2019ರ ಗಣಿಗಾರಿಕೆ ಪ್ರಕರಣ: ಅಖಿಲೇಶ್ ಗೆ ಸಿಬಿಐ ಸಮನ್ಸ್

Update: 2024-02-28 16:24 GMT

ಅಖಿಲೇಶ್ ಯಾದವ್ | Photo: PTI 

ಹೊಸದಿಲ್ಲಿ: ಉತ್ತರಪ್ರದೇಶದ ಹಮೀರ್ಪುರ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ 2019ರಲ್ಲಿ ದಾಖಲಾದ ಪ್ರಕರಣವೊಂದರಲ್ಲಿ, ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಯು ಬುಧವಾರ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.

ತನ್ನೆದುರು ಓರ್ವ ‘‘ಸಾಕ್ಷಿ’’ಯಾಗಿ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಸಿಬಿಐಯು ಉತ್ತರಪ್ರದೇಶದ ಪ್ರತಿಪಕ್ಷ ನಾಯಕನಿಗೆ ಸೂಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಆರ್ಪಿಸಿಯ 160ನೇ ಪರಿಚ್ಛೇದದಡಿಯಲ್ಲಿ ಈ ಸಮನ್ಸ್ ನೀಡಲಾಗಿದೆ. ಪ್ರಕರಣದೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳ ಅಥವಾ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲು ಈ ಪರಿಚ್ಛೇದದಡಿಯಲ್ಲಿ ಸಮನ್ಸ್ ನೀಡಲಾಗುತ್ತದೆ.

ಸಿಬಿಐಯು 2019 ಜನವರಿಯಲ್ಲಿ ಉತ್ತರಪ್ರದೇಶದ ಐಎಎಸ್ ಅಧಿಕಾರಿ ಬಿ. ಚಂದ್ರಕಲಾ, ಅಂದಿನ ಸಮಾಜವಾದಿ ಪಕ್ಷದ ನಾಯಕ ರಮೇಶ್ ಕುಮಾರ್ ಮಿಶ್ರಾ ಮತ್ತು ಸಂಜಯ್ ದೀಕ್ಷಿತ್ ಸೇರಿದಂತೆ 11 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿತ್ತು.

ಉತ್ತರಪ್ರದೇಶದ ಶಾಮ್ಲಿ, ಹಮೀರ್ಪುರ, ಸಹರಾಣ್ಪುರ, ದೇವರಿಯ, ಫತೇಹ್ಪುರ, ಸಿದ್ಧಾರ್ಥ ನಗರ ಮತ್ತು ಕೌಶಾಂಬಿ ಜಿಲ್ಲೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆಯ ಬಗ್ಗೆ ಸಿಬಿಐ ಮೊಕದ್ದಮೆ ದಾಖಲಿಸಿಕೊಂಡಿತ್ತು. ಅಲಹಾಬಾದ್ ಹೈಕೋರ್ಟ್ನ ಆದೇಶದಂತೆ ಸಿಬಿಐಯು 2017ರಲ್ಲಿ ಏಳು ಪ್ರಾಥಮಿಕ ತನಿಖೆಗಳನ್ನು ದಾಖಲಿಸಿಕೊಂಡಿತ್ತು. ಅವುಗಳ ಆಧಾರದಲ್ಲಿ 2019ರ ಜನವರಿಯಲ್ಲಿ ಮೂರು ಎಫ್ಐಆರ್ಗಳನ್ನು ದಾಖಲಿಸಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News