'ಮೃತ' ಆರೋಪಿಯನ್ನು 20 ವರ್ಷ ಬಳಿಕ ಬಂಧಿಸಿದ ಪೊಲೀಸರು!

Update: 2023-10-18 02:14 GMT

Photo : timesofindia

ಹೊಸದಿಲ್ಲಿ: ಈಶಾನ್ಯ ದೆಹಲಿಯ ಬವಾನಾದಲ್ಲಿ 2004ರ ಮೇ ತಿಂಗಳಲ್ಲಿ ವ್ಯಕ್ತಿಯೊಬ್ಬನನ್ನು ಪತ್ನಿಯ ಪ್ರಿಯಕರನ ಸಹಾಯದಿಂದ ಕೊಲೆ ಮಾಡಲಾಗಿತ್ತು. ಆರೋಪಿ ಈ ಕೃತ್ಯ ಎಸಗುವ ಮೊದಲು ಭಾರತೀಯ ನೌಕಾಪಡೆಯಲ್ಲಿ ಸ್ಟಿವರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದ್ದು, ಈತನ ವಿರುದ್ಧ ಕೆಲ ಸಣ್ಣಪುಟ್ಟ ಪ್ರಕರಣಗಳೂ ದಾಖಲಾಗಿದ್ದವು. ಈತನ ಬಂಧನಕ್ಕೆ ಪೊಲೀಸರು ಜಾಲ ಬೀಸುತ್ತಿದ್ದಂತೆ, 43 ವರ್ಷದ ಆರೋಪಿ ಜೋಧಪುರಕ್ಕೆ ಲಾರಿಯನ್ನು ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಲಾರಿಗೆ ಬೆಂಕಿ ಹತ್ತಿಕೊಂಡು ಆತ ಸಜೀವ ದಹನವಾಗಿದ್ದ ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಹತ್ಯೆ ಪ್ರಕರಣದ ತನಿಖೆ ಅಂತ್ಯಗೊಳಿಸಿದ್ದರು.

ರಾಜೇಶ್ ಎಂಬುವವರನ್ನು ಹತ್ಯೆ ಮಾಡಿದ ಎರಡು ದಶಕಗಳ ಬಳಿಕ ಆರೋಪಿ ಬಾಲೇಶ್ ಕುಮಾರ್ ಮೃತಪಟ್ಟಿಲ್ಲ ಎನ್ನುವ ಅಂಶ ಬಹಿರಂಗವಾಗಿದೆ. ನಜಾಫ್ಗಡದ ಆಸ್ತಿ ಡೀಲರ್ ಅಮನ್ ಸಿಂಗ್ (63) ಎಂಬಾತ ನಿಜವಾದ ಆರೋಪಿಯಾಗಿದ್ದು, ಈತ ಟ್ರಕ್ನಲ್ಲಿ ಇಬ್ಬರು ಕಾರ್ಮಿಕರನ್ನು ಸುಟ್ಟುಹಾಕಿ ತಾನೇ ಬೆಂಕಿಗೆ ಆಹುತಿಯಾದ ಕಥೆ ಕಟ್ಟಿದ್ದ ಎನ್ನುವ ಸುಳಿವು ಪೊಲೀಸರಿಗೆ ಲಭ್ಯವಾಯಿತು.

ಬಾಲೇಶ್ ಕುಮಾರ್ ಜೀವಂತ ಇರುವುದು ಆತನ ಪತ್ನಿಗೆ ಗೊತ್ತಿತ್ತು. ಆದರೆ ಮರಣ ಪ್ರಯೋಜನ ಮತ್ತು ವಿಮಾ ಪರಿಹಾರವನ್ನು ಪಡೆದು, ಪತಿಯ ನೌಕಾಪಡೆ ಪಿಂಚಣಿಯಲ್ಲಿ 20 ವರ್ಷ ಕಾಲ ಜೀವನ ಸಾಗಿಸಿದ್ದಳು ಎಂದು ಪೊಲೀಸರು ವಿವರಿಸಿದ್ದಾರೆ.

ಪೊಲೀಸ್ ಜಾಲದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆರೋಪಿ ಕುಮಾರ್ ತನ್ನದೇ ಸಾವಿನ ಕಥೆ ಹೆಣೆದಿದ್ದ. ಇಬ್ಬರು ಕೂಲಿ ಕಾರ್ಮಿಕರನ್ನು ಪಡೆದು ಅವರಿಗೆ ಮದ್ಯಪಾನ ಮಾಡಿಸಿ ಟ್ರಕ್ನಲ್ಲಿ ಕೂರಿಸಿ ಬೆಂಕಿ ಹಚ್ಚಿ ಅವರನ್ನು ಹತ್ಯೆ ಮಾಡಿದ್ದ. ಬಳಿಕ ಸುಟ್ಟು ಕರಕಲಾಗಿದ್ದ ದೇಹ ತನ್ನದೇ ಎನ್ನುವುದನ್ನು ಸಾಬೀತುಪಡಿಸಲು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದ. ಬೇರೆ ವ್ಯಕ್ತಿಯ ಹೆಸರಿನಲ್ಲಿ ಗುರುತಿನ ಚೀಟಿ ಪಡೆದು ಪ್ರತ್ಯೇಕವಾಗಿ ಜೀವಿಸುತ್ತಿದ್ದ. ಆತನ ಪತ್ನಿ ಪಿಂಚಣಿ ಹಣದಲ್ಲಿ ಜೀವನ ಸಾಗಿಸುತ್ತಿದ್ದಳು.

ಆದರೆ 2000ನೇ ಇಸವಿಯಲ್ಲಿ ಈತ ನಡೆಸಿದ್ದ ಸುಲಿಗೆ ಪ್ರಕರಣವೊಂದರ ವಿಚಾರಣೆ ನಡೆಸಿದಾಗ, ಈತನ ನಿಜ ಬಣ್ಣ ಬಯಲಾಯಿತು. ಕುಮಾರ್ ಅಮನ್ ಸಿಂಗ್ ಎಂಬ ಹೆಸರಿನಲ್ಲಿ ಆಧಾರ್ ಕಾರ್ಡ್, ಪಾನ್ಕಾರ್ಡ್, ಚಾಲನಾ ಲೈಸನ್ಸ್ ಪಡೆದಿದ್ದ. ಇದೀಗ ಆತನ ಪತ್ನಿ ತಲೆ ಮರೆಸಿಕೊಂಡಿದ್ದಾಳೆ. ಆಕೆಗೆ ರಾಜೇಶ್ ಹತ್ಯೆಯ ವಿಷಯ ತಿಳಿದಿತ್ತು ಹಾಗೂ ಗಂಡನ ಚಲನ ವಲನಗಳ ಬಗ್ಗೆಯೂ ಅರಿವು ಇತ್ತು. ಆದಾಗ್ಯೂ ನಿವೃತ್ತ ನೌಕಾಪಡೆ ಸಿಬ್ಬಂದಿಯ ಪತ್ನಿಯಾಗಿ ಪಿಂಚಣಿ ಪಡೆಯುತ್ತಿದ್ದಳು ಎಂದು ತನಿಖಾಧಿಕಾರಿ ಸಿಪಿ ಯಾದವ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News