ಆಗ್ರಾ-ಲಕ್ನೊ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಭೀಕರ ಅಪಘಾತ: 18 ಮಂದಿ ಮೃತ್ಯು, 19 ಮಂದಿಗೆ ಗಾಯ

Update: 2024-07-10 05:40 GMT

Photo: PTI

ಉನ್ನಾಂವ್ (ಉತ್ತರ ಪ್ರದೇಶ): ಬುಧವಾರ ಮುಂಜಾನೆ ಬಸ್ ಮತ್ತು ಹಾಲಿನ ಟ್ಯಾಂಕರ್ ನಡುವೆ ಸಂಭವಿಸಿರುವ ಭೀಕರ ಅಪಘಾತದಲ್ಲಿ 18 ಮಂದಿ ಮೃತಪಟ್ಟು, 19 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಉನ್ನಾಂವ್ ಜಿಲ್ಲೆಯ ಬಂಗಾರ್ಮುವ ಪ್ರದೇಶದಲ್ಲಿನ ಆಗ್ರಾ-ಲಕ್ನೊ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಇಂದು ಮುಂಜಾನೆ 5 ಗಂಟೆಯ ಸಮಯದಲ್ಲಿ ಬಿಹಾರದ ಮೋತಿಹಾರಿಯಿಂದ ದಿಲ್ಲಿಗೆ ವೇಗವಾಗಿ ಪ್ರಯಾಣಿಸುತ್ತಿದ್ದ ಬಸ್ ಒಂದು ಬೆಹ್ತಾ ಮುಝಾವರ್ ಪೊಲೀಸ್ ಠಾಣೆ ವ್ಯಾಪ್ತಿಯ ಜೋಜಿಕೋಟ್ ಗ್ರಾಮದ ಬಳಿ ಹಾಲಿನ ಟ್ಯಾಂಕರ್‌ಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ ಎಂದು ಜಿಲ್ಲಾಧಿಕಾರಿ ಗೌರಂಗ್ ರಾಠಿ ತಿಳಿಸಿದ್ದಾರೆ.

ಈ ಘಟನೆಯ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದೂ ಅವರು ಹೇಳಿದ್ದಾರೆ.

ಘಟನೆಯಲ್ಲಿ ಮೃತಪಟ್ಟವರ ಪೈಕಿ 14 ಮಂದಿ ಪುರುಷರು, ನಾಲ್ಕು ಮಂದಿ ಮಹಿಳೆಯರು ಹಾಗೂ ಒಂದು ಮಗು ಸೇರಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬೆಹ್ತಾ ಮುಝಾವರ್ ಠಾಣೆಯ ಪೊಲೀಸ್ ಅಧಿಕಾರಿ, "ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಎಲ್ಲ ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಿಎಚ್‌ಸಿ ಬಂಗಾರ್ಮಾವುಗೆ ದಾಖಲಿಸಲಾಯಿತು" ಎಂದು ತಿಳಿಸಿದ್ದಾರೆ.

ಈ ನಡುವೆ, ಅಪಘಾತಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಘಟನಾ ಸ್ಥಳಕ್ಕೆ ತಕ್ಷಣವೇ ತೆರಳಿ, ಪರಿಹಾರ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡಾ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News