2020ರ ದಿಲ್ಲಿ ಗಲಭೆ: ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ ಜು. 24ಕ್ಕೆ ಮುಂದೂಡಿಕೆ
ಹೊಸದಿಲ್ಲಿ : 2020 ಫೆಬ್ರವರಿಯಲ್ಲಿ ನಡೆದ ಈಶಾನ್ಯ ದಿಲ್ಲಿ ಗಲಭೆಯ ಹಿಂದಿನ ಪಿತೂರಿಯ ಆರೋಪಕ್ಕೆ ಸಂಬಂಧಿಸಿದ ಯುಎಪಿಎ ಪ್ರಕರಣದಲ್ಲಿ ಜಾಮೀನು ಕೋರಿ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ (JNU)ದ ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯನ್ನು ಜುಲೈ 24ರಂದು ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಹಾಗೂ ಎಂ.ಎಂ. ಸುಂದರೇಶ್ ಅವರನ್ನು ಒಳಗೊಂಡ ಪೀಠ ಅರ್ಜಿಯ ವಿಚಾರಣೆ ನಡೆಸಿದ ಸಂದರ್ಭ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ದಿಲ್ಲಿ ಪೊಲೀಸರು ಮನವಿ ಮಾಡಿದರು.
ದಿಲ್ಲಿ ಪೊಲೀಸರ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ರಜತ್ ನಾಯರ್, ಈ ಪ್ರಕರಣದಲ್ಲಿ ಪ್ರತಿ ಅಫಿಡಾವಿಟ್ ಸಲ್ಲಿಸಲು ತನಗೆ ಸ್ಪಲ್ಪ ಕಾಲಾವಕಾಶ ನೀಡುವಂತೆ ಪೀಠಕ್ಕೆ ಮನವಿ ಮಾಡಿದರು. ‘‘ಜಾಮೀನಿನ ವಿಷಯದಲ್ಲಿ ಯಾವ ಪ್ರತಿ ಅಪಿಡಾವಿಟ್ ಅನ್ನು ಸಲ್ಲಿಸುತ್ತೀರಿ.
ಈ ವ್ಯಕ್ತಿ ಎರಡು ವರ್ಷ ಹಾಗೂ 10 ತಿಂಗಳಿಂದ ಜೈಲಿನ ಒಳಗಿದ್ದಾರೆ’’ ಎಂದು ಖಾಲಿದ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಹೇಳಿದರು. ಈ ವಿಷಯದಲ್ಲಿ ಪ್ರತಿ ಅಫಿಡವಿಟ್ ಸಲ್ಲಿಸಲು ಸ್ಪಲ್ಪ ಸಮಯ ನೀಡುವಂತೆ ತಾನು ಮನವಿ ಮಾಡುತ್ತೇನೆ ಎಂದು ನಾಯರ್ ಹೇಳಿದರು.
ದೋಷಾರೋಪ ಪಟ್ಟಿ ಭಾರೀ ಗಾತ್ರದಲ್ಲಿದೆ. ಸಾವಿರಾರು ಪುಟಗಳಿವೆ ಎಂದು ಹೇಳಿದ ಅವರು, ಸ್ಪಲ್ಪ ಕಾಲಾವಕಾಶ ನೀಡುವಂತೆ ಪೀಠಕ್ಕೆ ಮನವಿ ಮಾಡಿದರು. ‘‘ಅಫಿಡಾವಿಟ್ ಇಂದು ಸಿದ್ಧವಾಗಿರಬೇಕಿತ್ತು’’ ಎಂದು ಪೀಠ ಅಭಿಪ್ರಾಯಿಸಿತು ಹಾಗೂ ವಿಚಾರಣೆಯನ್ನು ಜುಲೈ 24ಕ್ಕೆ ಮುಂದೂಡಿತು.