ್ಎಫ್ ಸಮೂಹವು ಅಕ್ಟೋಬರ್ 2019ರಿಂದ ನವೆಂಬರ್ 2022ರ ನಡುವೆ ಬಿಜೆಪಿಗೆ ರೂ. 170 ಕೋಟಿ ದೇಣಿಗೆ ನೀಡಿರುವುದು ಬಹಿರಂಗಗೊಂಡಿದೆ.
ಚುನಾವಣಾ ಬಾಂಡ್ ಗಳನ್ನು ಮೂರು ಸಂಸ್ಥೆಗಳು ಖರೀದಿಸಿವೆ: ಡಿಎಲ್ಎಫ್ ಕಮರ್ಷಿಯಲ್ ಡೆವೆಲಪರ್ಸ್ ಲಿಮಿಟೆಡ್, ಡಿಎಲ್ಎಫ್ ಗಾರ್ಡನ್ ಸಿಟಿ ಇಂದೋರ್ ಪ್ರೈವೇಟ್ ಲಿಮಿಟೆಡ್ ಹಾಗೂ ಡಿಎಲ್ಎಫ್ ಲಕ್ಷುರಿ ಹೋಮ್ಸ್ ಲಿಮಿಟೆಡ್.
ಈ ಎಲ್ಲ ಚುನಾವಣಾ ಬಾಂಡ್ ಗಳ ಏಕೈಕ ಫಲಾನುಭವಿ ಬಿಜೆಪಿಯಾಗಿದ್ದು, ಈ ರಿಯಲ್ ಎಸ್ಟೇಟ್ ಸಂಸ್ಥೆಯು ಬೇರೆ ಯಾವ ರಾಜಕೀಯ ಪಕ್ಷಗಳಿಗೂ ದೇಣಿಗೆ ನೀಡಿಲ್ಲ.
‘ಕ್ಲೀನ್ ಚಿಟ್’
ಗುರುವಾರ ಲಭ್ಯವಾಗಿರುವ ದತ್ತಾಂಶಗಳ ಪ್ರಕಾರ,ಡಿಎಲ್ಎಹಫ್ ಸಮೂಹವು ಅಕ್ಟೋಬರ್2019ರಲ್ಲಿ ತನ್ನ ಮೊತ್ತ ಮೊದಲ ದೇಣಿಗೆಯನ್ನು ಬಿಜೆಪಿಗೆ ನೀಡಿದೆ. ಇದಾದ ನಂತರ, 2020, 2021 ಹಾಗೂ 2022ರಲ್ಲಿ ಬಿಜೆಪಿಗೆ ದೇಣಿಗೆ ನೀಡುವುದನ್ನು ಮುಂದುವರಿಸಿದೆ. ತನ್ನ ಕೊನೆಯ ಸುತ್ತಿನ ದೇಣಿಗೆಯನ್ನು ನವೆಂಬರ್ 2022ರಂದು ಬಿಜೆಪಿಗೆ ನೀಡಿದೆ.
ಐದು ತಿಂಗಳ ನಂತರ, ಎಪ್ರಿಲ್ 19, 2023ರಂದು ಚುನಾಯಿತ ಪ್ರತಿನಿಧಿಗಳಿಗೆ ಸಂಬಂಧಿಸಿದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಹರ್ಯಾಣ ಬಿಜೆಪಿ ಸರಕಾರವು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಗೆ “2012ರಲ್ಲಿ ವಾದ್ರಾ ಮತ್ತು ಡಿಎಲ್ಎದಫ್ ನಡುವೆ ನಡೆದಿರುವ ಭೂ ವ್ಯವಹಾರದಲ್ಲಿ ಯಾವುದೇ ನಿರ್ಬಂಧಗಳು/ನಿಯಮಗಳನ್ನು ಉಲ್ಲಂಘಿಸಲಾಗಿಲ್ಲ” ತಿಳಿಸಿತ್ತು.
ನಾನು ದೋಷಮುಕ್ತನಾಗಿದ್ದೇನೆ ಎಂದು ವಾದ್ರಾ ಸಾಮಾಜಿಕ ಮಾಧ್ಯಿಮದಲ್ಲಿ ಪ್ರತಿಪಾದಿಸಿದಾಗ, ಅದಕ್ಕೆ ಪ್ರತಿಯಾಗಿ ಬಿಜೆಪಿ ಸರಕಾರವು, ತಾನು ವಾದ್ರಾಗಾಗಲಿ ಅಥವಾ ಡಿಎಲ್ಎಫ್ ಸಮೂಹಕ್ಕಾಗಲಿ ನ್ಯಾಯಾಲಯದ ಮುಂದೆ ಯಾವುದೇ ಕ್ಲೀನ್ ಚಿಟ್ ನೀಡಿಲ್ಲ ಎಂದು ವಾದ್ರಾರ ಹೇಳಿಕೆಯನ್ನು ಅಲ್ಲಗಳೆದಿತ್ತು. ಈ ಪ್ರಕರಣವನ್ನು ಮತ್ತಷ್ಟು ತನಿಖೆಗೊಳಪಡಿಸಲು ತಾನು ವಿಶೇಷ ತನಿಖಾ ತಂಡವನ್ನು ರಚಿಸಿರುವುದಾಗಿಯೂ ಅದು ಹೇಳಿಕೊಂಡಿತ್ತು.
ನವೆಂಬರ್ 2023ರಲ್ಲಿ “ಪ್ರಕರಣದಲ್ಲಿನ ವಿಚಾರಣೆಯು ಕಳೆದ ಐದು ವರ್ಷಗಳಿಂದ ತೆವಳುತ್ತಿದೆ ಹಾಗೂ ಆದಷ್ಟೂ ಶೀಘ್ರವಾಗಿ ತನಿಖೆಯನ್ನು ಮುಕ್ತಾಯಗೊಳಿಸಬೇಕು” ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.
ಅದೇ ತಿಂಗಳಲ್ಲಿ ಮತ್ತೊಂದು ಮೂಲಭೂತ ಸೌಕರ್ಯ ಸಂಸ್ಥೆಯಾದ ಸೂಪರ್ ಟೆಕ್ ಸಮೂಹ ಸಂಸ್ಥೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಗುರುಗ್ರಾಮದಲ್ಲಿನ ಡಿಎಲ್ಎಫ್ ಕಚೇರಿಗಳ ತಪಾಸಣೆ ನಡೆಸಿತ್ತು.
ಇದಾದ ನಂತರ, ಈ ಸಮೂಹ ಸಂಸ್ಥೆಯು 2023 ಮತ್ತು 2024ರ ನಡುವೆ ಚುನಾವಣಾ ಬಾಂಡ್ ಮೂಲಕ ಯಾವುದೇ ದೇಣಿಗೆಯನ್ನು ನೀಡಿರುವುದು ಕಂಡು ಬಂದಿಲ್ಲ.
ಸೌಜನ್ಯ: scroll.in